Advertisement

Peace: ಪ್ರಕೃತಿ ಮಾತೆಯ ಮಡಿಲಲ್ಲಿದೆ ನೆಮ್ಮದಿ

04:00 PM Jun 26, 2024 | Team Udayavani |

ಎರಡು ವಾರಗಳ ಹಿಂದೆ ನಾನು ಶೃಂಗೇರಿ ದೇವಿಯ ದರ್ಶನಕ್ಕೆ ಹೋಗಿದ್ದೆ. ಶೃಂಗೇರಿ ಎಂದಾಗ ನೆನಪಾಗುವುದೇ ತುಂಗಭದ್ರ ನದಿ. ಶೃಂಗೇರಿಗೆ ಇನ್ನಷ್ಟು ಮೆರುಗನ್ನು ನೀಡುವುದೇ ಅಲ್ಲಿ ಮತ್ಸé ಸಂತತಿ ನೋಟ. ಅವುಗಳು ಆಹಾರವನ್ನು ತಿನ್ನಲು ದಡದ ಹತ್ತಿರ ಬಂದು ಕೈಯಿಂದಲೇ ಕೇಳಿ ಪಡೆಯುವ ರೀತಿ.

Advertisement

ಆದರೆ ಶೃಂಗೇರಿಗೆ ತಲುಪುವ ಮುಂಚಿತವಾಗಿ ಬಿಸಿ ಗಾಳಿಯನ್ನು ಪಡೆಯುತ್ತಿದ್ದ ನಮಗೆ ಪಶ್ಚಿಮ ಘಟ್ಟಗಳ ಒಳ ನುಸುಳುವ ಜಾಗಗಳಲ್ಲಿ ಚೆಕ್‌ ಪೋಸ್ಟ್‌ಗಳ ಮುಖ್ಯದ್ವಾರ ತೆರೆದಾಗ ಸ್ವರ್ಗದ ಬಾಗಿಲೇ ತೆರೆದ ರೀತಿ ಭಾಸವಾಯಿತು. ಸೂರ್ಯನ ರಶ್ಮಿ ನೆಲಕ್ಕೆ ತಾಗದ ರೀತಿಯಲ್ಲಿ ಆವೃತವಾದ ಮರ-ಗಿಡಗಳು, ತಂಪಾದ ಗಾಳಿ, ನಡು-ನಡುವೆ ಬದಿಯಲ್ಲಿ ನದಿ ನೀರಿನ ಹರಿವಿನ ಸಿಂಚನ, ಕಾಫಿ ಗಿಡಗಳ ಕಲರವ, ಸೀಬೆ ಹಣ್ಣಿನ ಮರದ ನೋಟ, ಬೆಟ್ಟ-ಗುಡ್ಡಗಳ ನೋಟ ಆಹಾ! ಅದೊಂದು ಅದ್ಭುತ ಲೋಕದ ರೀತಿಯಾಗಿ ಕಂಡಿತು.

ಮೊಬೈಲ್‌ ನೆಟ್‌ವರ್ಕ್‌ ಇಲ್ಲದಿದ್ದರೂ ಯಾವುದೇ ಬೋರು ಎಂಬ ಸಂಗತಿಯೇ ಕಾಣಲಿಲ್ಲ. ಪ್ರಕೃತಿ ಮಾತೆಯ ಶೃಂಗಾರ ಪ್ರಧಾನವಾದ ಮರ-ಗಿಡಗಳ ಹಾಸುಗಂಬಳಿಗಳನ್ನು ಕಂಡಾಗ, ಭೂಮಿಯ ಮೇಲಿನ ಪ್ರಕೃತಿ ಮಡಿಲಿನ ಸೌಂದರ್ಯದೊಂದಿಗೆ ಈ ಆಧುನಿಕ ಮಾನವರು ಬೆರೆಯುತ್ತಿಲ್ಲವಲ್ಲ ಅನ್ನುವ ಬೇಸರ ಆವರಿಸಿತು.

ಪಟ್ಟಣಗಳಲ್ಲಿ ಬದುಕುವ ಜನರಿಗಿಂತಲೂ ಆ ಪಶ್ಚಿಮ ಘಟ್ಟದ ಭಾಗಗಳಲ್ಲಿ ನೆಟ್‌ವರ್ಕ್‌ ಸಂಪರ್ಕಗಳಿಲ್ಲದೆ ಅಲ್ಲಿನ ಜನರು ಆರೋಗ್ಯದೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದಾರೆ.

ಪ್ರಕೃತಿ ಮಾತೆಯ ಸೌಂದರ್ಯದ ದರ್ಶನವಾದ ಬಳಿಕವಾಗಿ ಶೃಂಗೇರಿಯ ಶಾರದಾಂಬ ದೇವಿ ದರ್ಶನವನ್ನು ಪಡೆದೆವು. ಒಬ್ಬ ಮನುಷ್ಯ ಆಧುನಿಕ ಜಗತ್ತಿನಲ್ಲಿ ಮೊಬೈಲ್‌ಗೆ ಎಷ್ಟು ಒಗ್ಗಿಕೊಂಡಿದ್ದಾನೆ ಎಂದರೆ ಅದನ್ನು ಹೇಳತಿರದು.

Advertisement

ಮೊಬೈಲ್‌ ಬಳಸಬಾರದು ಎಂದು ಎಷ್ಟೇ ನಾಮಫ‌ಲಕಗಳಿದ್ದರೂ ಮೂರ್ಖರಂತೆ ವರ್ತಿಸುವ ಮಾನವ ಮೊಬೈಲ್‌ ಬಳಸಿಕೊಂಡು ಫೋಟೋ ತೆಗೆಯುತ್ತಿದ್ದರು. ಈ ದೃಶ್ಯವನ್ನು ಕಂಡಾಗ ಮನುಷ್ಯನಿಗೆ ಬುದ್ಧಿಜೀವಿ ಎಂದು ಕರೆಯುವುದು ತಪ್ಪು ತಾನೇ? ಬುದ್ಧಿ ಇದ್ದರೂ ಮನುಷ್ಯ ಮೂಢನಂತೆ ವರ್ತಿಸುತ್ತಾನೆ. ಪ್ರವಾಸಿ ತಾಣಗಳು, ಶ್ರೇಷ್ಠ ಕ್ಷೇತ್ರಗಳ ಸೌಂದರ್ಯ ಇನ್ನು ಉಳಿಯಬೇಕಾದರೆ ಮೊದಲಿಗೆ ಮನುಷ್ಯನ ವರ್ತನೆಯಲ್ಲಿ ಬದಲಾವಣೆ ಬರಲೇಬೇಕಾಗಿದೆ.

ಎಲ್ಲ ಮಠಗಳ ದರ್ಶನವಾದ ಬಳಿಕವಾಗಿ ದೇವಿಯ ಪುಣ್ಯ ಪ್ರಸಾದವಾದ ಅನ್ನವೆಂಬ ಅಮೃತವನ್ನು ಸೇವಿಸಿದೆವು. ಮತ್ತದೇ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬ ಕಾಣುತ್ತಾ ಬರಬಹುದಲ್ಲ ಎಂಬ ವಿಷಯ ನನ್ನ ಮನಸ್ಸಲ್ಲಿ ಇತ್ತು. ಹಿಂತಿರುಗಿ ಬರುವಾಗ ಅದೇ ಆ ತಂಪು ಗಾಳಿಯೇ ತುಂಬಾ ಮುದ ನೀಡುತ್ತಿತ್ತು. ಚೆಕ್‌ ಪೋಸ್ಟ್‌ ತೆರೆದಾಗ ಸ್ವರ್ಗದಿಂದ ನರಕಕ್ಕೆ ಬಂದ ಹಾಗೆ ಅನ್ನಿಸಿತು. ಮತ್ತದೇ ಬಿಸಿ ಗಾಳಿ!….ಇವೆಲ್ಲವನ್ನು ಕಂಡಾಗ ನನಗೆ ಅನಿಸಿದ್ದು ಒಂದೇ, ಪ್ರಕೃತಿ ಮಾತೆಯು ನೀಡುವಷ್ಟು ಖುಷಿ, ನೆಮ್ಮದಿ ಯಾವ ಮಾನವ ನಿರ್ಮಿತ ಜಗತ್ತು ನೀಡಲು ಸಾಧ್ಯವಿಲ್ಲ.

-ತೃಪ್ತಿ ಗುಡಿಗಾರ್‌

ಎಂ.ಪಿ.ಎಂ., ಕಾರ್ಕಳ

 

Advertisement

Udayavani is now on Telegram. Click here to join our channel and stay updated with the latest news.

Next