ಮಂಡ್ಯ: ಕಾಂಗ್ರೆಸ್‌ನಿಂದ “ಪೇಸಿಎಂ’ ಪೋಸ್ಟರ್ ಅಭಿಯಾನ ನಡೆಯುತ್ತಿದ್ದರೆ, ಇತ್ತ ಮಂಡ್ಯ ರೈತರಿಂದ ಪೇ ಫಾರ್ಮರ್ ಅಭಿಯಾನ ಆರಂಭವಾಗಿದ್ದು, ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂಬಂಧ ರಾಜ್ಯ ರೈತ ಸಂಘದ ಫೇಸ್‌ಬುಕ್, ವ್ಯಾಟ್ಸಪ್ ಹಾಗೂ ಮಂಡ್ಯ ಜಿಲ್ಲೆಯ ರೈತ ಮುಖಂಡರ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ಗಳಲ್ಲಿ ಪೇ ಫಾರ್ಮರ್ ಎಂಬ ಕ್ಯೂಆರ್ ಕೋಡ್ ರೀತಿ ಪೇಟಿಎಂ ಪೋಸ್ಟರ್ ರಚಿಸಿ ಟನ್ ಕಬ್ಬಿಗೆ 4500 ರೂ. ನೀಡಿ ಎಂದು ಪೋಸ್ಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
ರಾಜಕೀಯ ನಾಯಕರೇ ನೀವೆಲ್ಲಾ ಒಂದೇ ನಾಣ್ಯದ 2 ಮುಖ. ಕೆಲವರು ಅಧಿಕಾರಕ್ಕಾಗಿ ಸರ್ಕಸ್ ಮಾಡಿದರೆ ಇನ್ನು ಕೆಲವರು ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರಿಗೆ ಮತ ಕೊಟ್ಟ ರೈತರು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದು, ಮೊದಲು ರೈತರುಬೆಳೆದ ಬೆಳೆಗೆ ಸಮರ್ಪಕ ಬೆಲೆ ಕೊಡಿ. ಒಂದು ಟನ್ ಕಬ್ಬಿಗೆ 4500 ರೂ. ನಿಗದಿಮಾಡುವಂತೆ ಮಂಡ್ಯ ರೈತರು ಪೇ ಫಾರ್ಮರ್ ಹೆಸರಿನಲ್ಲಿ ಅಭಿಯಾನ ಶುರು ಮಾಡಿದ್ದಾರೆ.
ಕಾಂಗ್ರೆಸ್-ಬಿಜೆಪಿ ವಿರುದ್ಧ ಕಿಡಿ: ಅಧಿಕಾರಕ್ಕಾಗಿ ಕಾಂಗ್ರೆಸ್ -ಬಿಜೆಪಿ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಆದರೆರೈತರ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕುಎಂದು ರೈತರು ಆಗ್ರಹಿಸುತ್ತಿದ್ದಾರೆ.