ಶ್ರೀನಗರ ಕಿಟ್ಟಿ “ಗೌಳಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆಯಿತು. ಸೂರ ಈ ಚಿತ್ರದ ನಿರ್ದೇಶಕರು. ಈ ಚಿತ್ರವನ್ನು “ಸೋಹನ್ ಫಿಲಂ ಫ್ಯಾಕ್ಟರಿ’ ಮೂಲಕ ರಘು ಸಿಂಗಂ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಸೂರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರನ್ನು ಈವರೆಗೆ ಯಾರೂ ತೋರಿಸಿರದಂಥ ವಿಭಿನ್ನ ಶೈಲಿಯ ಪಾತ್ರದಲ್ಲಿ ಪರಿಚಯಿಸಲಿದ್ದಾರಂತೆ.
“ಗೌಳಿ’ ಚಿತ್ರದಲ್ಲಿ ನಾಯಕನ ಹೆಸರು. ಈ ಪದಕ್ಕೆ ಇನ್ನೊಂದು ಅರ್ಥವೂ ಇದೆ, ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ, ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಈ ಹೆಸರು ಬಹುಬೇಗ ಅರ್ಥವಾಗಿ ಬಿಡುತ್ತದೆ ಎನ್ನುವುದು ಚಿತ್ರ ತಂಡದ ಮಾತು.
ಇದನ್ನೂ ಓದಿ:ಶಾರುಖ್ ಸಿನಿಮಾ ಟ್ರೈಲರ್ ನೋಡಿ ಮೋಸಹೋದ ಪ್ರೇಕ್ಷಕಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಯ
ಯಲ್ಲಾಪುರ ಶಿರಸಿ ಮುಂತಾದೆಡೆ ಗೌಳಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಪಾವನಾ ಗೌಡ ನಟಿಸುತ್ತಿದ್ದು, ರಂಗಾಯಣ ರಘು ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.