Advertisement

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

01:26 AM Oct 08, 2024 | Team Udayavani |

ಮಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಎಲ್ಲ ವೃಂದದ ಸಂಘಗಳು ಹಾಗೂ ಗ್ರಾ.ಪಂ. ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸೋಮವಾರ ದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ.

Advertisement

ಜಿ.ಪಂ.ಆವರಣದಲ್ಲಿ ಸೋಮ ವಾರ 11 ವೃಂದಕ್ಕೆ ಸೇರಿದ ಸಿಬಂದಿ, ಅಧಿಕಾರಿಗಳು ಮುಷ್ಕರ ನಡೆಸಿದರು. ಈ ವೇಳೆ ಮಾತನಾಡಿದ ಕೆಎಸ್‌ಪಿಡಿಒಡಬ್ಲ್ಯುಎ ಅಧ್ಯಕ್ಷ ನಾಗೇಶ್‌ ಎಂ., ರಾಜ್ಯ ಸರಕಾರ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬಂದಿಯ ಬೇಡಿಕೆಗಳನ್ನು ಈಡೇರಿಸ ಬೇಕು. ಸರಕಾರಕ್ಕೆ ಸಲ್ಲಿಸಲಾಗಿರುವ ಮನವಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು. ಗ್ರಾ.ಪಂ.ನ್ನು ಬಲಾಡ್ಯಗೊಳಿಸು ವುದು ಮುಖ್ಯ ಗುರಿ. ಸಿಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಗ್ರಾಮ ಸ್ವರಾಜ್‌ ಗೋಸ್ಕರ ಹೆಚ್ಚು ಅಧಿಕಾರ ವ್ಯಾಪ್ತಿಯನ್ನು ನೀಡಬೇಕು. ಮೊಟಕುಗೊಳಿಸಿದ ಅಧಿಕಾರವನ್ನು ನೀಡಬೇಕು ಎಂದರು.

ಪಂಚ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ದಯಾನಂದ ನಾಯ್ಕ ಮಾತನಾಡಿ, ರಾಜ್ಯದ ಎಲ್ಲ ಪಂ. ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್‌ ಗ್ರೂಪ್‌ ಬಿ ದರ್ಜೆಗೆ ಉನ್ನತಿಕರಿಸಬೇಕು. ಏಳು ವರ್ಷ ಪೂರೈಸಿದ ಪಂ.ಅಧಿಕಾರಿಗಳನ್ನು ಬೇರೆ ತಾಲೂಕಿಗೆ ವರ್ಗಾಯಿಸುವುದನ್ನು ಕೈಬಿಡಬೇಕು. ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಭಡ್ತಿ ನೀಡಲು ಕ್ರಮ ವಹಿಸಬೇಕು. ಕುಂದುಕೊರತೆ ಪ್ರಾಧಿಕಾರವನ್ನು ಪೊಲೀಸ್‌ ಇಲಾಖೆಯ ಮಾದರಿಯಲ್ಲೇ ಸದೃಢಗೊಳಿಸಬೇಕು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದರು. ಲಕ್ಷ್ಮಣ್‌ ಎಚ್‌.ಕೆ., ರಾಜ್ಯ ಪ್ರತಿನಿಧಿ ರಮೇಶ್‌ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಗ್ರಾ.ಪಂ ಸೇವೆಗಳಿಲ್ಲದೆ ನಾಗರಿಕರ ಪರದಾಟ
ಪಂಚಾಯತ್‌ ಪಿಡಿಒ ಸೇರಿದಂತೆ ಎಲ್ಲ ಸಿಬಂದಿ ಮುಷ್ಕರದಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಅ. 4ರಿಂದ ಗ್ರಾ.ಪಂ.ಗೆ ಸಂಬಂಧಿಸಿದ ಎಲ್ಲ ಆನ್‌ಲೈನ್‌ ಸೇವೆಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಕೆಲಸಗಳು ವ್ಯತ್ಯಯವಾಗದಂತೆ ಕ್ರಮ ವಹಿಸಲಾಗಿದೆ. ಈ ನಡುವೆ ಅ. 10ರಂದು ಸಚಿವ ಪ್ರಿಯಾಂಕ್‌ ಖರ್ಗೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿ ಮೇಲಧಿಕಾರಿಗಳಿಂದ ಯಾವುದೇ ಸೂಚನೆ ಬಂದಿಲ್ಲ ಎನ್ನುವುದನ್ನು ಧರಣಿ ನಿರತರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿಯೂ ಪ್ರತಿಭಟನೆ
ಉಡುಪಿ: ಗ್ರಾ. ಪಂ.ಗಳ ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ ಮತ್ತು ಪಂಚ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾ ಮಟ್ಟದಲ್ಲಿ ಮುಷ್ಕರ ನಡೆಸಿದರು. ಪರಿಣಾಮ ಜಿಲ್ಲೆಯ 155 ಗ್ರಾ.ಪಂ.ಗಳಲ್ಲಿ ಕಂದಾಯ ಸೇವೆಯಲ್ಲಿ ವ್ಯತ್ಯಯವಾಗಿದೆ. ಮಂಗಳವಾರವೂ ಪ್ರತಿಭಟನೆ ಮುಂದುವರಿಯಲಿದ್ದು ಗ್ರಾ.ಪಂ. ಸೇವೆಯಲ್ಲಿ ಇನ್ನಷ್ಟು ವ್ಯತ್ಯಯವಾಗುವ ಸಾಧ್ಯತೆ ಇದೆ. ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್‌ ಪಿ. ಶೆಟ್ಟಿ ಮಾತನಾಡಿ, ಬೇಡಿಕೆ ಈಡೇರಿಸದಿದ್ದರೆ ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next