Advertisement
ಸಂಕಷ್ಟದಲ್ಲಿ ಸಿಲುಕಿರುವ ಕೃಷಿ ಕ್ಷೇತ್ರದ ಪುನಃಶ್ಚೇತನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ನೀಡಿದ ಕೊಡುಗೆಗಳಿವು. ರಾಜ್ಯದಲ್ಲಿ ಶೇ.75ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಇದರಲ್ಲಿ ಬಹುತೇಕ ಕೃಷಿ ಪದ್ಧತಿಯು ಮಳೆಯಾಶ್ರಿತ ಆಗಿದೆ. ಇದನ್ನು ತೋಟಗಾರಿಕೆ ಬೆಳೆಗಳ ಪ್ರದೇಶವನ್ನಾಗಿ ವಿಸ್ತರಿಸುವ ಸಾಧ್ಯತೆಗಳಿದ್ದು, ಹೀಗೆ ಕೃಷಿಯಿಂದ ತೋಟಗಾರಿಕೆ ವರ್ಗಾವಣೆಗೊಳ್ಳುವ ಸಣ್ಣ-ಅತಿ ಸಣ್ಣ ರೈತರಿಗೆ ಸರ್ಕಾರ ಸಮಗ್ರ ಯೋಜನೆ ರೂಪಿಸಲಿದೆ.
Related Articles
Advertisement
ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿರುವ ರಾಜ್ಯದ 76 ತಾಲೂಕುಗಳಲ್ಲಿ ಜಲಸಂರಕ್ಷಣೆ ಮತ್ತು ಮಳೆನೀರು ಕೊಯ್ಲು ಚಟುವಟಿಕೆಗಳಿಗಾಗಿ 4.75 ಲಕ್ಷ ಹೆಕ್ಟೇರ್‌ಗಳಿಗೆ ನೂರು ಜಲಾನಯನ ನಿರ್ವಹಣಾ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಲಕ್ಷ ಹೆಕ್ಟೇರ್‌ಗಳಲ್ಲಿ 810 ಅತಿಸಣ್ಣ ಜಲಾನಯನ ಪ್ರದೇಶಗಳಲ್ಲಿ ಜಲಾಮೃತ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಇದಕ್ಕಾಗಿ ಮೀಸಲಿಟ್ಟ ಅನುದಾನದ ಬಗ್ಗೆ ಎಲ್ಲಿಯೂ ಉಲ್ಲೇಖೀಸಿಲ್ಲ.
ಮಳೆಯ ಕಣ್ಣಾಮುಚ್ಚಾಲೆ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಕೈಗೆಟಕುವ ದರದಲ್ಲಿ ಹನಿ ಮತ್ತು ತುಂತುರು ನೀರಾವರಿ ಅಳವಡಿಸಲು ಅನುಕೂಲ ಆಗುವಂತೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಯೋಜನೆ ಅಡಿ ಶೇ. 90ರಷ್ಟು ಸಹಾಯಧನ ಒದಗಿಸಲಾಗುವುದು. ಈ ಉದ್ದೇಶಕ್ಕಾಗಿ 2020-21ನೇ ಸಾಲಿನಲ್ಲಿ 627 ಕೋಟಿ ರೂ. ಕಲ್ಪಿಸಲಾಗುತ್ತಿದೆ. ಆದರೆ, ಪದೇಪದೆ ನೆರೆಹಾವಳಿ ಮತ್ತು ಅದರಿಂದ ತುತ್ತಾಗು ತ್ತಿರುವ ಬೆಳೆಗಳ ರಕ್ಷಣೆ ಬಗ್ಗೆ ಪ್ರಸ್ತಾಪಿಸಿಲ್ಲ. ಕೊಡಗಿನಲ್ಲೇ ಸತತ ಎರಡು ಬಾರಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕಾಣುವುದಿಲ್ಲ.
ಜತೆಗೆ ಸುಜಲಾ-3 ಯೋಜನೆಯನ್ನು 12 ಜಿಲ್ಲೆಗಳಲ್ಲಿನ ಮಳೆಯಾಶ್ರಿತ ಜಲಾನಯನ ಪ್ರದೇಶಗಳ 14 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸುವ ಸಂಬಂಧ ವೈಜ್ಞಾನಿಕ ಸಂಸ್ಥೆಗಳು ನೀಡಿದ ಶಿಫಾರಸುಗಳ ಪ್ರಸಾರಕ್ಕಾಗಿ ಹತ್ತು ಕೋಟಿ ರೂ. ವೆಚ್ಚದಲ್ಲಿ 2,500 ಗ್ರಾಮಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮಳೆಯಾಶ್ರಿತ ಕೃಷಿಕರಿಗೆ ಭೂಸಂಪನ್ಮೂಲ ಯಾದಿಯ ತರಬೇತಿ ನೀಡಿ, ಕಾರ್ಡ್‌ಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.
ಎತ್ತಿನಹೊಳೆಗೆ 1500 ಕೋ.: ಇತ್ತೀಚೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಮಹದಾಯಿ ಯೋಜನೆಗೆ ಪೂರಕವಾಗಿ ಕಳಸಾ-ಬಂಡೂರಿ ನಾಲಾ ಕಾಮಗಾರಿಗಳಿಗಾಗಿ ಸರ್ಕಾರ 500 ಕೋಟಿ ರೂ. ಮೀಸಲಿಟ್ಟಿದೆ. ಜತೆಗೆ ಕುಡಿಯುವ ನೀರು ಪೂರೈಕೆಗಾಗಿ ಕೈಗೆತ್ತಿಕೊಂಡ ಎತ್ತಿನಹೊಳೆ ಯೋಜನೆಗೆ 1,500 ಕೋಟಿ ರೂ. ಒದಗಿಸಲಾಗಿದೆ. ತುಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ನವಲೆ ಹತ್ತಿರ ನಿರ್ಮಿಸಲು ಉದ್ದೇಶಿಸಿರುವ ಸಮತೋಲನಾ ಜಲಾಶಯಕ್ಕೆ 20 ಕೋಟಿ ರೂ.,
ರಾಯಚೂರು, ಯಾದಗಿರಿ, ಕಲಬುರಗಿ ಭಾಗದ ಜನರಿಗೆ ಕುಡಿಯುವ ನೀರು ಸರಬರಾಜಿಗೆ ಅನುಕೂಲವಾಗುವಂತೆ ತಿಂತಿಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಆರ್‌ತಯಾರಿಸಲಾಗುವುದು. ವಿವಿಧ ಭಾಗಗಳಿಂದ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಸಾಕಷ್ಟು ಬೇಡಿಕೆಗಳು ಬಂದಿವೆ. ಅಲ್ಲಿನ ನೀರಿನ ಮೂಲ ಮತ್ತು ತಾಂತ್ರಿಕ ಅನುಕೂಲತೆ ಆಧರಿಸಿ ಹೊಸ ಏತ ನೀರಾವರಿ ಯೋಜನೆ ಆರಂಭಿಸಲು ಐದು ಸಾವಿರ ಕೋಟಿ ರೂ. ತೆಗೆದಿಡಲಾಗಿದೆ.