ಹಾವೇರಿ: ಪಿಡಿಒ ಹುದ್ದೆಯಿಂದ ಖಾಲಿಯಿರುವ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಬಡ್ತಿ ನೀಡುವುದು, ಲೋಕಾಯುಕ್ತಕ್ಕೆ ವಹಿಸಿರುವ 2006-2007ರಿಂದ 2011-2012ರವರೆಗಿನ ನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ತನಿಖೆ ಪ್ರಕರಣ ವಾಪಸ್ ಪಡೆಯುವುದು, 8 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಿಡಿಒ ಹುದ್ದೆಯನ್ನು ಗ್ರೂಪ್ ಬಿಗೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಡಿಸಿ, ಜಿಪಂ ಸಿಇಒ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಶೇ. 70ರಷ್ಟು ಗ್ರಾಮೀಣ ಜನತೆಯನ್ನು ಸರ್ಕಾರ ಪ್ರತಿನಿಧಿಸುತ್ತಿದೆ. ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಜನಪ್ರತಿನಿಧಿಗಳಿಗೆ ಸಮನ್ವಯ ಸಾಧಿಸಿ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.
ಗ್ರಾಮಮಟ್ಟದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿದೀಪ, ಚರಂಡಿ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ರಸ್ತೆ ಸಂಪರ್ಕ, ವಸತಿ, ನರೇಗಾ ಯೋಜನೆಯಡಿ ಉದ್ಯೋಗ ಇತ್ಯಾದಿ ಸೌಲಭ್ಯಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ಇದರ ಜೊತೆಗೆ ಗ್ರಾಮ ಮತ್ತು ಪಂಚಾಯಿತಿ ಮಟ್ಟದ ಟಾಸ್ಕ್ಫೋರ್ಸ್, ಶಿಕ್ಷಣ ಪಡೆ, ಆರೋಗ್ಯ ನೈರ್ಮಲ್ಯ ಸಮಿತಿ ಇತ್ಯಾದಿ ಸಮಿತಿಗಳನ್ನು 29 ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಅನೇಕ ಬಾರಿ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಈಗ ಮತ್ತೂಮ್ಮೆ ಮನವಿ ಸಲ್ಲಿಸಲು ಮುಂದಾಗಿದ್ದೇವೆ. ನಮ್ಮ ಬೇಡಿಕೆಗಳು ಈಡೇರದೇ ಇದ್ದಲ್ಲಿ 15 ದಿನಗಳ ನಂತರ ರಾಜ್ಯಾದ್ಯಂತ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಕೂಡಲೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ನಿಯಮ ಜಾರಿಗೊಳಿಸಬೇಕು. ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ತರಬೇಕು. ಕೋವಿಡ್‌ನಿಂದ ಮೃತರಾದ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬಗಳಿಗೆ ಪರಿಹಾರ ಮತ್ತು ಅನುಕಂಪದ ನೌಕರಿ ನೀಡಬೇಕು. 16 ಎ ರದ್ದು ಮಾಡಿರುವುದರಿಂದ ಅಂತರ್ ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಹಾಗಾಗಿ, ಒಂದು ಬಾರಿ ಅಂತರ್ ಜಿಲ್ಲೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ರಾಜ್ಯಮಟ್ಟದ ವೃಂದವನ್ನಾಗಿಸಬೇಕು. ಗ್ರಾಪಂ ಸಿಬ್ಬಂದಿಗೆ ವೇತನ ಶ್ರೇಣಿ ನಿಗದಿಪಡಿಸಬೇಕು. ಅನುಮೋದನೆ ಬಾಕಿಯಿರುವ ಸಿಬ್ಬಂದಿಗೆ ಜಿಪಂ ವತಿಯಿಂದ ಅನುಮೋದನೆ ನೀಡಬೇಕು. ಎಲ್ಲ ಗ್ರಾಪಂಗಳಿಗೆ ಎಸ್‌ಡಿಎ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕು. ನರೇಗಾ ಯೋಜನೆಯಡಿ ಸಾಮಗ್ರಿ ವೆಚ್ಚವನ್ನು ನಿಯಮಿತವಾಗಿ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಣೆ ಕಂದಾಯ ಇಲಾಖೆಯ ಕರ್ತವ್ಯವಾಗಿದ್ದು, ಈ ಕೆಲಸದಲ್ಲಿ ಪಿಡಿಒಗಳನ್ನು ನೇರ ಹೊಣೆಗಾರರನ್ನಾಗಿಸುತ್ತಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ, ಈ ಕಾರ್ಯದಲ್ಲಿ ವಿವಿಧ ಅಧಿಕಾರಿಗಳ ಹೊಣೆಗಾರಿಕೆಗಳ ಬಗ್ಗೆ ವಿಸ್ತೃತ ಆದೇಶ ಹೊರಡಿಸಬೇಕೆಂಬ 15 ವಿವಿಧ ಬೇಡಿಕೆಗಳನ್ನು ಪಿಡಿಒಗಳು ಸಲ್ಲಿಸಿದ್ದಾರೆ. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ನೀಲಪ್ಪ ಕಜ್ಜರಿ, ವಿಭಾಗೀಯ ಉಪಾಧ್ಯಕ್ಷ ಚಂದ್ರು ಲಮಾಣಿ, ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ನಾಯಕ, ಧರ್ಮರಾಜ ಚವ್ಹಾಣ, ಭೋಜರಾಜ ಲಮಾಣಿ, ದಾವಲಸಾಬ ಕಮಗಾಲ, ಶಂಭುಲಿಂಗ ನಾಡರ, ದೇವರಾಜ ಕರಿಗಾರ ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಇದ್ದರು.