ಮುಂಬಯಿ: ಅದಾನಿ ಗ್ರೂಪ್ಸ್ ವಿರುದ್ಧದ ಹಿಂಡನ್‌ಬರ್ಗ್ ವರದಿ ಕುರಿತಂತೆ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಸಹಿತ ಎಡಪಕ್ಷಗಳು ಕೇಂದ್ರದ ಬೆನ್ನುಬಿದ್ದಿದ್ದರೆ, ಇತ್ತ ಕಾಂಗ್ರೆಸ್‌ನ ಮಿತ್ರಪಕ್ಷವೇ ಆಗಿರುವ ಎನ್‌ಸಿಪಿ ಅದಾನಿ ಗ್ರೂಪ್ಸ್ ಪರ ಬ್ಯಾಟ್ ಬೀಸಿದೆ. ಹಿಂಡನ್‌ಬರ್ಗ್ ವಿಚಾರದಲ್ಲಿ ಅದಾನಿ ಸಂಸ್ಥೆಯನ್ನು ಬೇಕಂತಲೇ ಗುರಿಯಾಗಿಸಲಾಗಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಅದಾನಿ ಗ್ರೂಪ್ಸ್ ವಿಚಾರಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನಂಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿ ದ್ದಾರೆ. ಬಹುತೇಕ ವಿಪಕ್ಷಗಳೆಲ್ಲವೂ ಇದೇ ವಾದಕ್ಕೆ ಧ್ವನಿಗೂಡಿಸಿ, ಅದಾನಿ ಗ್ರೂಪ್ಸ್ ವಿರುದ್ಧ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಆಗ್ರಹಿಸಿವೆ.
ಬಜೆಟ್ ಅಧಿವೇಶನದ ಸಂಪೂರ್ಣ ಸಂಸತ್ ಕಲಾಪ ಇದೇ ವಿಚಾರವಾಗಿ ಕೊಚ್ಚಿ ಹೋಗಿದ್ದರೂ, ಇತ್ತ ಬಿಜೆಪಿ ಮಾತ್ರ ಸಮಿತಿ ರಚನೆಗೆ ಕಿಮ್ಮತ್ತು ನೀಡದೇ, ಸೆಬಿ ತನಿಖೆ ನಡೆಸುತ್ತದೆ ಎನ್ನುವ ತನ್ನ ನಿಲುವಿಗೆ ಬದ್ಧವಾಗಿ ನಿಂತಿದೆ. ಇದೆಲ್ಲದರ ನಡುವೆ ಕಾಂಗ್ರೆಸ್ ಊಹಿಸಿರದ ಬೆಳವಣಿಗೆ ನಡೆದಿದೆ. ಮಹಾ ರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಎನ್‌ಸಿಪಿಯೇ ಅದಾನಿ ಪರ ವಾದಿಸಿದೆ!
ಪವಾರ್ ಸಂದರ್ಶನದಲ್ಲಿ “ಈ ವಿಚಾರ, ಹೇಳಿಕೆ, ಆರೋಪ ಹೊಸದಲ್ಲ. ಈ ಹಿಂದೆಯೂ ಈ ಸಂಬಂಧಿಸಿದ ಹೇಳಿಕೆಗಳು ಬಂದಿದ್ದವು. ಸಂಸತ್ತಿನಲ್ಲಿ ಕೆಲ ಸಮಯ ಗದ್ದಲವೂ ಇತ್ತು. ಆದರೆ ಈ ಬಾರಿ ಈ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡ ಲಾಗಿದೆ. ಆರೋಪಗಳೇನು? ಹೇಳಿದವರು ಯಾರು? ಹಿನ್ನೆಲೆ ಏನು ? ಅವರ ಬಗ್ಗೆ ಹಿಂದೆಂದೂ ನಾವು ಕೇಳಿಯೂ ಇರಲಿಲ್ಲ. ಆದರೆ ಈ ಹೇಳಿಕೆಗಳಿಂದ ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತಿದೆ. ದೇಶದ ಸಂಸ್ಥೆಯೊಂದನ್ನು ಗುರಿಯಾಗಿಸಿದಂತೆ ತೋರುತ್ತಿದೆ’ ಎಂದಿದ್ದಾರೆ. ಶರದ್ ಅವರ ಈ ಹೇಳಿಕೆಯಿಂದ ಲೆಕ್ಕಾಚಾರಗಳೆಲ್ಲ ಉಲ್ಟಾ ಆದಂತೆ ತೋರುತ್ತಿದೆ.