Advertisement

ಪಯಸ್ವಿನಿ: ಕುಸಿದ ನೀರಿನ ಪ್ರಮಾಣ –ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯ ಭೀತಿ

11:06 AM Apr 02, 2023 | Team Udayavani |

ಸುಳ್ಯ: ಬಿಸಿಲಿನ ಬೇಗೆ ದಿನೇ ದಿನೇ ಏರುತ್ತಿದ್ದು, ಕೆರೆ, ಬಾವಿ, ಕೊಳವೆ ಬಾವಿ, ಹೊಳೆ, ನದಿ, ತೋಡುಗಳಲ್ಲಿ ನೀರಿನ ಮಟ್ಟ ವಿಪರೀತವಾಗಿ ಕುಸಿಯುತ್ತಿದೆ. ಇದರ ಮಧ್ಯೆ ಸ್ಥಳೀಯಾಡಳಿತಕ್ಕೆ ಜನರಿಗೆ ಕುಡಿಯುವ ನೀರು ಸಮರ್ಪಕ ಪೂರೈಸುವುದೇ ಸವಾಲಾಗಿದೆ. ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಗೆ ಸಂಬಂಧಿಸಿದಂತೆ ನಗರ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಪೂರೈಕೆಗೆ ಪಯಸ್ವಿನಿ ಹೊಳೆ ಹಾಗೂ ಕೆಲ ಕೊಳವೆಬಾವಿಗಳಿಂದ ಆಗುತ್ತಿದೆ. ಪ್ರಸ್ತುತಪಯಸ್ವಿನಿ ಹೊಳೆಯಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿದೆ. ಈಗಾಗಲೇ ನದಿಗೆ ಮಣ್ಣು ಹಾಕಿ ತಡೆ ನಿರ್ಮಿಸಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಜಲಕ್ಷಾಮ ಆತಂಕ ನ.ಪಂ. ವ್ಯಾಪ್ತಿಗೆ ನೀರು ಪೂರೈಸಲು ಪ್ರಮುಖ ಮೂಲವೇ ಪಯಸ್ವಿನಿ ಹೊಳೆ.

Advertisement

ಇಲ್ಲಿ ನೀರು ಕಡಿಮೆಯಾದಲ್ಲಿ ನಗರಕ್ಕೆ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಇತ್ತೀಚೆಗೆ ನಡೆದ ನ.ಪಂ. ಸಭೆಯಲ್ಲೂ ಅಧ್ಯಕ್ಷರು ನೀರಿನ ಸಮಸ್ಯೆ ಉದ್ಭವವಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿ, ನೀರಿನ ಮಿತಬಳಕೆಯ ಜಾಗೃತಿ ಅತ್ಯಗತ್ಯ ಎಂದಿದ್ದರು. ಸುಳ್ಯದ ಕಲ್ಲುಮುಟ್ಲುನಲ್ಲಿ ಪಯಸ್ವಿನಿ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಪಿಲ್ಲರ್‌ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ನಡೆಯುವ ಮೇಲ್ಭಾಗದಲ್ಲಿ ಹೊಳೆಗೆ ಮಣ್ಣು ಹಾಕಿ ನೀರನ್ನು ಹಿಡಿದಿಟ್ಟು, ಜಾಕ್‌ವೆಲ್‌ ಮೂಲಕ ನಗರಕ್ಕೆ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿನ ನೀರು ಕೆಳ ಭಾಗಕ್ಕೆ ಹರಿಯುತ್ತಿರುವುದರಿಂದ ನೀರು ಸಂಗ್ರಹ ಪ್ರಮಾಣ ಕಡಿಮೆಯಾಗುವ ಭೀತಿ ಎದುರಾಗಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ನ.ಪಂ. ವತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ.

ಮೊದಲಾಗಿ ಅನಧಿಕೃತ ನೀರಿನ ಸಂಪರ್ಕ ಪತ್ತೆ ಹಚ್ಚುವ, ಅದನ್ನು ಸಕ್ರಮ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರನ್ನು ತೋಟಕ್ಕೆ ಬಳಸದಂತೆ ಸೂಚಿಸಲಾಗಿದೆ. ನ.ಪಂ. ವತಿಯಿಂದ 4,800 ಮನೆಗಳು ನಳ್ಳಿ ಸಂಪರ್ಕ ಹೊಂದಿದೆ. ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ನಗರಕ್ಕೆ ಕುಡಿಯುವ ನೀರಿನ ಉದ್ದೇಶದಿಂದ ಕಲ್ಲುಮುಟ್ಲು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯ 17 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಸಾಗುತ್ತಿದೆ. ಆದರೂ ಅದು ಈ ಬಾರಿಗೆ ದೊರೆಯದು. 13 ಪಿಲ್ಲರ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ತಡೆ ಗೋಡೆ, ಮತ್ತಿತರ ಕೆಲಸಗಳು ಆಗಬೇಕಿದೆ. ಮುಂದಿನ ಬೇಸಗೆಯಲ್ಲಿ ಕಿಂಡಿಅಣೆಕಟ್ಟಿನಿಂದಲೇ ನಗರಕ್ಕೆ ನೀರು ಸರಬರಾಜಾಗುವ ನಿರೀಕ್ಷೆ ಇದೆ.

ನ.ಪಂ.ನಿಂದ ಅಗತ್ಯ ಕ್ರಮ
ಮುಂದಿನ 15-20 ದಿನಗಳಲ್ಲಿ ಮಳೆಯಾಗದೇ ಇದ್ದಲ್ಲಿ ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿಯಿದೆ. ಈಗಾಗಲೇ 9 ಕೊಳವೆಬಾವಿ ಕೊರೆಯಲು ಅನುಮತಿ ಪಡೆಯಲಾಗಿದೆ. ಅಗತ್ಯ ಇರುವಲ್ಲಿ ನ.ಪಂ. ವತಿಯಿಂದ ವ್ಯವಸ್ಥೆ ಕಲ್ಪಿಸಲಾಗುವುದು.
– ವಿನಯಕುಮಾರ್‌ ಕಂದಡ್ಕ,ಅಧ್ಯಕ್ಷರು, ನಗರ ಪಂಚಾಯತ್‌ ಸುಳ್ಯ

„ದಯಾನಂದ ಕಲ್ನಾರ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next