Advertisement

PCOD (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಸಮಸ್ಯೆ ಮತ್ತು ನಿರ್ವಹಣೆ

12:32 PM Jul 15, 2024 | Team Udayavani |

ಪಿಸಿಒಡಿ (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಮತ್ತು ಪಿಸಿಒಎಸ್‌ (ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌) ಎಂದರೇನು?

Advertisement

ಮಹಿಳೆಯರಲ್ಲಿ ಋತುಚಕ್ರ ಆರಂಭವಾದಂದಿನಿಂದ ನಿಲ್ಲುವವರೆಗೂ ಪ್ರತೀ ತಿಂಗಳು ಅಂಡಾಶಯದಲ್ಲಿರುವ ಫಾಲಿಕಲ್‌ಗ‌ಳಲ್ಲಿ ಒಂದೇ ಒಂದು ಪಕ್ವವಾಗಿ ಅದರಿಂದ ಅಂಡಾಣು ಬಿಡುಗಡೆಯಾಗುತ್ತದೆ. ಆದರೆ ಹಾರ್ಮೋನುಗಳ ಅಸಮತೋಲನದಿಂದಾಗಿ ಒಮ್ಮೆಲೆ ಹೆಚ್ಚು ಫಾಲಿಕಲ್‌ಗ‌ಳು ಬೆಳೆದು ಅಂಡಾಣುಗಳು ಬಿಡುಗಡೆಯಾಗುವುದಿಲ್ಲ ಮತ್ತು ನೀರುಗಳ್ಳೆಗಳ ರೂಪದಲ್ಲಿ ಬೆಳೆದು ನಿಲ್ಲುತ್ತದೆ. ಇದನ್ನೆ ಪಿಸಿಒಡಿ (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಎನ್ನಲಾಗುತ್ತದೆ. ಪಿಸಿಒಎಸ್‌ (ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌) ಒಂದು ವಿಶಾಲವಾದ ಮತ್ತು ಬಹುಮುಖೀ ಸ್ಥಿತಿಯಾಗಿದೆ. ಹಲವಾರು ಲಕ್ಷಣಗಳ ಗುಂಪನ್ನು ಸಿಂಡ್ರೊಮ್‌ ಎಂದು ಹೇಳುತ್ತಾರೆ. ಪಿಸಿಒಎಸ್‌ ಅಪರೂಪದ ಮುಟ್ಟಿನ ಚಕ್ರಗಳು, ವಿಸ್ತರಿಸಿದ ಅಂಡಾಶಯದ ಚೀಲಗಳು ಮತ್ತು ಹಾರ್ಮೋನುಗಳ ಬದಲಾವಣೆಯಂತಹ ವಿವಿಧ ಚಿಹ್ನೆಗಳನ್ನು ಒಳಗೊಂಡಿದೆ.

ಇತ್ತಿಚೆಗಿನ ದಿನಗಳಲ್ಲಿ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡಗಳಿಂದಾಗಿ ಹದಿಹರೆಯದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ತಲೆದೋರುತ್ತಿರುವುದನ್ನು ನಾವು ನೋಡುತ್ತೇವೆ ಮತ್ತು ಕೇಳುತ್ತೇವೆ. ಪಿಸಿಒಡಿ (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಆರೋಗ್ಯ ಸಮಸ್ಯೆ. ಹಿಂದಿನ ಕಾಲದಲ್ಲಿ ಇದು ಸಾಮಾನ್ಯವಾಗಿರಲಿಲ್ಲ.

ಆದರೆ ಇತ್ತೀಚೆಗೆ ಇದು ಚಿಕ್ಕ ವಯಸ್ಸಿನಲ್ಲಿ ಕಾಣಬರುತ್ತಿದೆ. ಪಿಸಿಒಡಿ ಸಮಸ್ಯೆ ಶೇ.15ರಿಂದ ಶೇ. 25 ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ಸಾಧಾರಣ 4-5 ಹುಡುಗಿಯರಲ್ಲಿ ಒಂದು ಹುಡುಗಿಗೆ ಪಿಸಿಒಡಿ ಸಮಸ್ಯೆ ಗೋಚರವಾಗುತ್ತಿದೆ. ಹದಿಹರೆಯದ ಹೆಣ್ಣುಮಕ್ಕಳಲ್ಲಿ ಈ ಸಮಸ್ಯೆಯ ತೀವ್ರತೆ ಇನ್ನೂ ಜಾಸ್ತಿ ಇರಬಹುದು. ಹದಿಹರೆಯದ ಹೆಣ್ಣು ಮಕ್ಕಳು ಅಥವಾ ಅವರ ತಾಯಂದಿರು ಈ ಸಮಸ್ಯೆಯನ್ನು ಅಷ್ಟೊಂದಾಗಿ ಬೇರೆ ಆರೋಗ್ಯ ಸಮಸ್ಯೆ ತರಹ ತೋರ್ಪಡಿಸದೆ ಇರುವ ಸಂಭವನೀಯತೆ ಜಾಸ್ತಿ.

ಪಿಸಿಒಡಿಯ ಗುಣಲಕ್ಷಣಗಳನ್ನು ಆರಂಭದಲ್ಲಿ ಅರಿತುಕೊಂಡು ಸ್ತ್ರೀ ರೋಗತಜ್ಞರಲ್ಲಿ ಚಿಕಿತ್ಸೆ ಪಡೆಯಬೇಕು ಹಾಗೂ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಸುಧಾರಣೆ ಮಾಡಿಕೊಂಡಲ್ಲಿ ಜೀವನದಲ್ಲಿ ಮುಂದೆ ಬರುವ ತೊಡಕುಗಳನ್ನು ತಡೆಯಬಹುದು. ಪಿಸಿಒಡಿಯನ್ನು ನಿರ್ಲಕ್ಷಿಸಿದರೆ ಇದು ಮುಂದುವರಿದು ಪಿಸಿಒಎಸ್‌ ಆಗಬಹುದು. ಸಮಸ್ಯೆ ಸರಳತೆಯಿಂದ ಜಟಿಲಗೊಳ್ಳುತ್ತದೆ. ಹಲವಾರು ಸಮಸ್ಯೆಗಳಿಂದ ಯಾತನೆ ಪಡೆಯಬೇಕಾಗುತ್ತದೆ. ಇದರಿಂದಾಗಿ ಮುಂದೆ ತೊಡಕುಗಳು ಸಂಭವಿಸಬಹುದು.

  1. ಪಿಸಿಒಡಿ ಸಮಸ್ಯೆಯ ಲಕ್ಷಣಗಳು
Advertisement

– ಅನಿಯಮಿತ ಋತುಚಕ್ರ ಅಥವಾ ಅಧಿಕ ಅವಧಿಗಳು ಅಥವಾ ಋತುಚಕ್ರವಾಗದೆ ಇರುವುದು: ಹೆಚ್ಚಿನ ಮಟ್ಟದ ಆಂಡ್ರೋಜೆನ್‌ಗಳು (ಪುರುಷ ಹಾರ್ಮೋನ್‌) ಮತ್ತು ಇನ್ಸುಲಿನ್‌ ಅನೇಕ ಮಹಿಳೆಯರ ಮಾಸಿಕ ಅಂಡೋತ್ಪತ್ತಿ ಮತ್ತು ಋತುಚಕ್ರವನ್ನು ಅಡ್ಡಿಪಡಿಸುತ್ತದೆ. ಈ ಮಹಿಳೆಯರು ಅನಿಯಮಿತ ಅವಧಿಗಳು ಅಥವಾ ಸಂಪೂರ್ಣ ಅವಧಿ ನಿಲುಗಡೆ ಅನುಭವಿಸುವ ಸಾಧ್ಯತೆ ಹೆಚ್ಚು.

– ಮುಟ್ಟಿನ ಸಮಯದಲ್ಲಿ ಅತಿಯಾದ ಹೊಟ್ಟೆ ನೋವು: ಪಿಸಿಒಡಿ ಹೊಂದಿರುವ ವರ ಅಂಡಾಶಯಗಳು ಹೆಚ್ಚಿನ ಆಂಡ್ರೊಜೆನ್‌ಗಳನ್ನು ಉತ್ಪಾದಿಸುತ್ತವೆ. ಹಾಗಾಗಿ ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತಾರೆ:

  • ಮುಖ, ಎದೆ, ಬೆನ್ನು ಅಥವಾ ಪೃಷ್ಠದ ಮೇಲೆ ಅತಿಯಾದ ಕೂದಲು ಬೆಳವಣಿಗೆ (ಹಿರ್ಸುಟಿಸಮ್‌)
  • ತಲೆ ಕೂದಲು ತೆಳ್ಳಗಾಗುವುದು ಅಥವಾ ತಲೆ ಕೂದಲು ಉದುರುವುದು. ­
  • ಕುತ್ತಿಗೆ, ತೋಳುಗಳು, ಸ್ತನಗಳು ಮತ್ತು ತೊಡೆಯ ಮೇಲೆ ಕಪ್ಪಾದ ಅಥವಾ ದಪ್ಪನಾದ ಚರ್ಮ
  • ಎಣ್ಣೆಯುಕ್ತ ಚರ್ಮ ಮತ್ತು ಮೊಡವೆ ಈಸ್ಟ್ರೊಜೆನ್‌ ಮಟ್ಟ ತುಂಬಾ ಹೆಚ್ಚಾದಾಗ ಚರ್ಮವು

ತುಂಬಾ ಒಣಗುತ್ತದೆ ಮತ್ತು ಸೆಬಾಸಿಯಸ್‌ ಗ್ರಂಥಿಗಳು ಸರಿದೂಗಿಸಲು ಹೆಚ್ಚಿನ ಪ್ರಮಾಣದ ತೈಲವನ್ನು ಸ್ರವಿಸುವ ಮೂಲಕ ಪ್ರತಿಕ್ರಿಯಿಸುತ್ತವೆ. ಇದರಿಂದಾಗಿ ಪಿಸಿಒಡಿ ಮಹಿಳೆಯರಲ್ಲಿ ಎಣ್ಣೆಯುಕ್ತ ಚರ್ಮವು ಹೆಚ್ಚಾಗಿ ಕಂಡುಬರುತ್ತದೆ.

– ತೂಕ ಹೆಚ್ಚಾಗುವುದು: ಪಾಲಿಸಿಸ್ಟಿಕ್‌ ಓವರಿ ಕಾಯಿಲೆಯ ಮಹಿಳೆಯರಲ್ಲಿ ತೂಕ ಹೆಚ್ಚಾಗಲು ಇನ್ಸುಲಿನ್‌ ಪ್ರತಿರೋಧವು ಸಾಮಾನ್ಯ ಕಾರಣವಾಗಿದೆ. ಹಾರ್ಮೋನುಗಳ ಅಸಮತೋಲನ, ಉರಿಯೂತ ಮತ್ತು ಇನ್ಸುಲಿನ್‌ ಪ್ರತಿರೋಧದಿಂದಾಗಿ ದೇಹದ ತೂಕವು ಹೆಚ್ಚಾಗುತ್ತದೆ.

– ಚಿಂತೆ ಮತ್ತು ಖನ್ನತೆ

– ಗರ್ಭಿಣಿಯಾಗಲು ತೊಂದರೆ: ಪಿಸಿಒಡಿ ನಿಯಂತ್ರಣದಲ್ಲಿದ್ದರೆ ಗರ್ಭಿಣಿಯಾಗುವುದು ಸಮಸ್ಯೆಯಲ್ಲ.

ಪಿಸಿಒಡಿ ಹೊಂದಿರುವ ಜನರು ಸೀಮಿತ ಅಂಡಾಶಯದ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇದರಿಂದ ಆರೋಗ್ಯಕರ ಮೊಟ್ಟೆಗಳನ್ನು ಉತ್ಪಾದಿಸಲು ಅಸಮರ್ಥರಾಗುತ್ತಾರೆ. ಹಾರ್ಮೋನುಗಳ ಅಸಮತೋಲನವು ಮೊಟ್ಟೆಯ ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ. ಅಂಡಾಶಯದಿಂದ (ಅಂಡೋತ್ಪತ್ತಿ) ಈ ಅಂಡಾಣುಗಳ ಬಿಡುಗಡೆಗೂ ಅಡ್ಡಿಯಾಗುತ್ತದೆ. ಇದು ಗರ್ಭಧಾರಣೆಯನ್ನು ಕಷ್ಟಕರವಾಗಿಸುತ್ತದೆ.

ಮೊಡವೆ, ಸ್ಥೂಲಕಾಯ (ತೂಕ ಹೆಚ್ಚಳ)ಮತ್ತು ಮುಖದಲ್ಲಿ ಕೂದಲು ಬೆಳೆಯುವಿಕೆ (ಹಿರ್ಸುಟಿಸಮ್‌) ಈ ಗುಣಲಕ್ಷಣಗಳು ಹಾರ್ಮೋನುಗಳ ಅಸಮತೋಲನ/ಅಸಹಜತೆಯ ಪರಿಣಾಮದಿಂದ ಬೆಳವಣಿಗೆಯಾಗುತ್ತದೆ, ವಿಶೇಷವಾಗಿ ಸ್ತ್ರೀ ದೇಹದಲ್ಲಿ ಪುರುಷ ಹಾರ್ಮೋನುಗಳಾಗಿರುವ ಆಂಡ್ರೋಜೆನ್‌ ಗಳು ಹೆಚ್ಚಿನ ಮಟ್ಟದಲ್ಲಿ ಉತ್ಪಾದನೆಯಾಗುತ್ತದೆ. ಇದು ಅಂಡೋತ್ಪತ್ತಿ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುತ್ತದೆ ಮತ್ತು ಋತುಚಕ್ರದಲ್ಲಿ ವೈಪರೀತ್ಯಗಳಿಗೆ ಕಾರಣವಾಗುತ್ತದೆ. ಇದು ಮುಂದಕ್ಕೆ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಬಂಜೆತನಕ್ಕೆ ಇದು ಒಂದು ಪ್ರಮುಖ ಕಾರಣವಾಗುತ್ತಿದೆ.

  1. ಪಿಸಿಒಎಸ್‌ ಸಮಸ್ಯೆಯ ಲಕ್ಷಣಗಳು

ಇದು ಒಂದು ಮೆಟಬಾಲಿಕ್‌ ಡಿಸಾರ್ಡರ್‌, ಇದು ಪಿಸಿಒಡಿಯ ತೀವ್ರ ಸ್ವರೂಪವಾಗಿದೆ. ಇದರಲ್ಲಿ ಅಂಡಾಶಯಗಳು ಅಂಡಾಣುಗಳನ್ನು ಉತ್ಪಾದಿಸುವುದನ್ನು ನಿಲ್ಲಿಸುತ್ತವೆ ಮತ್ತು ಇದು ಅನೋವ್ಯುಲೇಶನ್‌ಗೆ ಕಾರಣವಾಗುತ್ತದೆ. ಪಿಸಿಒಡಿಯನ್ನು ನಿರ್ಲಕ್ಷಿಸಿದರೆ ಇದು ಮುಂದುವರಿದು ಪಿಸಿಒಸ್‌ ಆಗಬಹುದು.

ಪಿಸಿಒಎಸ್‌ ಅಪರೂಪದ ಮುಟ್ಟಿನ ಚಕ್ರಗಳು, ವಿಸ್ತರಿಸಿದ ಅಂಡಾಶಯದ ಚೀಲಗಳು ಮತ್ತು ಹಾರ್ಮೋನುಗಳ ಬದಲಾವಣೆಯಂತಹ ವಿವಿಧ ಚಿಹ್ನೆಗಳನ್ನು ಒಳಗೊಂಡಿದೆ. ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ಹೊಂದಿರುವ ಮಹಿಳೆಯರು ಇನ್ಸುಲಿನ್‌ ಪ್ರತಿರೋಧವನ್ನು ಉಂಟುಮಾಡುವ ಚಯಾಪಚಯ ಅಸ್ವಸ್ಥತೆಗಳನ್ನು ಕೂಡ ಅನುಭವಿಸುತ್ತಾರೆ ಮತ್ತು ಕೆಲವೊಮ್ಮೆ ಇದು ಮಧುಮೇಹಕ್ಕೆ ಕಾರಣವಾಗಬಹುದು.

ಪಿಸಿಒಎಸ್‌ ಸಮಸ್ಯೆಯಲ್ಲಿ ಸಾಮಾನ್ಯವಾಗಿ ಆಂಡ್ರೊಜೆನ್‌ ಮಟ್ಟ ತುಂಬಾ ಹೆಚ್ಚಿರುತ್ತದೆ. ಬಂಜೆತನದ ಅಂಡೋತ್ಪತ್ತಿಯನ್ನು ಕಾಣಬಹುದು.

ಈ ಎಲ್ಲ ರೋಗಲಕ್ಷಣಗಳು ಮಹಿಳೆಯರ ಒಟ್ಟಾರೆ ಯೋಗಕ್ಷೇಮವು ತೀವ್ರವಾಗಿ ಹದಗೆಡುವಂತೆ ಮಾಡುತ್ತದೆ.

ಪಿಸಿಒಡಿಯ ಕಾರಣಗಳು

ಪಿಸಿಒಡಿಯ ಕಾರಣ ಅಸ್ಪಷ್ಟವಾಗಿದೆ. ಪಿಸಿಒಡಿ ಮತ್ತು ದೇಹದಲ್ಲಿ ಉರಿಯೂತ, ಪುರುಷ ಹಾರ್ಮೋನುಗಳ ಅತಿಯಾದ ಉತ್ಪಾದನೆ (ಹೈಪರ್‌ ಆಂಡ್ರೊಜೆನಿಸಂ), ದೇಹದಲ್ಲಿ ಅಧಿಕ ಇನ್ಸುಲಿನ್‌ ಮಟ್ಟ. ಮತ್ತು ಆನುವಂಶೀಯತೆ ನಡುವೆ ಸಂಬಂಧ ಇದೆ ಎಂದು ನಂಬಲಾಗಿದೆ ಹಾಗೂ ಪಿಸಿಒಡಿ ಆರಂಭಿಕ ಋತುಬಂಧ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಉಲ್ಬಣಗೊಳ್ಳುತ್ತದೆ.

  1. ಕಳಪೆ ಜೀವನಶೈಲಿ: ಹದಿಹರೆಯದವರಲ್ಲಿ ಪಿಸಿಒಡಿಯ ಹೆಚ್ಚಳವು ಜಡ ಜೀವನಶೈಲಿ ಮತ್ತು ಪೌಷ್ಟಿಕಾಂಶದ ಆಹಾರದ ಕೊರತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ನಿಷ್ಕ್ರಿಯತೆ (ಕಡಿಮೆ ದೈಹಿಕ ಶ್ರಮ), ತೂಕ ಹೆಚ್ಚಾಗುವುದು ಮತ್ತು ಸ್ಥೂಲಕಾಯತೆಯು ಇನ್ಸುಲಿನ್‌ ಪ್ರತಿರೋಧದಂತಹ ಚಯಾಪಚಯ ಅಸಮತೋಲನಕ್ಕೆ ಕೊಡುಗೆ ನೀಡುತ್ತದೆ. ಇದು ಪಿಸಿಓಡಿ ಗೆ ಕಾರಣವಾಗುತ್ತದೆ.
  2. ಬೊಜ್ಜು: ಎನ್‌ಸಿಬಿಐ ಲೇಖನದ ಪ್ರಕಾರ ಸ್ಥೂಲಕಾಯವು ಪಾಲಿಸಿಸ್ಟಿಕ್‌ ಓವರಿ ಕಾಯಿಲೆಗೆ ಪೂರ್ವಭಾವಿ ಅಂಶವಾಗಿದೆ ಹಾಗೂ ಪಿಸಿಒಡಿಯ ಬೆಳವಣಿಗೆಯು ಮತ್ತಷ್ಟು ತೂಕ ಹೆಚ್ಚಳಕ್ಕೆ ಒತ್ತು ನೀಡುತ್ತದೆ.
  3. ಒತ್ತಡ: ನಕಾರಾತ್ಮಕ ಆಲೋಚನೆಗಳು ಮತ್ತು ಒತ್ತಡದ ಜೀವನ, ಹಾರ್ಮೋನ್‌ ಅಸಮತೋಲನವನ್ನು ಉಂಟುಮಾಡುತ್ತದೆ.
  4. ಹಾರ್ಮೋನುಗಳ ಅಸಮತೋಲನ: ದೇಹದಲ್ಲಿ ಅಧಿಕ ಇನ್ಸುಲಿನ್‌ ಮಟ್ಟ ಆಂಡ್ರೊ ಜೆನ್‌ (ಪುರುಷ ಹಾರ್ಮೋನ್‌) ಉತ್ಪಾದನೆಯನ್ನು ಹೆಚ್ಚಿಸಬಹುದು (ಹೆಣ್ಣಿನಲ್ಲಿ ಪುರುಷ ಹಾರ್ಮೋನ್‌ ಸಾಮಾನ್ಯವಾಗಿ ಕಡಿಮೆ ಇರುತ್ತದೆ). ಇದರಿಂದಾಗಿ ಅಂಡೋತ್ಪತ್ತಿ ಸಮಸ್ಯೆ, ಮೊಡವೆ ಮತ್ತು ಹಿರ್ಸುಟಿಸಮ್‌ ಉಂಟುಮಾಡುತ್ತದೆ.

ರೋಗ ನಿರ್ಣಯ ಮತ್ತು ವ್ಯತ್ಯಾಸ

ಪರಿಣಾಮಕಾರಿ ನಿರ್ವಹಣೆಗೆ ನಿಖರವಾದ ರೋಗನಿರ್ಣಯವು ನಿರ್ಣಾಯಕವಾಗಿದೆ.

ಪಿಸಿಒಡಿ ಮತ್ತು ಪಿಸಿಒಎಸ್‌ ವಿಭಿನ್ನ ಲಕ್ಷಣಗಳನ್ನು ಹೊಂದಿದ್ದರೂ ಕೆಲವೊಂದು ಲಕ್ಷಣಗಳು ಸಾಮಾನ್ಯವಾಗಿರುತ್ತವೆ. ಎರಡೂ ಪರಿಸ್ಥಿತಿಗಳಲ್ಲಿ ಅನಿಯಮಿತ ಮುಟ್ಟಿನ ಚಕ್ರಗಳು, ಅತಿಯಾದ ಮೊಡವೆಗಳು, ಕೂದಲು ತೆಳುವಾಗುವುದು ಮತ್ತು ತೂಕದ ಏರಿಳಿತ ಸಾಮಾನ್ಯವಾಗಿರುತ್ತದೆ. ಆದ್ದರಿಂದ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನವಿಲ್ಲದೆ ನಿಖರವಾದ ರೋಗನಿರ್ಣಯ ಕಷ್ಟವಾಗುತ್ತದೆ.

ಪಿಸಿಒಡಿ ಮತ್ತು ಪಿಸಿಒಎಸ್‌ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಕ್ಲಿನಿಕಲ್‌ ಮೌಲ್ಯಮಾಪನ, ರಕ್ತ ಪರೀಕ್ಷೆಗಳು ಮತ್ತು ಇಮೇಜಿಂಗ್‌ ಅಧ್ಯಯನಗಳ ಸಂಯೋಜನೆಯನ್ನು ಮಾಡಬೇಕಾಗುತ್ತದೆ. ಅಲ್ಟ್ರಾಸೌಂಡ್‌ ಸ್ಕ್ಯಾನ್‌ನಿಂದ ಅಂಡಾಶಯಗಳ ಮೇಲೆ ಚೀಲಗಳ ಉಪಸ್ಥಿತಿಯನ್ನು ಕಂಡು ಹಿಡಿಯಬಹುದು. ಹಾರ್ಮೋನುಗಳ ವಿಶ್ಲೇಷಣೆಗಳು ನಿರ್ದಿಷ್ಟ ಅಸಮತೋಲನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಇವೆಲ್ಲವೂ ಪಿಸಿಒಡಿ ಮತ್ತು ಪಿಸಿಒಎಸ್‌ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ.

ಪಿಸಿಒಡಿ ಸಮಸ್ಯೆ ಪರಿಹಾರ ಮತ್ತು ಚಿಕಿತ್ಸೆ

ಪಿಸಿಒಡಿಗೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳ ಅನುಸಾರವಾಗಿ ರೋಗಲಕ್ಷಣಗಳ ತೀವ್ರತೆ ಮತ್ತು ತೊಡಕುಗಳ ಸಾಧ್ಯತೆಯನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುವ ಹಲವಾರು ನಿರ್ವಹಣ ತಂತ್ರಗಳಿವೆ.

1. ಸ್ತ್ರೀ ರೋಗತಜ್ಞರನ್ನು ಭೇಟಿ ಮಾಡಿ ಹಾರ್ಮೋನು ಅಸಮತೋಲನ ಸಂಭಂದಿಸಿದ ಚಿಕಿತ್ಸೆ ಪಡೆಯಬೇಕು. ಹಿರ್ಸುಟಿಸಮ್‌ ಮತ್ತು ಅನಿಯಮಿತ ಋತುಚಕ್ರಗಳಂತಹ ನಿರ್ದಿಷ್ಟ ರೋಗಲಕ್ಷಣಗಳನ್ನು ನಿರ್ವಹಿಸಲು ಔಷಧಗಳು ಲಭ್ಯವಿವೆ. ಉದಾಹರಣೆಗೆ, ಮೌಖೀಕ ಗರ್ಭನಿರೋಧಕ ಮಾತ್ರೆಗಳು ಹಾರ್ಮೋನ್‌ ಮಟ್ಟವನ್ನು ಸಾಮಾ ನ್ಯಿàಕರಿಸಲು ಸಹಾಯ ಮಾಡುತ್ತವೆ ಮತ್ತು ಪಿಸಿಒಡಿ ಹೊಂದಿರುವ ಮಹಿಳೆಯರಿಗೆ ನಿಯಮಿತ ಋತುಚಕ್ರವನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಎಂಡೋಮೆಟ್ರಿಯಲ್‌ ಲೈನಿಂಗ್‌ ಅನ್ನು ತ್ಯಜಿಸಲು ಮತ್ತು ಅನಂತರದ ಜೀವನದಲ್ಲಿ ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಲು ಕೂಡ ಇದು ಸಹಾಯ ಮಾಡುತ್ತದೆ.

ಸಂಯೋಜಿತ ಮೌಖೀಕ ಗರ್ಭ ನಿರೋಧಕಗಳು ವಿಶೇಷವಾಗಿ ಪರಿಣಾ ಮಕಾರಿ. ಇನ್ಸುಲಿನ್‌ ಪ್ರತಿರೋಧವನ್ನು ಕಡಿಮೆ ಮಾಡುವುದು, ಆಂಡ್ರೊ ಜೆನ್‌ ಮತ್ತು ಟೆಸ್ಟೋಸ್ಟೆರಾನ್‌ ಮಟ್ಟ ವನ್ನು ಕಡಿಮೆ ಮಾಡುವುದು, ಫಲವತ್ತತೆಯ ಪುನಃಸ್ಥಾಪನೆ, ನಿಯ ಮಿತ ಮುಟ್ಟಿನ ಪುನಃಸ್ಥಾಪನೆ ಮತ್ತು ಎಂಡೊಮೆಟ್ರಿಯಲ್‌ ಹೈಪರ್‌ಲಾಸಿಯಾ ಮತ್ತು ಎಂಡೊ ಮೆಟ್ರಿಯಲ್‌ ಕ್ಯಾನ್ಸರ್‌ ತಡೆಗಟ್ಟುವಿಕೆ.

2. ಚರ್ಮರೋಗ ತಜ್ಞರನ್ನು ಭೇಟಿ ಮಾಡಿ ಎಣ್ಣೆಯುಕ್ತ ಚರ್ಮ ಮತ್ತು ಮೊಡವೆ, ಮುಖದಲ್ಲಿ ಕೂದಲು ಬೆಳೆಯುವಿಕೆಗೆ ಚಿಕಿತ್ಸೆ ಪಡೆಯಬಹುದು. ಪಿಸಿಒಡಿ ಹೊಂದಿರುವ ಮಹಿಳೆಯರು, ವಿಶೇಷವಾಗಿ ಅವರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ಪೌಷ್ಠಿಕ ಆಹಾರದ ಸೇವನೆ ಮತ್ತು ಸಾಕಷ್ಟು ದೈಹಿಕ ಚಟುವಟಿಕೆಯೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ನಡೆಸುವತ್ತ ಗಮನ ಹರಿಸುವುದು ಬಹಳ ಮುಖ್ಯ. ಅತಿಯಾದ ದೇಹದ ತೂಕವು ದೇಹದಲ್ಲಿ ಇನ್ಸುಲಿನ್‌ ಪ್ರತಿರೋಧವನ್ನು ಹೆಚ್ಚಿಸುವ ಮತ್ತು ಪಿಸಿಒಡಿ ರೋಗಲಕ್ಷಣಗಳನ್ನು ಹೆಚ್ಚಿಸುವ ಅಥವಾ ಹದಗೆಡಿಸುವ ಕಾರಣದಿಂದಾಗಿ ಇದು ಅತ್ಯಂತ ಮುಖ್ಯವಾಗಿದೆ.

3.ತೂಕ ಇಳಿಕೆ ಸರಿಯಾದ ತೂಕವನ್ನು ಕಾಪಾಡಿಕೊಳ್ಳುವುದು ಪಿಸಿಒಡಿಯನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಸ್ವಲ್ಪ ತೂಕ ನಷ್ಟ ಕೂಡ ರೋಗದ ಚಿಕಿತ್ಸೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ತೂಕ ನಷ್ಟವು ಸಂತಾನೋತ್ಪತ್ತಿ ಅಂಶಗಳನ್ನು ಸುಧಾರಿಸಬಹುದು. ಉದಾಹರಣೆಗೆ, ಋತುಚಕ್ರವನ್ನು ನಿಯಂತ್ರಿಸುವುದು ಮತ್ತು ಅಂಡೋತ್ಪತ್ತಿ ಮತ್ತು ಇನ್ಸುಲಿನ್‌ ಸೂಕ್ಷ್ಮತೆಯಂತಹ ಚಯಾಪಚಯ ಅಂಶಗಳಿಗೆ ಸಹಾಯ ಮಾಡುತ್ತದೆ. ಇದು ಪಿಸಿಒಡಿ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

4.ಆಹಾರ ಪದ್ಧತಿ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಪಿಸಿಒಡಿ ರೋಗಲಕ್ಷಣಗಳಲ್ಲಿ ಭಾರಿ ವ್ಯತ್ಯಾಸ ಕಾಣಬಹುದು.

ಅಧಿಕ ತೂಕ ಅಥವಾ ಸ್ಥೂಲಕಾಯ ಇದ್ದಲ್ಲಿ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಿ ತೂಕ ಕಡಿಮೆ ಮಾಡಿಕೊಳ್ಳುವುದರಿಂದ ಸಾಮಾನ್ಯ ಅಂಡೋತ್ಪತ್ತಿ / ಮುಟ್ಟಿನ ಮರುಸ್ಥಾಪಿಸುವಲ್ಲಿ ಪರಿಣಾಮಕಾರಿಯಾಗುತ್ತದೆ.

ಪಿಸಿಒಡಿಯಿಂದ ಬಳಲುತ್ತಿರುವವರು ಸಾಕಷ್ಟು ಪ್ರೋಟೀನ್‌ ಮತ್ತು ಫೈಬರ್‌ ಯುಕ್ತ ಆಹಾರಗಳನ್ನು ಸೇವಿಸಬೇಕು. ಆಹಾರದಲ್ಲಿ ಸಕ್ಕರೆ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಕಡಿಮೆ/ ಸೀಮಿತವಾಗಿರಬೇಕು.

ಸರಿಯಾದ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹದಿಹರೆಯದವರು ಇಷ್ಟಪಡುವ ಜಂಕ್‌ ಫ‌ುಡ್‌ ಹಾಗೂ ಕೊಬ್ಬಿನಂಶ ಆಹಾರ, ಕರಿದ ತಿಂಡಿ, ಡೈರಿ ತಿಂಡಿ, ಅಧಿಕ ಸಕ್ಕರೆಯುಕ್ತ ಆಹಾರ/ತಿಂಡಿಗಳು ಮತ್ತು ಸರಳ ಕಾಬೋìಹೈಡ್ರೇಟ್‌ ಗಳಂತಹ ಉರಿಯೂತವನ್ನು ಉಂಟುಮಾಡುವ ಆಹಾರ ಗುಂಪುಗಳ ಸೇವನೆಯನ್ನು ಕಡಿಮೆ ಮಾಡುವುದು ಪ್ರಯೋಜನಕಾರಿಯಾಗಿದೆ.

ಹಣ್ಣುಹಂಪಲುಗಳು,, ತರಕಾರಿಗಳು ಮತ್ತು ಧಾನ್ಯದ ಮೂಲಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಋತುಚಕ್ರ ಕ್ರಮಬದ್ಧತೆಗೆ ಅನುಕೂಲವಾಗುತ್ತದೆ.

ರಕ್ತಸ್ರಾವದಿಂದಾಗಿ ಪಿಸಿಒಡಿ ಮಹಿಳೆಯರಲ್ಲಿ ಕಬ್ಬಿಣದ ಕೊರತೆಯು ಸಾಮಾನ್ಯವಾಗಿದೆ. ಇದು ರಕ್ತಹೀನತೆಗೆ ಕಾರಣವಾಗಬಹುದು. ಆದ್ದರಿಂದ ಕಬ್ಬಿಣದಂಶವಿರುವ ಆಹಾರವನ್ನು (ರಾಗಿ, ಕೆಂಪು ಹರಿವೆ ಸೊಪ್ಪು, ಬೀಟ್‌ ರೂಟ್‌, ನುಗ್ಗೆ ಕೋಡು, ನುಗ್ಗೆ ಸೊಪ್ಪು, ಪಾಲಕ್‌ ಸೊಪ್ಪು ದಾಳಿಂಬೆ ಹಣ್ಣು ಇತ್ಯಾದಿ) ಸೇವಿಸುವುದರಿಂದ ಪಿಸಿಒಡಿಯನ್ನು ತಡೆಯಬಹುದು.

ಕೆಫೀನ್‌ (ಕಾಫಿ ಕುಡಿಯುವುದು) ಅನ್ನು ಕಡಿಮೆ ಮಾಡಿ. ಮುಟ್ಟಿನ ಸಮಯ ದಲ್ಲಿ ಅತಿಯಾದ ಖಾರ, ಎಣ್ಣೆಯಿಂದ ಮಾಡಿದ ಆಹಾರ ಪದಾರ್ಥ ಹಾಗೂ ಉಷ್ಣವಾಗುವ ಆಹಾರಗಳನ್ನು ಸೇವಿಸದೆ, ದೇಹಕ್ಕೆ ತಂಪೆನಿಸುವ ಆಹಾರ ತೆಗೆದುಕೊಳ್ಳಬೇಕು. ರಸಭರಿತ ಹಣ್ಣುಹಂಪಲುಗಳು, ತರಕಾರಿಗಳು, ದಿನಕ್ಕೆ 2ರಿಂದ 3 ಲೀಟರಿನಷ್ಟು ನೀರು ಕುಡಿಯವುದು. ದಿನಕ್ಕೆ ಒಂದು ಅಥವಾ ಎರಡು ಎಳನೀರು ಕುಡಿಯುವುದು, ಕುಚ್ಚಿಗೆ ಅನ್ನದ ಗಂಜಿ ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆಯಾಗುತ್ತದೆ.

ಮಾನಸಿಕ ಆರೋಗ್ಯ ವೃದ್ಧಿಸಿ

ಹದಿದರೆಯ ಹೆಣ್ಣುಮಕ್ಕಳು ಮುಖ ದಲ್ಲಿ ಜಾಸ್ತಿ ಮೊಡವೆ, ಕೂದಲು (ಹಿರ್ಸುಟಿಸಮ್‌) ಅಥವಾ ಸ್ಥೂಲಕಾಯತೆ, ಹಾಗೂ ಹಾರ್ಮೋ ನುಗಳ ಅಸಮತೋಲನದಿಂದ ಕೀಳರಿಮೆ, ನೈಚ್ಯಭಾವ, ಖನ್ನತೆ ಉಂಟಾಗಬಹುದು. ಇಂಥವರು ಸ್ವ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಆವಶ್ಯಕತೆ ಇದ್ದರೆ ಮಾನಸಿಕ ವೈದ್ಯರು/ಸಲಹೆಗಾರರ(ಕೌನ್ಸೆಲರ್‌) ಭೇಟಿ ಮಾಡಿ ಆತ್ಮವಿಶ್ವಾಸ, ಆಂತರಿಕ ಪ್ರೇರಣೆಯನ್ನು ಹೆಚ್ಚಿಸಿಕೊಳ್ಳಬೇಕು.

ವ್ಯಾಯಾಮ

ಆರೋಗ್ಯಕರ ಆಹಾರದಷ್ಟೇ ವ್ಯಾಯಾಮ ಕೂಡ ಮುಖ್ಯ. ದಿನಕ್ಕೆ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಮಾಡುವುದು ಅಗತ್ಯವಾಗಿದೆ. ಹಲವಾರು ರೀತಿಯ ವ್ಯಾಯಾಮಗಳಲ್ಲಿ ನಿಮಗೆ ಸುಲಭವೆನಿಸಿದ ಯಾವುದಾದರೂ ಮಾಡಬಹುದು. ದೈನಂದಿನ ವ್ಯಾಯಾಮವು ಹಾರ್ಮೋನ್‌ ಅಸಮತೋಲನವನ್ನು ಸುಧಾರಿಸುತ್ತದೆ ಎಂದು ಇತ್ತೀಚೆಗಿನ ಸಂಶೋಧನೆಯು ಸೂಚಿಸುತ್ತದೆ.

ವಾಕಿಂಗ್‌, ಸೈಕ್ಲಿಂಗ್‌, ಜಾಗಿಂಗ್‌, ಈಜು, ಏರೋಬಿಕ್‌ ವ್ಯಾಯಾಮಗಳು, ಪುಷ್‌-ಅಪ್‌ಗ್ಳು, ಜಿಮ್‌ಗೆ ಸಂಬಂಧಿಸಿದ ವ್ಯಾಯಾಮಗಳು ಹಾಗೂ ಪೆಲ್ವಿಕ್‌ ಸ್ಟ್ರೆಚ್ಚಿಂಗ್‌ ಯೋಗ ವಿಧಾನಗಳು.

ಯೋಗ ಭಂಗಿಗಳು/ವಿಧಾನಗಳು: ಯೋಗ ಮಾಡುವುದರಿಂದ ಮನಸ್ಸಿಗೆ ವಿಶ್ರಾಮ ಸಿಗುವುದಲ್ಲದೆ ತೂಕದ ಹೆಚ್ಚಳದ ಒತ್ತಡವನ್ನು ಸುಲಭಗೊಳಿಸಿ ಅನಿಯಮಿತ ಋತುಚಕ್ರ ಸರಿಪಡಿಸುವಲ್ಲಿ ಸಹಾಯಕವಾಗುತ್ತದೆ.

ಪ್ರಾಣಾಯಾಮ, ಸೂರ್ಯ ನಮಸ್ಕಾರ, ಶ್ರೋಣಿಯ ಹಿಗ್ಗಿಸುವಿಕೆಯ ಯೋಗಗಳು (ಪೆಲ್ವಿಕ್‌ ಸ್ಟ್ರೆಚಿಂಗ್‌ ಯೋಗ), ಶವಾಸನ ಇವುಗಳನ್ನು ದಿನಾಲು ಕನಿಷ್ಟ 20 ನಿಮಿಷ ಮಾಡಬೇಕು.

ಶ್ರೋಣಿಯ ಹಿಗ್ಗಿಸುವಿಕೆಯ ಯೋಗಗಳು (ಪೆಲ್ವಿಕ್‌ ಸ್ಟ್ರೆಚಿಂಗ್‌ ಯೋಗ)

  1. ಪದ್ಮಾಸನ
  2. ಬದ್ಧಕೋನಸಾನ (ಚಿಟ್ಟೆ ಭಂಗಿ): ಇದು ಒಳ ತೊಡೆಗಳು, ಜನನಾಂಗ ಮತ್ತು ಮೊಣಕಾಲುಗಳನ್ನು ವಿಸ್ತರಿಸಿ ಖಾಸಗಿ ಭಾಗ ಮತ್ತು ಸೊಂಟದ ಪ್ರದೇಶಗಳಲ್ಲಿ ನಮ್ಯತೆಯನ್ನು ಸುಧಾರಿಸುತ್ತದೆ. ಸೊಂಟ ಮತ್ತು ತೊಡೆಸಂದುಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡಲು ಇದು ಸಹಾಯ ಮಾಡುತ್ತದೆ.
  3. ಸುಪ್ತಬದ್ಧಕೋನಾಸನವು ಚಿಟ್ಟೆಯ ಭಂಗಿಯಂತೆಯೇ ಮಲಗಿಕೊಂಡು ಮಾಡುವುದು. ಇದನ್ನು ಮಾಡುವುದರಿಂದಲೇ ಬಹಳಷ್ಟು ವಿಶ್ರಾಂತಿ ಸಿಗುವುದು.
  4. ಉಪವಿಸ್ತಕೋನಾಸನ: ಶ್ರೋಣಿಯ ಮಾಂಸಖಂಡಗಳ ಹಿಗ್ಗಿಸುವಿಕೆಗೆ ಒಳ್ಳೆಯದು.
  5. ಭಾರದ್ವಾಜಾಸನ: ಕುಳಿತುಕೊಂಡು ಬೆನ್ನನ್ನು ತಿರುಗಿಸುವುದು.
  6. ಚಕ್ಕಿ ಚಲನಾಸನ: ರುಬ್ಬುಗುಂಡನ್ನು ಆಡಿಸುವುದು.
  7. ಪದ್ಮಾಸನ ನಿಮಗೆ ಅನುಕೂಲವಿದ್ದರೆ ಯೋಗ ತರಬೇತಿ ಕೇಂದ್ರಕ್ಕೆ ಭೇಟಿ ಕೊಟ್ಟು ಯೋಗವನ್ನು ಕಲಿಯಬಹುದು.

ವಿ.ಸೂ.: ಬೆನ್ನುನೋವಿನ ಸಮಸ್ಯೆ ಮತ್ತು ಡಿಸ್ಕ್ ಪ್ರೊಲ್ಯಾಪ್ಸ್‌ ಇದ್ದವರು ಯೋಗ ತರಬೇತಿಗಾರರ ಸಲಹೆಯನ್ನು ಪಡೆಯಬೇಕು.

ತೊಡಕುಗಳು

ಪಿಸಿಒಡಿಯಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಜೀವನದಲ್ಲಿ ಅನಂತರ ಪಿಸಿಒಎಸ್‌ಗೆ ತುತ್ತಾಗಿ ಈ ಕೆಳಗಿನ ಇತರ ರೀತಿಯ ಆರೋಗ್ಯ ತೊಂದರೆಗಳಿಂದ ಬಳಲುವ ಸಾಧ್ಯತೆಯಿರುತ್ತದೆ.

ಟೈಪ್‌ 2 ಡಯಾಬಿಟಿಸ್‌ ಮೆಲ್ಲಿಟಸ್‌: ಇನ್ಸುಲಿನ್‌ ಪ್ರತಿರೋಧ ಮತ್ತು ಇನ್ಸುಲಿನ್‌ ಕೊರತೆಯಿಂದಾಗಿ ರಕ್ತದಲ್ಲಿ ಅಧಿಕ ಸಕ್ಕರೆಯಂಶ ಅಧಿಕವಾಗುತ್ತದೆ.

-ಮುಂದಿನ ವಾರಕ್ಕೆ

ಡಾ| ಅನುಸೂಯ,

ಅಸೊಸಿಯೇಟ್‌ ಪ್ರೊಫೆಸರ್‌,

ಸಮುದಾಯ ಆರೋಗ್ಯ ನರ್ಸಿಂಗ್‌ ವಿಭಾಗ

ಮಣಿಪಾಲ ಕಾಲೇಜ್‌ ಆಫ್‌ ನರ್ಸಿಂಗ್‌,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)

 

Advertisement

Udayavani is now on Telegram. Click here to join our channel and stay updated with the latest news.

Next