Advertisement

ಆಂತರಿಕ ಸಿರಿವಂತಿಕೆಗೆ ಗಮನ ಕೊಡಿ; ಡಾ|ಬಸವ ಮಾಚಿದೇವ ಸ್ವಾಮೀಜಿ

12:20 PM Aug 23, 2022 | Team Udayavani |

ದಾವಣಗೆರೆ: ಶಿಕ್ಷಿತ, ಸುಶಿಕ್ಷಿತ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣದ ಶಕ್ತಿ ಬಸವಾದಿ ಶರಣರ ತತ್ವದಲ್ಲಿ ಅಡಗಿದೆ ಎಂದು ಚಿತ್ರದುರ್ಗದ ಮಾಚಿದೇವ ಮಹಾಮಠದ ಡಾ| ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

Advertisement

ಶ್ರೀ ಮಡಿವಾಳ ಮಾಚಿದೇವ ಸಂಘದ ವತಿಯಿಂದ ವಿನೋಬನಗರದ ಮಾಚಿದೇವ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಇಂದಿನ ವಾತಾವರಣದಲ್ಲಿ ಶಿಕ್ಷಿತರಾಗುವ ಜೊತೆಗೆ ಸುಶಿಕ್ಷಿತರೂ ಆಗಬೇಕು. ಪೋಷಕರು ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಇಲ್ಲದಿದ್ದಲ್ಲಿ ಮುಂದೆ ವೃದ್ಧಾಶ್ರಮಗಳಿಗೆ ತೆರಳುವ ಸನ್ನಿವೇಶ ಎದುರಿಸಬೇಕಾಗುತ್ತದೆ ಎಂದರು.

12ನೇ ಶತಮಾನದಲ್ಲಿ ಸಾಮಾನ್ಯರಾಗಿದ್ದ ಬಸವಾದಿ ಶರಣರೇ ಕ್ರಾಂತಿಕಾರಿಕ ಬದಲಾವಣೆ ತಂದರು. ಸಾವಿರ ವರ್ಷ ಕಳೆದರೂ ಅವರ ವಿಚಾರಗಳೇ ನಮ್ಮನ್ನೇ ಆಳುತ್ತಿವೆ. ಉಳ್ಳವರೇ ಜಗತ್ತನ್ನು ಆಳುತ್ತಾರೆ ಎನ್ನುವುದು ಸುಳ್ಳು, ವಿದ್ಯಾವಂತರು, ಪ್ರತಿಭಾವಂತರೇ ಜಗತ್ತನ್ನು ಆಳುತ್ತಾರೆ. ಶೋಷಿತ ಮತ್ತು ತಳ ಸಮುದಾಯಗಳು ಸಿರಿವಂತಿಕೆಯೇ ಎಲ್ಲವೂ ಎನ್ನುವ ಹುಚ್ಚಿನಲ್ಲಿ ಅದರ ಬೆನ್ನತ್ತಿ ಹೋಗುತ್ತಿದ್ದೇವೆ. ಜ್ಞಾನ ಮರೆಯುತ್ತಿದ್ದೇವೆ.

ಆದರೆ ಮುಂದುವರೆದ ಸಮುದಾಯಗಳು ಜ್ಞಾನದ ಬೆನ್ನತ್ತಿರುವ ಕಾರಣ ಎಲ್ಲವೂ ಅವರಿಗೆ ಸಿಗುತ್ತದೆ. ಜ್ಞಾನದ ಸಿರಿವಂತಿಕೆ ಮುಂದೆ ಎಲ್ಲವೂ ಶೂನ್ಯ. ಬಾಹ್ಯವಾಗಿ ಕಾಣುವ ಸಿರಿವಂತಿಕೆ ಬದಲು ಜ್ಞಾನದ ಬೆಳಕನ್ನು ಹಚ್ಚಿಕೊಂಡು ಆಂತರಿಕವಾಗಿ ಸಿರಿವಂತರಾಗಬೇಕು ಎಂದು ಸಲಹೆ ನೀಡಿದರು.

Advertisement

ಮೂಡಬಿದರೆ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಮಡಿವಾಳ ಸಮಾಜಕ್ಕೆ ಅಸ್ಪೃಶ್ಯತೆ ಇದೆ. ನಮ್ಮನ್ನು ಯಾರೂ ಮಾತನಾಡಿಸಲ್ಲ ಎನ್ನುವ ಮಾತುಗಳು ಕೇಳಿ ಬರುತ್ತವೆ. ರಾಜಕೀಯವಾಗಿ ಅಸ್ತಿತ್ವಕ್ಕೆ ಬರಲು ನಾವು ಹೋರಾಟದ ಮೂಲಕ ಮುಂದೆ ಬರಬೇಕಾಗಿದೆ. ಜಯ ಸಿಗುವವರೆಗೂ ವಿರಮಿಸಬಾರದು. ಆಗ ಎಲ್ಲ ಕ್ಷೇತ್ರಗಳಲ್ಲಿ ಜಯ ನಿಶ್ಚಿತ ಎಂದು ಹೇಳಿದರು.

ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ|ಎ.ಎಚ್‌. ಶಿವಯೋಗಿಸ್ವಾಮಿ ಮಾತನಾಡಿ, ಶಿಕ್ಷಿತರಾಗುವುದರ ಜೊತೆಗೆ ಸುಶಿಕ್ಷಿತರಾಗುವುದು ಮುಖ್ಯ. ಇದು ಬೌದ್ಧಿಕ ಶಕ್ತಿಯ ಕಾಲಮಾನವಾಗಿದೆ. ಹಾಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಂಕ ಗಳಿಕೆಯ ಜೊತೆ ಸುಶಿಕ್ಷಿತರಾಗಬೇಕು. ಸಮಾಜ, ದೇಶ, ಸಂಸ್ಕೃತಿಗೆ ಧಕ್ಕೆ ಬಂದಾಗ ಸಂಘಟಿತರಾಗಿ ಉಳಿಸಿ, ಬೆಳೆಸಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್‌ ಮಾತನಾಡಿ, ಮಡಿವಾಳ ಮಾಚಿದೇವ ಸಂಘದ ಸಮುದಾಯ ಭವನ ರಸ್ತೆಗೆ ಮಾಚಿದೇವ ರಸ್ತೆ ಹೆಸರಿಡಲು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು. ಮಡಿಕಟ್ಟೆಯಲ್ಲಿ ಆಧುನಿಕ, ಸುಸಜ್ಜಿತ ಯಂತ್ರ ಅಳವಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದದರು.

ಸಂಘದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಎಚ್‌.ಜಿ. ಉಮೇಶ್‌, ಓಂಕಾರಪ್ಪ, ಆರ್‌.ಎನ್‌. ಧನಂಜಯ, ಸುರೇಶ್‌ ಕೋಗುಂಡೆ, ಎಂ. ನಾಗರಾಜ್‌, ಮಹಾನಗರಪಾಲಿಕೆ ಸದಸ್ಯ ಎ. ನಾಗರಾಜ್‌, ಹರಪನಹಳ್ಳಿ ಪುರಸಭೆ ಅಧ್ಯಕ್ಷ ಎಚ್‌.ಎಂ. ಅಶೋಕ ಹರಾಳ್‌, ಬಿ.ಆರ್‌. ಪ್ರಕಾಶ್‌, ಎಸ್‌.ಎಲ್‌. ಆನಂದಪ್ಪ, ಜೆ.ಎಚ್‌. ನಾಗರಾಜ್‌, ಶ್ವೇತಾ ಗಾಂಧಿ, ಎಂ.ಎನ್‌. ಬಸವರಾಜಪ್ಪ, ಪತ್ರಕರ್ತ ಎಂ.ವೈ. ಸತೀಶ್‌, ಪಿ. ಮಂಜುನಾಥ್‌, ಜಿ. ವಿಜಯಕುಮಾರ್‌, ಯೋಗಪಟು ಎನ್‌. ಪರಶುರಾಮ, ಅಂಜಿನಪ್ಪ ಪೂಜಾರ್‌, ಎಂ. ರುದ್ರೇಶ್‌, ಸಿ. ಗುಡ್ಡಪ್ಪ, ಎಚ್‌.ದುಗ್ಗಪ್ಪ ಇತರರು ಇದ್ದರು.

12ನೇ ಶತಮಾನದಲ್ಲಿ ಮಾಚಿದೇವರು ಏಕಾಂಗಿಯಾಗಿ ಒಬ್ಬ ರಾಜನ ವಿರುದ್ದ ಹೋರಾಡಿ ಜಯ ಕಂಡರು. ಜಯ ಕಾಣುವವರೆಗೆ ಅವರು ವಿರಮಿಸಲಿಲ್ಲ. ಅವರ ಕುಲಸ್ಥರಾದ ಮಡಿವಾಳ ಸಮಾಜ ಬಾಂಧವರು ಹೋರಾಟದ ಮೂಲಕವೇ ಎಲ್ಲವನ್ನು ಪಡೆಯಬೇಕು.
ಶ್ರೀ ಮುಕ್ತಾನಂದ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next