Advertisement
ಪ್ರಸ್ತುತ ಪುರೋಹಿತರು ಮತ್ತು ಪಾದ್ರಿಗಳು ವಂಚಕರ ಟಾರ್ಗೆಟ್ ಆಗಿದ್ದಾರೆ. ಯುಪಿಐ ಟ್ರಾನ್ಸಾಕ್ಷನ್‌ಗಳಲ್ಲಿ “ರಿಕ್ವೆಸ್ಟ್’ ಆಪ್ಶನ್ ಬಳಸಿ ಸುಲಭವಾಗಿ ವಂಚಿಸಲಾಗುತ್ತಿದೆ. “ನಿಮ್ಮದೇ ಖಾತೆ ಎಂಬುದನ್ನು ಖಚಿತಪಡಿಸಿಕೊಳ್ಳಲು 1 ರೂ. ರಿಕ್ವೆಸ್ಟ್ ಕಳುಹಿಸಿಕೊಡುತ್ತೇವೆ. ಅದನ್ನು ಸ್ವೀಕರಿಸಿ ಅನಂತರ ನಿಮಗೆ ನೀಡಬೇಕಾದ ಮೊತ್ತವನ್ನು ಅದೇ ಖಾತೆಗೆ ಕಳುಹಿಸಿಕೊಡುತ್ತೇವೆ’ ಎಂದು ಹೇಳಿ ಮತ್ತಷ್ಟು ಮೊತ್ತದ ರಿಕ್ವೆಸ್ಟ್ ಸ್ವೀಕರಿಸುವಂತೆ ಮಾಡಿ ವಂಚಿಸಲಾಗುತ್ತಿದೆ.
ಅಡ್ವಾನ್ಸ್ ಪಡೆಯಲು ಪಟ್ಟು !
ಮಂಗಳೂರಿನ ಪುರೋಹಿತರೋರ್ವರಿಗೆ ಇತ್ತೀಚೆಗೆ ಹಿಂದಿ ಭಾಷಿಕನೊಬ್ಬ ಕರೆ ಮಾಡಿ, ತಾನು ಪಂಜಾಬ್‌ನಿಂದ ಮಾತನಾಡುತ್ತಿದ್ದು ಮಂಗಳೂರಿನಲ್ಲಿ (ನಿರ್ದಿಷ್ಟ ಪ್ರದೇಶದ ಹೆಸರು ಹೇಳಿ) ಮನೆ ನಿರ್ಮಿಸಿದ್ದೇನೆ. ಅದರ ಗೃಹಪ್ರವೇಶ ಮಾಡಿಸಿಕೊಡಬೇಕು. ಅಗತ್ಯ ಸಾಮಗ್ರಿಗಳನ್ನೆಲ್ಲ ನೀವೇ ತರಬೇಕು. ಸಹಾಯಕರನ್ನೂ ಕರೆದು ಕೊಂಡು ಬನ್ನಿ. ಮುಂಗಡ ಹಣ ಈಗಲೇ ಪಾವತಿಸುತ್ತೇನೆ. ನಿಮ್ಮ ಗೂಗಲ್ ಪೇ ಸಂಖ್ಯೆ ಕೊಡಿ’ ಎಂದಿದ್ದ. ಪುರೋಹಿತರು ಗೃಹಪ್ರವೇಶದ ಬಳಿಕವಷ್ಟೇ ದಕ್ಷಿಣೆ ಸ್ವೀಕರಿಸುವುದಾಗಿ ಹೇಳಿದರೂ ಆತ ಮುಂಗಡ ಪಡೆಯುವಂತೆ ಒತ್ತಾಯಿಸಿದ್ದಲ್ಲದೆ ಕರೆ ಕಡಿತ ಮಾಡದೇ ಗೂಗಲ್ ಪೇ ಅಕೌಂಟ್ ತೆರೆಯುವಂತೆ ಹೇಳುತ್ತಾನೆ. ಪುರೋಹಿತರು ಗೂಗಲ್ ಪೇ ತೆರೆದಾಗ ಅದರಲ್ಲಿ ರಾಮ್‌ಸಿಂಗ್ ಹೆಸರಿನ ಅಕೌಂಟ್ ಕಾಣಿಸಿತು. “1 ರೂ. ರಿಕ್ವೆಸ್ಟ್’ ಎಂಬ ಸಂದೇಶ ಬಂದಿತ್ತು. ಇಂತಹ ವಂಚನೆ ಗಳ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಪುರೋಹಿತ ರಿಗೆ ಸಂಶಯ ಬಂದು ಸೈಬರ್ ತಜ್ಞ ಗೆಳೆಯನಿಗೆ ಕರೆ ಮಾಡಿದಾಗ ಇದೊಂದು ವಂಚನೆಯ ಜಾಲ ಎಂಬುದು ದೃಢವಾಯಿತು. ವಂಚನೆಯ ಮಾಹಿತಿಯನ್ನು ಪೂರ್ಣ ಪಡೆದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಪುರೋಹಿತರು ಮತ್ತೆ ರಾಮ್‌ಸಿಂಗ್‌ಗೆ ಕರೆ ಮಾಡಿ, “ಹಣ ನೀಡಬೇಕಾದವರು ನೀವು; ನಾನೇಕೆ 1 ರೂ. ಹಾಕಬೇಕು?’ ಎಂದು ಪ್ರಶ್ನಿಸಿದರು. ಆಗ ಆತ “ನಿಮ್ಮದೇ ಗೂಗಲ್ ಪೇ ಖಾತೆ ಎಂದು ಖಚಿತಪಡಿಸಿಕೊಳ್ಳಲು 1 ರೂ. ಹಾಕಿ. ಅನಂತರ ಅದಕ್ಕೆ ನಾನು 5,000 ರೂ. ಹಾಕುತ್ತೇನೆ’ ಎಂದ. ಪುರೋಹಿತರು “1 ರೂ. ರಿಕ್ವೆಸ್ಟ್’ ಸಂದೇಶದ ಮೇಲೆ ಒತ್ತಿದರು. ಸ್ವಲ್ಪ ಸಮಯದ ಅನಂತರ “5,000 ರೂ. ರಿಕ್ವೆಸ್ಟ್’ ಬಂತು. ಅದನ್ನು ಕೂಡ ಮೊದಲಿನಂತೆಯೇ ಪ್ರಸ್ ಮಾಡುವಂತೆ ತಿಳಿಸಿದ. ಆಗ ಪುರೋಹಿತರು “ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ಗೆಳೆಯನ ಬಳಿ ವಿಚಾರಿಸುತ್ತೇನೆ’ ಎಂದರು.
Related Articles
Advertisement
ಪಾದ್ರಿಗಳಿಗೆ ಡೊನೇಷನ್ ಆಮಿಷಪಾದ್ರಿಗಳಿಬ್ಬರಿಗೆ ಕರೆ ಮಾಡಿದ ಅಪರಿಚಿತ ನೋರ್ವ, “ವಿದೇಶದಿಂದ ಚರ್ಚ್‌ಗೆ ಡೊನೇಷನ್ ನೀಡುತ್ತೇನೆ. ನನಗೆ ಬೇರೆಯವರ ಮೇಲೆ ನಂಬಿಕೆ ಇಲ್ಲ. ಪಾದ್ರಿಗಳಿಗೆ ನೀಡಿದರೆ ಮಾತ್ರ ಅದು ಉತ್ತಮ ಕೆಲಸಕ್ಕೆ ವಿನಿಯೋಗ ವಾಗುತ್ತದೆ…’ ಎಂದಿದ್ದ ಹಾಗೂ ಪುರೋಹಿತರೊಂದಿಗೆ ಮಾತ ನಾಡಿದಂತೆಯೇ ಮಾತನಾಡಿದ್ದ. ಸಂಶಯಗೊಂಡ ಪಾದ್ರಿಗಳು ಸೈಬರ್ ತಜ್ಞರನ್ನು ಸಂಪರ್ಕಿಸಿದಾಗ ಇದು ವಂಚನಾ ಜಾಲ ಎಂಬುದು ಅರಿವಾಗಿದೆ. ನೃತ್ಯ ಗುರುವಿಗೆ ವಂಚನೆ
ಆನ್‌ಲೈನ್‌ನಲ್ಲಿ ನೃತ್ಯ ತರಬೇತಿ ನೀಡುತ್ತಿದ್ದ ಮಹಿಳೆಯೋರ್ವರಿಗೆ ಸೈನಿಕನೆಂದು ಪರಿಚಯಿಸಿ ತನ್ನ ಹೆಣ್ಣು ಮಕ್ಕಳಿಗೆ ನೃತ್ಯ ಹೇಳಿಕೊಡುವಂತೆ ತಿಳಿಸಿ ಅಡ್ವಾನ್ಸ್ ಪಾವತಿ ಮಾಡುವುದಾಗಿ ಹೇಳಿದ್ದ. ಫೋನ್ ಪೇಯಲ್ಲಿ ಪಾವತಿಗಾಗಿ 5 ರೂ. ರಿಕ್ವೆಸ್ಟ್ ಕಳು ಹಿಸುತ್ತಿದ್ದು ಅದನ್ನು ಕ್ಲಿಕ್ ಮಾಡಿ ಅಪ್ರೂವ್ ಮಾಡು ವಂತೆಯೂ ತಿಳಿಸಿದ್ದ. ಇದನ್ನು ನಂಬಿದ ನೃತ್ಯಗುರು ಆತ ಹೇಳಿದಂತೆ ಮಾಡಿದ್ದು, ಕೆಲವೇ ನಿಮಿಷ ಗಳಲ್ಲಿ ಖಾತೆಯಲ್ಲಿದ್ದ 14,000 ರೂ. ಕಾಣೆಯಾಗಿತ್ತು! ಹಣ ಸ್ವೀಕರಿಸುವಾಗಲೂ ಎಚ್ಚರವಾಗಿರಿ
ಡಿಜಿಟಲ್ ಪೇಮೆಂಟ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದ “ಡಿಜಿಟಲ್ ಅನಕ್ಷರಸ್ಥರು’ ವಂಚಕರ ಜಾಲಕ್ಕೆ ಬೀಳುವ ಸಾಧ್ಯತೆ ಹೆಚ್ಚು. ಡಿಜಿಟಲ್ ಅಥವಾ ಆನ್‌ಲೈನ್‌ನಲ್ಲಿ ಇನ್ನೋರ್ವರಿಗೆ ಹಣ ಪಾವತಿ ಮಾಡುವಾಗ ಮಾತ್ರವಲ್ಲದೆ, ಹಣ ಸ್ವೀಕರಿಸುವ ಸಂದರ್ಭ ಬಂದಾಗಲೂ ತುಂಬಾ ಎಚ್ಚರಿಕೆ ವಹಿಸಬೇಕು. ಅಪರಿಚಿತರ ಮಾತು, ಆಮಿಷಗಳಿಗೆ ಮರುಳಾಗಿ ಅವರು ಸೂಚಿಸಿದಂತೆ ಮಾಡಬಾರದು. ತಿಳಿವಳಿಕೆ, ಮುನ್ನೆಚ್ಚರಿಕೆ ಇದ್ದಾಗ ಮಾತ್ರ ಸುರಕ್ಷಿತ ವ್ಯವಹಾರ ಸಾಧ್ಯ. ವಂಚನೆಯಾಗಿರುವುದು ಗೊತ್ತಾದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
– ಹರಿರಾಂ ಶಂಕರ್, ಡಿಸಿಪಿ, ಮಂಗಳೂರು/
– ಅನಂತ ಪ್ರಭು ಜಿ., ಸೈಬರ್ ಭದ್ರತಾ ತಜ್ಞ -ಸಂತೋಷ್ ಬೊಳ್ಳೆಟ್ಟು