Advertisement

ಕಾಮಗಾರಿ ಮರುಪರಿಶೀಲನೆ ಬಳಿಕ ಬಿಲ್‌ ಪಾವತಿ

11:53 AM May 30, 2018 | Team Udayavani |

ಬೆಂಗಳೂರು: ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಲವು ದಿನಗಳ ಹಿಂದಷ್ಟೇ ನಡೆಸಿದ್ದ ರಸ್ತೆ ಕಾಮಗಾರಿಗಳು ಹಾಳಾಗಿರುವ ಜತೆಗೆ ಕೆಲವು ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳದೆ ಬಿಲ್‌ ಪಾವತಿ ಮಾಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಆ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಿ ವರದಿ ಪಡೆದ ಬಳಿಕವೇ ಬಿಲ್‌ ಪಾವತಿಸಬೇಕು ಎಂದು ಮೇಯರ್‌ ಸಂಪತ್‌ ರಾಜ್‌ ಸೂಚನೆ ನೀಡಿದ್ದಾರೆ.

Advertisement

ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಂಟು ವಲಯಗಳ ಜಂಟಿ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಬಿಬಿಎಂಪಿಯಲ್ಲಿ ಮಂಗಳವಾರ ಸಭೆ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಟೆಂಡರ್‌ಶ್ಯೂರ್‌ ವಿಧಾನದಡಿ ಅಭಿವೃದ್ಧಿಪಡಿಸಿದ ರಸ್ತೆಗಳಲ್ಲೂ ನೀರು ನಿಲ್ಲುತ್ತಿದೆ.

ಮಳೆ ಬಂದ ವೇಳೆ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪಾಲಿಕೆಗೆ ಸಾಕಷ್ಟು ದೂರುಗಳು ಬಂದಿವೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಕೂಡಲೇ ನ್ಯೂನತೆ ಸರಿಪಡಿಸಿಕೊಳ್ಳಬೇಕು. ಯಾವುದೇ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು.

ಕಳೆದ ಮಳೆಗಾಲದಲ್ಲಿ ಉಂಟಾದಂತೆ ಅವಘಡಗಳು ಈ ಬಾರಿ ಸಂಭವಿಸದಂತೆ ಎಚ್ಚರ ವಹಿಸಬೇಕು. ಮಳೆಗಾಲದಲ್ಲಿ ರಸ್ತೆ ಗುಂಡಿ ಸೃಷ್ಟಿಯಾಗದಂತೆ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ಸಂಭವಿಸುವ ಅನಾಹುತಗಳಿಗೆ ಸಂಬಂಧಪಟ್ಟ ಎಂಜಿನಿಯರ್‌ಗಳನ್ನೇ ಹೊಣೆ ಮಾಡಲಾಗುವುದು ಎಂದರು.

ರಾಜರಾಜೇಶ್ವರಿನಗರ ಹಾಗೂ ಜಯನಗರ ಕ್ಷೇತ್ರಗಳ ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸಾಕಷ್ಟು ಅಧಿಕಾರಿ, ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಹಾಗಾಗಿ ಮಳೆ ಸುರಿದ ತಕ್ಷಣವೇ ಸ್ಪಂದಿಸುವುದು ಕಷ್ಟವಾಗಲಿದೆ ಎಂಬ ವಿಚಾರವನ್ನು ಕೆಲ ಅಧಿಕಾರಿಗಳು ಮೇಯರ್‌ ಗಮನಕ್ಕೆ ತಂದು ಉತ್ತರ ಪಡೆದರು.

Advertisement

ಮಳೆಗಾಲ ಮುಗಿಯುವವರೆಗೆ ಪಾಲಿಕೆ ಕೇಂದ್ರ ಕಚೇರಿ ಸೇರಿದಂತೆ ವಲಯದ ಎಲ್ಲಾ ಸಹಾಯವಾಣಿ ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸಬೇಕು. ಅವಘಡಗಳು ಸಂಭವಿಸಿದರೆ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು. ಮಾಜಿ ಮೇಯರ್‌ ಪದ್ಮಾವತಿ, ನರಸಿಂಹ ಮೂರ್ತಿ, ಆಡಳಿತ ಪಕ್ಷದ ನಾಯಕರು ಇದ್ದರು.

ಅಧಿಕಾರಿಗಳಿಗೆ ಸೂಚನೆ: ಚುನಾವಣೆ ಕಾರ್ಯದ ಜತೆಗೆ ಜನರ ಯೋಗಕ್ಷೇಮ ಮುಖ್ಯ. ಚುನಾವಣೆ ಕೆಲಸದ ನೆಪ ಹೇಳಿ, ಬಿಬಿಎಂಪಿ ಕೆಲಸ ಕಾರ್ಯ ಮಾಡದಿರುವುದು ಸರಿಯಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳು ಸನ್ನದ್ಧರಾಗಿಬೇಕು. ರಕ್ಷಣಾ ಕಾರ್ಯಕ್ಕೆ ಅಗತ್ಯವಾದ ಎಲ್ಲಾ ಸಾಧನ, ಸಲಕರಣೆಗಳನ್ನು ಹೊಂದಿಸಿಕೊಳ್ಳಬೇಕು ಎಂದು ಮೇಯರ್‌ ಸಂಪತ್‌ರಾಜ್‌ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next