ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ವಿಧಾನಸಭಾ ಚುನಾವಣಾ ಪ್ರಚಾರದ ಕಾವು ದಿನದಿಂದ ಏರುತ್ತಿದ್ದು, ”ಈ ಬಾರಿ ಯಾವುದೇ ಪಕ್ಷಕ್ಕೆ ಬಹುಮತ ದೊರಕುವುದಿಲ್ಲ, ಪಿಡಿಪಿ(PDP) ಕಿಂಗ್ ಮೇಕರ್ ಆಗಲಿದೆ ಎಂದು ಯುವ ನಾಯಕಿ ಇಲ್ತಿಜಾ ಮುಫ್ತಿ ಗುರುವಾರ(ಆ 29) ಹೇಳಿಕೆ ನೀಡಿದ್ದಾರೆ.
PTI ಸುದ್ದಿ ಸಂಸ್ಥೆಗೆ ಪ್ರಚಾರದ ವೇಳೆ ಹೇಳಿಕೆ ನೀಡಿರುವ ಯುವ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ, ”ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎನ್ನುವ ವಿಶ್ವಾಸ ನನಗಿದೆ” ಎಂದು ಹೇಳಿದ್ದಾರೆ.
ಮುಫ್ತಿ ಕುಟುಂಬದ ಮೂರನೇ ತಲೆಮಾರಿನ ಕುಡಿ ಪಿಡಿಪಿಯ ಭದ್ರ ಕೋಟೆಯಾದ ಶ್ರೀಗುಫ್ವಾರಾ-ಬಿಜ್‌ಬೆಹರಾ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕ್ಷೇತ್ರವನ್ನು ಹಿಂದೆ ಮೆಹಬೂಬಾ ಮುಫ್ತಿ, ಅಜ್ಜ ಮುಫ್ತಿ ಮೊಹಮ್ಮದ್ ಸಯೀದ್ ಪ್ರತಿನಿಧಿಸಿದ್ದರು.
ತಮ್ಮ ಪಕ್ಷವು ಬಿಜೆಪಿಗೆ ಅವಕಾಶ ಬಿಟ್ಟು ಕೊಡದಂತೆ ಚುನಾವಣೆಯಲ್ಲಿ ಹೋರಾಡಲಿದೆ. ಜಮ್ಮು ಮತ್ತು ಕಾಶ್ಮೀರವು ತನ್ನದೇ ಆದ ಧ್ವಜ, ತನ್ನದೇ ಆದ ಸಂವಿಧಾನ ಮತ್ತು ಉಳಿಕೆ ಅಧಿಕಾರವನ್ನು ಹೊಂದಿದೆ. ಈಗ ಸಿಎಂ ಮೇಯರ್ ತರಹ ಇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯ ಹೇಳುವ ಎಂಎಲ್ ಎ ಪವರ್ ಫುಲ್ ಆಗುತ್ತಾನೆ. ಅರವಿಂದ್ ಕೇಜ್ರಿವಾಲ್ ಅವರನ್ನು ನೋಡಿ, ಅವರು ಜೈಲಿನಲ್ಲಿದ್ದಾರೆ. ಮುಸ್ಲಿಂ ಬಹುಸಂಖ್ಯಾಕ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ, ಎಷ್ಟು ಶಕ್ತಿಹೀನರಾಗುತ್ತಾರೆ ಎಂಬುದನ್ನು ನೀವು ಇದರಿಂದ ಅರ್ಥಮಾಡಿಕೊಳ್ಳಬಹುದು” ಎಂದು ಹೇಳಿದರು.
”ನನಗೆ ಸಿಎಂ ಆಗುವುದು ಮುಖ್ಯವಲ್ಲ. ನಾನು ತುಂಬಾ ಚಿಕ್ಕವಳು. ಸಿಎಂ ಹುದ್ದೆಗೆ ಹೆಸರು ಕೇಳಿಬಂದಿರುವುದು ತುಂಬಾ ಹಾಸ್ಯಾಸ್ಪದವಾಗಿದೆ. ಈ ಚುನಾವಣೆಯಲ್ಲಿ ಗೆದ್ದು ನಿಜವಾದ ಜನಪ್ರತಿನಿಧಿಯಾಗುವುದು ನನ್ನ ಆದ್ಯತೆ’ ಎಂದರು.