Advertisement

ಶಾಂತಿ, ಸೋದರತ್ವ  ಸಾರುವ ಕ್ರಿಸ್ಮಸ್‌

09:50 AM Dec 21, 2017 | Team Udayavani |

ಜಗದ ಅಸತ್ಯವನ್ನು ಅಳಿಸಿ ಸತ್ಯವನ್ನು ಉಳಿಸಲು, ಮನುಷ್ಯನ ಮನೆ ಮನಗಳಲ್ಲಿರುವ ಅಂಧಕಾರವನ್ನು ತೊಲಗಿಸಿ ಜ್ಯೋತಿ ಬೆಳಗಿಸಲು ಹಾಗೂ ಸಾವಿನ ಕರಾಳ ಬಂಧನದಿಂದ ಬಿಡಿಸಿ ನಿತ್ಯ ಜೀವ ವನ್ನೀಯಲು ದೇವಪುತ್ರ ಯೇಸು ಕ್ರಿಸ್ತರು ಭೂಲೋಕದಲ್ಲಿ ಅವ ತರಿಸಿದರು. ಸರ್ವಶಕ್ತ ದೇವರು ದೀನ ಮಾನವರಾದರು. ದೇವ – ಮಾನವನ ನಡುವೆ ಸತ್ಸಂಬಂಧ ಬೆಳೆಸುವ, ಮಾನವರ ಮಧ್ಯೆ ಪ್ರೀತಿ ಸಂಬಂಧ ಅರಳಿಸಲು ಕಾರಣ ರಾದರು. ಇದೇ ಪ್ರೀತಿ, ದಯೆ, ಶಾಂತಿ, ಸೋದರತ್ವಗಳನ್ನು ಕ್ರಿಸ್ತ ಜಯಂತಿ ಅಥವಾ ಕ್ರಿಸ್ಮಸ್‌ ಹಬ್ಬ ಸಾರುತ್ತದೆ.

Advertisement

ಕ್ರಿಸ್ತರ ಜನನ ಈ ಭೂಲೋಕದ ಸಕಲ ಮನುಜರ ಆನಂದಕ್ಕೆ ಕಾರಣವಾಯಿತು. ಯೇಸುಕ್ರಿಸ್ತರು ಜನಿಸಿದಾಗ, ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭುವಿಯಲ್ಲಿ ದೇವರು ಒಲಿದ ಮಾನವರಿಗೆ ಶಾಂತಿ ಎಂದು ದೇವದೂತರು ಹಾಡಿದರೆ ಕುರುಬರು ಅದನ್ನು ಜನರೆಲ್ಲರಿಗೂ ಪರಮಾನಂದ ತಂದ ವಿದ್ಯಮಾನ ಎಂದು ವಿವರಿಸಿದರು. ತಾಯ್ನೆಲದಿಂದ‌ ದೂರವಿದ್ದರೂ ಗೋದಲಿಯ ಬಡತನವಿದ್ದರೂ ಜನರ ನಿರಾಸಕ್ತಿಯಿದ್ದರೂ ಅಧಿಕಾರದ ಹಗೆತನವಿದ್ದರೂ ಅವರಲ್ಲಿ ಆನಂದ ತುಂಬಿ ತುಳುಕುತ್ತಿತ್ತು.

ಕ್ರಿಸ್ತರ ಜನನವು ಅಮರ ಪ್ರೇಮದ ರಹಸ್ಯವಾಗಿದೆ. ತಂದೆ ದೇವರು ಮಾನವನ ಮೇಲಿನ ಪ್ರೀತಿಯನ್ನು ತೋರ್ಪಡಿಸಲು ತಮ್ಮ ಪುತ್ರರನ್ನೇ ಭೂಲೋಕಕ್ಕೆ ಕಳುಹಿಸಿದ ಮಾನವ ಚರಿತ್ರೆಯ ಅದ್ವಿತೀಯ ಘಟನೆ ಕ್ರಿಸ್ಮಸ್‌. ಇಮ್ಮಾನುವೇಲ್‌ ಎಂದರೆ “ದೇವರು ನಮ್ಮೊಡನೆ’ ಇದ್ದು ಶಿಲುಬೆಯ ಮರಣದ ಮುಖಾಂತರ ಮನುಷ್ಯನಿಗೆ ಜೀವದಾನ ಮಾಡಲು ಬಂದ ಅಪ್ರತಿಮ ಪ್ರೀತಿಯಿದು.

ಸ್ವೀಕರಿಸಲು ಅಶಕ್ತರಾದವರಿಗೆ ದೇವರು ಯಾವ ವರದಾನವನ್ನೂ ನೀಡುವುದಿಲ್ಲ. ಅವರು ಕ್ರಿಸ್ತ ಜಯಂತಿಯ ವರ ವನ್ನು ನೀಡುತ್ತಿರುವುದು ಅದನ್ನು ಗ್ರಹಿಸುವ ಮತ್ತು ಅಂಗೀಕರಿಸುವ ಶಕ್ತಿ ನಮಗಿದೆ ಎಂಬ ನಿಶ್ಚಿತತೆಯಿಂದ ಎಂದಿದ್ದಾರೆ ಪೋಪ್‌ ಫ್ರಾನ್ಸಿಸ್‌ ಅವರು. ಕ್ರಿಸ್ತರ ಜನನವು ಅಂದೂ ಮತ್ತು ಇಂದೂ ಈ ಭೂಲೋಕಕ್ಕೆ ಶಾಂತಿಯ ವರದಾನ ವಾಗಿದೆ. ಅನಾ ದರಣೆ, ಜಾತೀಯತೆ ಮತ್ತು ಭಯೋತ್ಪಾದನೆ, ಹಿಂಸೆ, ರಕ್ತಪಾತ ಮತ್ತು ಅನಿಶ್ಚಿತತೆಯ ವಾತಾ ವರಣಕ್ಕೆ ಎಡೆಮಾಡಿಕೊಡುವ ದುರಂತ ಮಯ ಪರಿಸ್ಥಿತಿಯಲ್ಲೂ ಅಪನಂಬಿಕೆ, ಅನುಮಾನ ಮತ್ತು ನಿರಾಶೆಗೆ ಶರಣಾಗಬೇಡಿ ಎಂದು ಬೆತ್ಲೆಹೇಮಿನ ಬಡ ಗೋದಲಿಯು ಭೂಲೋಕಕ್ಕೆ ಇಂದು ಹೇಳುತ್ತಿದೆ. ಸಕಲ ಧರ್ಮಗಳ ವಿಶ್ವಾಸಿಗಳು, ಸುಮನಸ್ಸಿನ ಸ್ತ್ರೀಪುರುಷರು ಒಂದಾಗಿ ಎಲ್ಲ ವಿಧದ ಅಸಹನೆ ಮತ್ತು ತಾರತಮ್ಯವನ್ನು ಬಹಿಷ್ಕರಿಸಿ ಶಾಂತಿಯನ್ನು ಸ್ಥಾಪಿಸುವ ಕರೆಯನ್ನು ಹೊಂದಿದ್ದಾರೆ. ಕ್ರಿಸ್ಮಸ್‌ ಆಚರಣೆಯು ಸಂತೋಷ, ಪ್ರೀತಿ ಮತ್ತು ಶಾಂತಿಗಾಗಿ ಶ್ರಮಿಸುವ ಎಲ್ಲರಿಗೂ ಉತ್ತೇಜನ ಕೊಡುವಂತಾಗಲಿ.

ಕ್ರಿಸ್ಮಸ್‌ ಹಬ್ಬವು ನಮ್ಮೆಲ್ಲರಿಗೂ ಪ್ರೀತಿ ಹಾಗೂ ಸುಖ - ಶಾಂತಿಯ ಹಬ್ಬವಾಗಿದೆ. ಈ ಆಚರಣೆಯ ಸಂತೋಷ ನಮ್ಮ ತನು-ಮನಗಳಲ್ಲಿ, ಮನೆ-ಮಂದಿರಗಳಲ್ಲಿ, ಕಚೇರಿ- ಕಾರ್ಖಾನೆಗಳಲ್ಲಿ, ಸಂದರ್ಭ-ಸನ್ನಿವೇಶಗಳಲ್ಲಿ ಪ್ರಜ್ವಲಿಸಲಿ. ನಮ್ಮಲ್ಲಿ ಪ್ರತಿಯೊಬ್ಬರೂ ಹಳೆತನವನ್ನು ಬಿಟ್ಟು ಕ್ರಿಸ್ತರಂತೆ ತ್ಯಾಗ ತನ್ಮಯರಾಗಿ, ಸೇವಾಮನೋಭಾವವನ್ನು ಮನನ ಮಾಡಿಕೊಂಡು, ನಿಸ್ವಾರ್ಥಿಗಳಾಗಿ ಪ್ರೀತಿ, ದಯೆ, ಕರುಣೆಯ ಭಾಷೆಯನ್ನು ನಾವು ಮೊದಲು ಕಲಿತು, ಇತರರಿಗೂ ಅದನ್ನು ಕಲಿಸಲು ಕಂಕಣಬದ್ಧರಾಗಬೇಕು.

Advertisement

ರೈ| ರೆ| ಡಾ| ಜೆರಾಲ್ಡ್‌  ಲೋಬೊ ಉಡುಪಿಯ ಧರ್ಮಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next