ಇಸ್ಲಾಮಾಬಾದ್ : ನಾಯಕ ಬಾಬರ್ ಅಜಮ್ ಮತ್ತು ಮುಖ್ಯ ಕೋಚ್ ಮಿಕ್ಕಿ ಆರ್ಥರ್ ಅವರ ಒತ್ತಾಯದ ಮೇರೆಗೆ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಸ್ಪಿನ್ ಬೌಲಿಂಗ್ ದಾಳಿಯನ್ನು ಮರು ಮೌಲ್ಯಮಾಪನ ಮಾಡುವ ತನ್ನ ಸಲಹೆಯನ್ನು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ನಿರ್ಲಕ್ಷಿಸಿದೆ ಎಂದು ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.
ಪಾಕ್ ಉಪನಾಯಕ ಮತ್ತು ಮುಂಚೂಣಿಯ ಸ್ಪಿನ್ನರ್ ಶಾದಾಬ್ ಖಾನ್ ಆರು ಪಂದ್ಯಗಳಲ್ಲಿ ತೋರಿಸಲು ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದರೆ, ಪಾರ್ಟ್‌ಟೈಮರ್ ಇಫ್ತಿಕಾರ್ ಅಹ್ಮದ್ ಅವರು ನಾಲ್ಕು ಮತ್ತು ಯುವ ಆಟಗಾರ ಉಸಾಮಾ ಮಿರ್ ಅವರು ನಾಲ್ಕು ವಿಕೆಟ್ ಗಳನ್ನು ಮಾತ್ರ ಹೊಂದಿದ್ದಾರೆ.
ತನ್ನ ಮತ್ತು ಮೊಹಮ್ಮದ್ ಹಫೀಜ್ ಅವರ ಸಲಹೆಯ ಹೊರತಾಗಿಯೂ, ಪಿಸಿಬಿ ಪಾಕಿಸ್ಥಾನದ ಸ್ಪಿನ್ ದಾಳಿಯನ್ನು ಮರುಪರಿಶೀಲಿಸದಿರಲು ನಿರ್ಧರಿಸಿತು ಎಂದು ಮಿಸ್ಬಾ ಆರಿ ನ್ಯೂಸ್ ಚಾನೆಲ್‌ನ ಸಂದರ್ಶನದಲ್ಲಿ ಹೇಳಿದರು.
ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ನನ್ನ ಮತ್ತು ಹಫೀಜ್‌ರ ಸಲಹೆಯನ್ನು ಕೇಳಿದಾಗ. ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಅವರ ಫಾರ್ಮ್ ಏಷ್ಯಾಕಪ್‌ಗಿಂತ ಮೊದಲಿನಿಂದಲೂ ಕಳವಳಕ್ಕೆ ಕಾರಣವಾಗಿರುವುದರಿಂದ ಇನ್ನೊಬ್ಬ ಸ್ಪಿನ್ನರ್ ಅಗತ್ಯವಿದೆ ಎಂದು ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೆ ”ಎಂದು ನೆನಪಿಸಿಕೊಂಡರು.
ಸೆಮಿಫೈನಲ್‌ಗೆ ಪ್ರವೇಶಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ಎದುರಿಸಿ ಶನಿವಾರ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಸತತ ಮೂರನೇ ವಿಶ್ವಕಪ್ ನಲ್ಲಿ ಅಂತಿಮ ನಾಲ್ಕರೊಳಗೆ ಕಾಣಿಸಿಕೊಳ್ಳಲು ಪಾಕ್ ತಂಡ ವಿಫಲವಾಯಿತು.