Advertisement

PBKS vs RR: ಎರಡನೇ ತವರಲ್ಲಿ ಪ್ಲೇ ಆಫ್ಗೆ ಕಾದಿದೆ ರಾಜಸ್ಥಾನ್‌ ರಾಯಲ್ಸ್‌

12:05 PM May 15, 2024 | Team Udayavani |

ಗುವಾಹಟಿ: ರಾಜಸ್ಥಾನ್‌ ರಾಯಲ್ಸ್‌ ತನ್ನ ಎರಡನೇ ತವರಾದ ಗುವಾಹಟಿಯಲ್ಲಿ ಪ್ಲೇ ಆಫ್ ಪ್ರವೇಶದ ಭಾರೀ ದೊಡ್ಡ ನಿರೀಕ್ಷೆ ಹೊತ್ತು ಕಣಕ್ಕಿಳಿಯಲಿದೆ. ಈಗಾಗಲೇ ಕೂಟದಿಂದ ನಿರ್ಗಮಿಸಿರುವ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

Advertisement

ಇದು ಇತ್ತಂಡಗಳ ನಡುವಿನ 2ನೇ ಸುತ್ತಿನ ಪಂದ್ಯ. ಮುಲ್ಲಾನ್‌ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್‌ 3 ವಿಕೆಟ್‌ ಜಯ ಸಾಧಿಸಿತ್ತು. ಹೀಗಾಗಿ ಇದು ಪಂಜಾಬ್‌ ಪಾಲಿಗೆ ಸೇಡಿನ ಪಂದ್ಯ. ತನಗೆ ಮುನ್ನಡೆಯಲಾಗದಿದ್ದರೂ ರಾಜಸ್ಥಾನ್‌ ಮುನ್ನಡೆಯನ್ನು ಇನ್ನಷ್ಟು ದಿನಗಳ ಕಾಲ ತಡೆಹಿಡಿದರೆ ಅದೇ ಪಂಜಾಬ್‌ ಪಾಲಿನ ಹಿರಿಮೆ ಎನಿಸಲಿದೆ.

ರಾಜಸ್ಥಾನ್‌ ರಾಯಲ್ಸ್‌ ಅಬ್ಬರ ಕಂಡಾಗ ಅದು ಮೊದಲ ತಂಡವಾಗಿ ಪ್ಲೇ ಆಫ್ ಸುತ್ತು ತಲುಪಬೇಕಿತ್ತು. ಆದರೆ ಹೈದರಾಬಾದ್‌, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಅನುಭವಿಸಿದ ಸತತ ಸೋಲು ಸಂಜು ಸ್ಯಾಮ್ಸನ್‌ ಬಳಗದ ಮುನ್ನಡೆಗೆ ಮುಳ್ಳಾಗಿ ಕಾಡಿತು. ಹೀಗಾಗಿ ಪಂಜಾಬ್‌ ವಿರುದ್ಧ ಗೆಲುವು ಅನಿವಾರ್ಯವಾಗಿದೆ. ತಪ್ಪಿದರೆ ಕೆಕೆಆರ್‌ ವಿರುದ್ಧ ಸಾಮರ್ಥ್ಯವನ್ನು ಪಣಕ್ಕೊಡ್ಡಬೇಕಾಗುತ್ತದೆ. ಇದು ಕಟ್ಟಕಡೆಯ ಲೀಗ್‌ ಪಂದ್ಯ ಎಂಬುದನ್ನು ಮರೆಯುವಂತಿಲ್ಲ.

ಪರಾಗ್‌ಗೆ ತವರು ಪಂದ್ಯ

ರಾಜಸ್ಥಾನ್‌ ಪರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತ ಬಂದಿರುವ ಅಸ್ಸಾಮ್‌ನ ರಿಯಾನ್‌ ಪರಾಗ್‌ ಪಾಲಿಗೆ ಇದು ತವರು ಪಂದ್ಯ. ಈಶಾನ್ಯ ಭಾಗದಿಂದ ಐಪಿಎಲ್‌ ಆಡುತ್ತಿರುವ ಮೊದಲ ಕ್ರಿಕೆಟಿಗನೆಂಬುದು ಇವರ ಹೆಗ್ಗಳಿಕೆ.

Advertisement

ಡೈನಾಮಿಕ್‌ ಓಪನರ್‌ಗಳಾದ ಯಶಸ್ವಿ ಜೈಸ್ವಾಲ್‌ (344 ರನ್‌) ಮತ್ತು ಜಾಸ್‌ ಬಟ್ಲರ್‌ (359 ರನ್‌) ಅವರದು ಎವರೇಜ್‌ ಸಾಧನೆಯಾಗಿದೆ. ಆದರೆ ಜಾಸ್‌ ಬಟ್ಲರ್‌ ಸೇವೆ ಇನ್ನು ಲಭಿಸದು. ಇನ್ನೊಂದೆಡೆ ಪಂಜಾಬ್‌ಗ ನಾಯಕ ಸ್ಯಾಮ್‌ ಕರನ್‌ ಕೂಡ ಲಭಿಸುವ ಸಾಧ್ಯತೆ ಇಲ್ಲ. ಇಂಗ್ಲೆಂಡ್‌ ಕ್ರಿಕೆಟಿಗರೆಲ್ಲ ತವರಿಗೆ ಮರಳುತ್ತಿರುವುದು ಐಪಿಎಲ್‌ ತಂಡಗಳಿಗೆ ದೊಡ್ಡ ಹಿನ್ನಡೆಯಾಗಿದೆ. ಕರನ್‌ ಗೈರಲ್ಲಿ ಪಂಜಾಬ್‌ ತಂಡವನ್ನು ಜಿತೇಶ್‌ ಶರ್ಮ ಮುನ್ನಡೆಸುವರು.

ರಾಜಸ್ಥಾನ್‌ ಬೌಲಿಂಗ್‌ ಹೆಚ್ಚು ಘಾತಕ. ಸಂದೀಪ್‌ ಶರ್ಮ, ಟ್ರೆಂಟ್‌ ಬೌಲ್ಟ್, ಅಶ್ವಿ‌ನ್‌, ಚಹಲ್‌ ಬೌಲಿಂಗ್‌ ಆಕ್ರಮಣದ ಪ್ರಮುಖರು. ಪಂಜಾಬ್‌ ಬ್ಯಾಟಿಂಗ್‌ ಸರದಿಯಲ್ಲಿ ಶಶಾಂಕ್‌ ಸಿಂಗ್‌, ಅಶುತೋಷ್‌ ಶರ್ಮ ಮಿಂಚಿನ ಆಟವಾಡುತ್ತ ಬಂದಿದ್ದಾರೆ. ರಾಜಸ್ಥಾನ್‌ ಮೇಲುಗೈ ಸಾಧಿಸಬೇಕಾದರೆ ಇವರಿಬ್ಬರನ್ನು ತಡೆದು ನಿಲ್ಲಿಸುವುದು ಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next