Advertisement
ಈಶಾನ್ಯ ಭಾರತದಲ್ಲಿರುವ ಸಮಸ್ಯೆಗಳ ಸ್ವರೂಪ ಏನು? ಈಶಾನ್ಯ ಭಾರತದಲ್ಲಿ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ, ಮೇಘಾಲಯ, ತ್ರಿಪುರ, ಮಿಜೋರಾಂ ಎಂಟು ರಾಜ್ಯಗಳಿದ್ದು ಈ ಪ್ರದೇಶಗಳಿಗೂ ಭಾರತದ ಇತರ ಭಾಗಗಳಿಗೂ ಸಂಪರ್ಕವಿಲ್ಲ. ಇದರ ಜತೆಗೆ ಶೇ.98 ಭಾಗದ ಗಡಿಗಳು ಭೂತಾನ್, ಮ್ಯಾನ್ಮಾರ್, ಚೀನ, ನೇಪಾಲ, ಬಾಂಗ್ಲಾದೇಶಕ್ಕೆ ತಾಗಿಕೊಂಡಿದ್ದರೆ ಶೇ.2 ಭಾಗ ಮಾತ್ರ ನಮ್ಮಲ್ಲಿದೆ. ಇದು ಪಶ್ಚಿಮ ಬಂಗಾಲದ ಸಿಲಿಗುರಿಯಲ್ಲಿ. ಇಷ್ಟೇ ಪ್ರದೇಶದ ಸಂಪರ್ಕ ಇರುವುದರಿಂದ “ಚಿಕನ್‌ನೆಕ್’ ಎಂದು ಕರೆಯುವುದು. ಪ್ರಧಾನಿಗಳು ಈಶಾನ್ಯ ರಾಜ್ಯಗಳಿಗೆ ಹೋಗುವುದು ಅಪರೂಪ. ಹೇರಳ ಸಾಂಸ್ಕೃತಿಕ-ಪ್ರಾಕೃತಿಕ ಸಿರಿವಂತಿಕೆಯಿದ್ದರೂ ಒಂದೆಡೆ ಬಡತನ, ಅಭಿವೃದ್ಧಿಯ ಕೊರತೆ, ಇನ್ನೊಂದೆಡೆ 5 ಕೋಟಿ ಜನಸಂಖ್ಯೆಯಲ್ಲಿ ಸುಮಾರು 300 ಪ್ರತ್ಯೇಕತಾವಾದಿ ಗುಂಪುಗಳು ಕಾರ್ಯಾಚರಿಸುತ್ತಿವೆ.
ನಾಗಾಲ್ಯಾಂಡ್ ಪ್ರತ್ಯೇಕತಾವಾದಿ ನಾಯಕರು ಎಲ್ಲ ರಾಜ್ಯ ಗಳಿಗೆ ನಾಯಕತ್ವ ನೀಡುತ್ತಿದ್ದಾರೆ. ಇಲ್ಲಿರುವುದು 5 ಲಕ್ಷ ಜನಸಂಖ್ಯೆ. ಐದು ಮುಖ್ಯ ಪ್ರತ್ಯೇಕತಾವಾದಿ ಸಂಘಟನೆಗಳಿವೆ. ಪ್ರತ್ಯೇಕತಾವಾದಿ ಚಟುವಟಿಕೆ ಆರಂಭವಾದದ್ದೇ ಇಲ್ಲಿ. ಆಗ ಫಿಜೋ ಇದರ ನಾಯಕರಾಗಿದ್ದರು. ಪ್ರತ್ಯೇಕತಾವಾದಿಗಳು ಯುವಕರ ಮನಸ್ಸು ಕೆಡಿಸಿ ದೇಶದ ವಿರುದ್ಧ ಎತ್ತಿಕಟ್ಟುತ್ತಾರೆ. ಇದಕ್ಕೆ ಕೇವಲ ಅಲ್ಲಿನವರನ್ನೇ ಹೊಣೆ ಮಾಡಲಾಗದು. ಭಾರತದ ಇತರ ಭಾಗದವರು, ಕೇಂದ್ರ ಸರಕಾರ ಆ ಪ್ರದೇಶಗಳನ್ನು ನಿರ್ಲಕ್ಷಿಸಿದ್ದಾರೆ. ಆಗ ಸಹಜವಾಗಿ ಇತರರು ಇದರ ಲಾಭ ಪಡೆದುಕೊಳ್ಳುತ್ತಾರೆ. ನಾಗಾಲ್ಯಾಂಡ್ ಸಮಸ್ಯೆ ಬಗೆಹರಿದರೆ ಇತರ ಕಡೆಗಳಲ್ಲಿಯೂ ಸಮಸ್ಯೆ ಬಗೆಹರಿಯುತ್ತದೆಯೆ? ತೆಗೆದುಕೊಂಡ ಕ್ರಮ, ಶಾಂತಿ ಸ್ಥಾಪನೆಯ ಪ್ರಕ್ರಿಯೆ ಯಾವ ಹಂತದಲ್ಲಿದೆ? ನಿಮ್ಮ ಆಶಾವಾದವೇನು?
ನಾಗಾಲ್ಯಾಂಡ್ ಸಮಸ್ಯೆಯನ್ನು ಬಗೆಹರಿಸಿದರೆ ಇತರ ರಾಜ್ಯ ಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಅಲ್ಲಿನ ಪ್ರತ್ಯೇಕತಾವಾದಿ ಗುಂಪುಗಳು ದೇಶವನ್ನೇ ಒಪ್ಪದಿರುವುದರಿಂದ ರಾಜ್ಯ ಸರಕಾರದೊಂದಿಗೆ ಮಾತುಕತೆ ಅಸಾಧ್ಯ. ಪ್ರಧಾನಿಯವರು ಶಾಂತಿ ಮಾತುಕತೆಯ ಪ್ರಸ್ತಾವ ಮುಂದಿರಿಸಿದ್ದಾರೆ. ಇದರಂತೆ ಆಶಾವಾದ ಮೂಡುತ್ತಿದೆ. 17 ವರ್ಷಗಳ ಬಳಿಕ ದೇಶದ ಪ್ರಧಾನಿಯವರು ನಾಗಾಲ್ಯಾಂಡ್‌ಗೆ 2014ರಲ್ಲಿ ಏರ್ಪಡಿಸಿದ “ಹಾರ್ನ್ ಬಿಲ್’ (ಪಕ್ಷಿಯ ಹೆಸರು) ಉತ್ಸವಕ್ಕೆ ಭೇಟಿ ನೀಡಿದರು. ಸುಮಾರು 5,000 ಕೋ.ರೂ. ರಸ್ತೆ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದಾರೆ. ಸುತ್ತಮುತ್ತಲ ದೇಶಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಬೆಳೆಸಿಕೊಂಡಿರುವುದರಿಂದ ಪ್ರತ್ಯೇಕತಾವಾದಿಗಳಿಗೆ ಅಲ್ಲಿಯೂ ಜಾಗವಿಲ್ಲದಂತಾಗಿದೆ. ಉದಾಹರಣೆಗೆ ಬಾಂಗ್ಲಾ, ಭೂತಾನ್ ಜತೆ ಸಂಬಂಧ ವೃದ್ಧಿ ಯಾಗಿದೆ. ಮ್ಯಾನ್ಮಾರ್‌ನಲ್ಲಿ ನಾಗರಿಕ ಆಡಳಿತ ಬಂದಿದೆ. ಯುವಕರು ಶಿಕ್ಷಣವನ್ನು ಪಡೆದು ಬೇರೆ ಬೇರೆ ಕಡೆ ಉದ್ಯೋ ಗದಲ್ಲಿದ್ದಾರೆ. ಒಟ್ಟಾರೆ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ.
Related Articles
ನಾನು 20ನೇ ವಯಸ್ಸಿಗೆ ಉಡುಪಿಯಿಂದ ಮುಂಬಯಿಗೆ ಹೋದೆ. ಅ.ಭಾ. ವಿದ್ಯಾರ್ಥಿ ಪರಿಷತ್ತಿನಲ್ಲಿರುವಾಗ 1967ರಲ್ಲಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದೆ. ಅಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಹೇಗೆ ಕಾರ್ಯತಂತ್ರ ರೂಪಿಸಬೇಕೆಂದು ಯೋಚಿಸಿ ಈಶಾನ್ಯ ಭಾರತದ ವಿದ್ಯಾರ್ಥಿಗಳನ್ನು ಭಾರತದ ಇತರ ಪ್ರದೇಶಗಳಿಗೆ ಕರೆತಂದು ಸಂಸ್ಕೃತಿ ವಿನಿಮಯ ಮಾಡುವ “ಸೀಲ್’ ಯೋಜನೆಯನ್ನು ಕೈಗೆತ್ತಿಕೊಂಡೆ. ಅದು ಈಗಲೂ ನಡೆಯುತ್ತಿದೆ. ನಂತರ ಅಲ್ಲಿನ ಗಡಿಭಾಗದ ವಿದ್ಯಾರ್ಥಿಗಳನ್ನು ಭಾರತದ ಇತರೆಡೆ ಮನೆಯಲ್ಲಿ ಉಳಿಸಿಕೊಂಡು ಶಿಕ್ಷಣ ಕೊಡಿಸುವ “ಮೈ ಹೋಮ್ ಇನ್ ಇಂಡಿಯಾ’ ಸೇವಾ ಪ್ರಕಲ್ಪ ಆರಂಭಿಸಿದೆ. ಆಗ ನನ್ನ ಮನೆಯಲ್ಲಿಯೇ ಅನೇಕ ವಿದ್ಯಾರ್ಥಿಗಳನ್ನು ಇರಿಸಿಕೊಂಡು ಶಿಕ್ಷಣ ಕೊಡಿಸಿದ್ದೆ. ಅವರೆಲ್ಲ ಈಗ ದೊಡ್ಡ ಹುದ್ದೆಯಲ್ಲಿದ್ದಾರೆ. ನಾನು ರಾಜ್ಯಪಾಲನಾಗಿ ಕೊಹಿಮಾಕ್ಕೆ ಹೋದಾಗ ಒಬ್ಬ ಬಂದು ಆನಂದಭಾಷ್ಪ ಸುರಿಸಿದ. ಆತ ನಮ್ಮ ಮನೆಯಲ್ಲಿದ್ದು ಓದಿದವ, ಈಗ ಐಎಎಸ್ ಅಧಿಕಾರಿ.
Advertisement
ಇತ್ತೀಚೆಗೆ ಬೌದ್ಧಗುರು ದಲಾಯಿಲಾಮಾರನ್ನು ಭೇಟಿ ಯಾಗಿದ್ದೀರಿ. ಮುಂದೆಂದಾದರೂ ಟಿಬೆಟ್‌ನಲ್ಲಿ ಅವರು ಮತ್ತೆ ತಳವೂರುವ ಆಶಾವಾದವಿದೆಯೆ?ಚೀನದಲ್ಲಿ ಕಮ್ಯುನಿಸ್ಟ್ ಪಕ್ಷ ನಡೆಸಿದ ನರಮೇಧ ಜನರ ಮನಸ್ಸಿನಿಂದ ಮಾಸಿಲ್ಲ, ದ್ವೇಷವಿದೆ. ದಲಾಯಿ ಲಾಮಾ ಅರುಣಾಚಲಪ್ರದೇಶದ ರಾಜಧಾನಿ ಇಟಾನಗರಕ್ಕೆ ಬಂದಾಗ ನಾನು ಪ್ರಥಮ ಪ್ರಜೆಯಾಗಿ ಅವರನ್ನು ಭೇಟಿ ಮಾಡಿದೆ. ದಲಾಯಿಲಾಮಾ ಅವರಿಗೆ ಪ್ರಬಲ ಇಚ್ಛಾಶಕ್ತಿ ಇದೆ. ಇನ್ನೈದು ವರ್ಷಗಳಲ್ಲಿಯಾದರೂ ಏನಾದರೂ ಉತ್ತಮ ಬೆಳವಣಿಗೆ ಆಗಬಹುದು ಎಂದು ನನ್ನ ಅಂತರಂಗ ಹೇಳುತ್ತಿದೆ. ಇಸ್ಕಾನ್ ಸ್ಥಾಪಕ ಪ್ರಭುಪಾದರು ನಿಮ್ಮ ಮನೆಯಲ್ಲಿ ಅನೇಕ ದಿನ ಉಳಿದುಕೊಂಡಿದ್ದರಂತೆ, ಹೌದೆ?
ಇದು ಸುಮಾರು 1973-74ರಲ್ಲಿ. ಆಗ ಮುಂಬಯಿ ಜುಹೂ ಬೀಚ್‌ನಲ್ಲಿ ಶ್ರೀಕೃಷ್ಣ ಪ್ರಜ್ಞಾ ಉತ್ಸವವನ್ನು ಏರ್ಪಡಿಸಿದ್ದರು. ಅಲ್ಲಿಯೇ ನಮ್ಮ ಮನೆ ಇತ್ತು. ಅವರ ಅನುಯಾಯಿಗಳು ಬೀಚ್ ಸ್ವತ್ಛತೆ ಮಾಡುತ್ತಿದ್ದಾಗ ಅವರನ್ನು ಚಹಾ ಪಾನಕ್ಕೆ ಸ್ವಾಗತಿಸಿದೆ. ಅವರು “ಚಹಾ ಕುಡಿಯುವುದಿಲ್ಲ. ದೇವರಿಗೆ ಸಮರ್ಪಣೆಯಾಗಬೇಕು’ ಎಂದರು. ಆಗಲಿ ಎಂದೆ. ಮನೆಗೆ ಬಂದಾಗ ಅವರಿಗೆ ಕುಡಿ
ಯಲು ಕಷಾಯ ಮಾಡಿ ಅದನ್ನು “ಹರ್ಬಲ್ ಟೀ’ ಎಂದೆ. ನಂತರ ಒಂದು ದಿನ ಪ್ರಭುಪಾದರು ಅನುಯಾ ಯಿ ಗಳೊಂದಿಗೆ ಬಂದರು. ಮನೆ ಗೋಡೆಯಲ್ಲಿದ್ದ ಮಧ್ವಾಚಾ ರ್ಯರ ಚಿತ್ರ ನೋಡಿ ಅಚ್ಚರಿಪಟ್ಟರು. ನನ್ನೂರು, ಹಿನ್ನೆಲೆ ವಿವರಿಸಿದಾಗ ಕೆಲವು ದಿನ ಇರುವುದಾಗಿ ಹೇಳಿದರು. ಉತ್ಸವ ಮುಗಿಯುವವರೆಗೆ ಹೆಚ್ಚಾ ಕಡಿಮೆ 40 ದಿನ ಇದ್ದರು. ಈಶಾನ್ಯ ಭಾರತದ ಅಭಿವೃದ್ಧಿಗೆ ನೀವು ನೀಡಿದ ಕರೆಗೆ ಸ್ಪಂದನ ಹೇಗಿದೆ?
ಉತ್ತಮವಾಗಿದೆ. ಮೂಡಬಿದಿರೆಯ ಡಾ| ಮೋಹನ ಆಳ್ವ ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಅವರ ಪುತ್ರ ವಿವೇಕ್ ಆಳ್ವ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ನಿಟ್ಟೆ ವಿ.ವಿ.ಯವರು ಅಲ್ಲೊಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿ ಇರಿಸಿಕೊಂಡಿದ್ದಾರೆ. ಎಂಟರಲ್ಲಿ ನಾಲ್ಕು ಆಧಿಪತ್ಯ!
ಪಿ.ಬಿ. ಆಚಾರ್ಯ ಅವರು ಈಶಾನ್ಯ ಭಾರತದ ಎಂಟು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ರಾಜ್ಯಪಾಲರಾದ ಅನುಭವ ಹೊಂದಿದ್ದಾರೆ. ಪ್ರಸ್ತುತ ನಾಗಾಲ್ಯಾಂಡ್ ಜತೆ ಅರುಣಾಚಲಪ್ರದೇಶದ ರಾಜ್ಯಪಾಲರಾಗಿದ್ದರೆ ಹಿಂದೆ ನಾಗಾಲ್ಯಾಂಡ್ ಜತೆ ಅಸ್ಸಾಂ, ತ್ರಿಪುರದ ರಾಜ್ಯಪಾಲರಾಗಿದ್ದರು.
– ಪಿ ಬಿ ಆಚಾರ್ಯ
ನಾಗಾಲ್ಯಾಂಡ್-ಅರುಣಾಚಲದ ರಾಜ್ಯಪಾಲ