ಇಂಡಿ: ಗ್ರಾಪಂ ನೌಕರರಿಗೆ ಪ್ರತಿ ತಿಂಗಳು ಸಂಬಳವಾಗುವುದಿಲ್ಲ. ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ಸಂಬಳವಾಗುತ್ತದೆ. ಅದರಲ್ಲಿ ಒಂದು ತಿಂಗಳ ಸಂಬಳ ನೀಡುವುದಿಲ್ಲ. ಇದೇ ರೀತಿ ವರ್ಷದಲ್ಲಿ ಮೂರು ನಾಲ್ಕು ತಿಂಗಳು ಸಂಬಳ ಬರುವುದಿಲ್ಲ. ಹೀಗಾಗಿ ಸಿಬ್ಬಂದಿ ಬಾಕಿ ವೇತನ ಉಳಿದಿದೆ ಎಂದು ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಸಂತೊಷ ವಾಲಿಕಾರ ಹೇಳಿದರು.
ಅವರು ಸೋಮವಾರ ಪಟ್ಟಣದ ತಾಪಂ ಕಾರ್ಯಲಯದ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ಗ್ರಾಪಂ ನೌಕರರ ಕ್ಲರ್ಕ್, ಬಿಲ್ ಕಲೆಕ್ಟರ್, ಸಿಪಾಯಿ, ಕಸಗೂಡಿಸುವವರು ಸೇರಿದಂತೆ ಇನ್ನಿತರ ಸಿಬ್ಬಂದಿ ಗ್ರಾಪಂ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ ಸಂಪೂರ್ಣ ವೇತನ ಪ್ರತಿ ತಿಂಗಳು 5ನೇ ತಾರಿಖೀನ ಒಳಗೆ ಆಗಬೇಕು ಎಂದು ಆಗ್ರಹಿಸಿದರು.
ಸತ್ಯಾಗ್ರಹದಲ್ಲಿ ಸಂಘಟನಾ ಕಾರ್ಯದರ್ಶಿ ನಿಂಗನಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿ ಲಾಲ ಅಹಮ್ಮದ ಶೇಖ, ಸುರೇಶ ಅಳ್ಳಿಮೊರೆ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ತಾಪಂ ಇಒ ಸುನೀಲ ಮದ್ದೀನ ಮನವಿ ಸ್ವೀಕರಿಸಿ ಮಾತನಾಡಿ, ಕೆಲವು ಬೇಡಿಕೆಗಳು ತಾಪಂ ಹಂತದಲ್ಲೇ ಮುಗಿಯುತ್ತವೆ. ಇನ್ನು ಕೆಲವು ಬೇಡಿಕೆಗಳು ಜಿಪಂ ಇಲ್ಲವೆ ರಾಜ್ಯ ಮಟ್ಟದಲ್ಲಿ ಮುಗಿಯುತ್ತವೆ. ತಮ್ಮ ಬೇಡಿಕೆ ಅವರಿಗೆ ತಲುಪಿಸಲಾಗುವದು ಎಂದರು.
ಧರಣಿ ಸತ್ಯಾಗ್ರಹದಲ್ಲಿ ಗೇನಬಾ ಕಂಟಿಕಾರ, ತುಕಾರಾಮ ಮಾರನೂರ, ಪ್ರದೀಪ ಕರ್ಜಗಿ, ಮಲ್ಲಿಕಾರ್ಜುನ ಇಂಗಳೆ, ಲಕ್ಷ್ಮಣ ಪಾಟೀಲ, ಮುನೀರ ಅಹಮ್ಮದ ಕುಡಚಿ ಇದ್ದರು.