Advertisement

ನಾಳೆಯಿಂದ ತುಳುನಾಡಿನಲ್ಲಿ ಧಾರ್ಮಿಕ, ಜಾನಪದೀಯ ಸಂಭ್ರಮಕ್ಕೆ ಅಂಕದ ಪರದೆ

02:12 PM May 23, 2018 | |

ಮಹಾನಗರ: ಮೇ 24ರಂದು ‘ಪತ್ತನಾಜೆ’. ತುಳುನಾಡಿನ ಸಂಪ್ರದಾಯದ ಪ್ರಕಾರ ಇದು ಅತ್ಯಂತ ಮಹತ್ವದ ದಿನ. ಏಕೆಂದರೆ ತುಳುನಾಡಿನಲ್ಲಿ ನಡೆದುಕೊಂಡು ಬಂದಿರುವ ನಂಬಿಕೆ ಗಳ ಪ್ರಕಾರ ಅಂದಿನಿಂದ ಮಳೆಗಾಲ ಮುಗಿಯು ವವರೆಗೆ ಯಾವುದೇ ಉತ್ಸವಗಳು ನಡೆಯುವುದಿಲ್ಲ. ಆಟ- ನೇಮ- ಕೋಲ- ಅಂಕ- ಆಯನ ಎಲ್ಲ ಕಾರ್ಯಕಲಾಪಗಳಿಗೆ ರಜೆ.

Advertisement

ಬೇಷ ತಿಂಗಳ ಹತ್ತನೇ ದಿನ ಕಾಲಿಡುವ ದಿನವೇ ‘ಪತ್ತನಾಜೆ’. ದೇವತಾರಾಧನೆ- ದೈವಾರಾಧನೆಯ ಪರಮಪವಿತ್ರ ತುಳು ನಾಡಿನ ಮಣ್ಣಿನಲ್ಲಿ ಇದೀಗ ವಿಶೇಷ ಉತ್ಸವಗಳ ಸಮಾರೋಪದ ಪರ್ವ ಕಾಲ. ಪತ್ತನಾಜೆಯ ಬಳಿಕ ಸ್ಥಗಿತಗೊಳ್ಳುವ ಉತ್ಸವಾದಿ ಆಚರಣೆಗಳು ಆಟಿ ತಿಂಗಳು ಕಳೆದು ಸೋಣ ತಿಂಗಳ ಸಂಕ್ರಾಂತಿಯ ಸಂದರ್ಭದಲ್ಲಿ ಶುಭ ಕಾಲ ಆರಂಭವಾಗುತ್ತದೆ.

ಪತ್ತನಾಜೆಗೆ ಎಲ್ಲ ಕುಟುಂಬ ದೈವಸ್ಥಾನ,ಗ್ರಾಮ ದೇವ ಸ್ಥಾನದ ನೇಮ, ತಂಬಿಲದ ಪರ್ವಗಳು ಈಗಾಗಲೇ ಕೊನೆಗೊಂಡಿದ್ದು, ಕೆಲವೆಡೆಗಳಲ್ಲಿ ಈಗ ಆಚರಣೆಗಳು ನೆರವೇರುತ್ತಿವೆ. ವಿಶೇಷವಾಗಿ ಕೆಲವು ದೇವಸ್ಥಾನಗಳಲ್ಲಿ ಪತ್ತನಾಜೆಯ ದಿನದಂದು ವಿಶೇಷ ಪರ್ವ ನಡೆದು ದೇವಸ್ಥಾನದ ಬಾಗಿಲು ಹಾಕುವ ಕ್ರಮವೂ ಇದೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೂ ಪತ್ತನಾಜೆಯಂದು ಮಂಗಳ ಹಾಡಿ ಗೆಜ್ಜೆ ಬಿಚ್ಚಲಾಗುತ್ತದೆ.

43 ಮೇಳಗಳ ಒಡ್ಡೋಲಗಕ್ಕೂ ರಜೆ!
ಕರಾವಳಿ ಜಿಲ್ಲೆಗಳಲ್ಲಿ ಸರಿಸುಮಾರು 43 ಮೇಳಗಳು ಈ ವರ್ಷ ತಿರುಗಾಟ ನಡೆಸಿವೆ. ಪ್ರತೀ ದಿನ ಈ ಮೇಳಗಳು ಕರಾವಳಿ ವ್ಯಾಪ್ತಿಯಲ್ಲಿ ತಿರುಗಾಟ ನಡೆಸಿವೆ. ಹೆಚ್ಚಾ ಕಡಿಮೆ ಸುಮಾರು 180ರಿಂದ 190 ತಿರುಗಾಟವನ್ನು ಒಂದೊಂದು ಮೇಳಗಳು ನಡೆಸಿವೆ. ಸಾವಿರಾರು ಕಲಾವಿದರು ಹಾಗೂ ಇತರರಿಗೆ ನಿತ್ಯ ಉದ್ಯೋಗ ಹಾಗೂ ಕಲಾಪ್ರಪಂಚಕ್ಕೆ ಕಲಾ ಲೋಕವನ್ನು ಸೃಷ್ಟಿ ಮಾಡುವ ನೆಲೆಯಲ್ಲಿ ಯಕ್ಷಗಾನ ಮೇಳಗಳು ಯಶಸ್ವಿ ಪ್ರದರ್ಶನ ನಡೆಸಿವೆ. ಇದೀಗ ಇವೆಲ್ಲಾ ಮೇಳಗಳು ಪತ್ತನಾಜೆ ಎದುರಾದ ಕಾರಣದಿಂದ ಗೆಜ್ಜೆ ಬಿಚ್ಚಲು ಅಣಿಯಾಗಿವೆ. ಹೆಚ್ಚಿನ ಮೇಳಗಳು ಈಗಾಗಲೇ ತಮ್ಮ ತಿರುಗಾಟಕ್ಕೆ ರಜೆ ಸಾರಿವೆ. ಧರ್ಮಸ್ಥಳ, ಕಟೀಲು, ಮಂದಾರ್ತಿ ಸೇರಿದಂತೆ ಇನ್ನೂ ಕೆಲವು ಮೇಳಗಳು ಪತ್ತನಾಜೆಯ ದಿನ ಗೆಜ್ಜೆ ಬಿಚ್ಚಿ ಕಲಾವಿದರ ರಜೆ ಆರಂಭವಾಗುತ್ತದೆ.

ಹಿಂದಿನ ಕ್ರಮದ ಪ್ರಕಾರ ಕಲಾವಿದರ ಸಂಬಳ ಸೇರಿದಂತೆ ಲೆಕ್ಕಾಚಾರ ಚುಕ್ತಾ ಮಾಡುವ ದಿನ ಪತ್ತನಾಜೆ. ಅಂದರೆ ಅಲ್ಲಿಯವರೆಗಿನ ಸಂಬಳದಲ್ಲಿ ಬಾಕಿ ಇರುವ ಹಣವನ್ನು ಅದೇ ದಿನ ಕಲಾವಿದರಿಗೆ ನೀಡಲಾಗುತ್ತದೆ. ಆದರೆ, ಈಗ ದಿನವಹೀ ಸಂಬಳ ಸಿಗುತ್ತಿರುವುದರಿಂದ ಪತ್ತನಾಜೆಯ ದಿನ ಲೆಕ್ಕಾ ಚುಕ್ತಿ ಸಂಗತಿ ಕಡಿಮೆ. ಮುಂದಿನ ಆರು ತಿಂಗಳು ಕಲಾವಿದರಿಗೆ ರಜೆ ಇರಲಿದೆ. ಈ ಪೈಕಿ ಕೆಲವು ಮೇಳದ ಕಲಾವಿದರಿಗೆ ರಜಾ ಸಂಬಳವನ್ನು ಕೂಡ ಮೇಳಗಳು ನೀಡುತ್ತಿವೆ.

Advertisement

ಈ ಮಧ್ಯೆ ಮಳೆಗಾಲದ ಸಂದರ್ಭ ಮೇಳಗಳ ತಿರುಗಾಟ ಇಲ್ಲದಿದ್ದರೂ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ಪ್ರದರ್ಶನ ಕರಾವಳಿಯ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತದೆ. ಮಳೆಗಾಲದ ಸಂದರ್ಭ ಇಂತಹ ಪ್ರದರ್ಶನಕ್ಕೆ ವಿಶೇಷ ಮಹತ್ವವಿರುತ್ತದೆ.

ಕೃಷಿ ಚಟುವಟಿಕೆ ಬಿರುಸು; ಆಟಕ್ಕೆ ರಜೆ
ಪತ್ತನಾಜೆಯ ಬಳಿಕ ಮಳೆಗಾಲ ಎದುರುಗೊಳ್ಳುವ ನೆಲೆಯಲ್ಲಿ, ಆ ಸಂದರ್ಭ ಕೃಷಿ ಚಟುವಟಿಕೆಗಳಿಗೆ ರೈತರು ಪ್ರಾಧಾನ್ಯ ನೀಡುವ ಸಮಯ. ಹೀಗಾಗಿ ಮನೋರಂಜನೆಗೆ ಆ ಕಾಲದಲ್ಲಿ ಸಮಯ ಮೀಸಲಿಡಲು ಹಿಂದಿನ ಕಾಲದಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದ ಹಾಗೂ ಕೃಷಿ ಕಾರ್ಯದಲ್ಲಿಯೇ ಎಲ್ಲರೂ ಮಗ್ನರಾಗಿರುವ ಹಿನ್ನೆಲೆಯಲ್ಲಿ ಯಕ್ಷಗಾನಕ್ಕೆ ಗಮನಹರಿಸಲು ಸಾಧ್ಯವಾಗದೆ ಯಕ್ಷಗಾನ ಪ್ರದರ್ಶನ ನಿಲ್ಲಿಸಲಾಗುತ್ತದೆ.
 - ಶಾಂತರಾಮ ಕುಡ್ವ,
    ಯಕ್ಷಗಾನ ವಿಮರ್ಶಕರು

ಪತ್ತನಾಜೆ ತುಳುನಾಡಿನ ಸಂಪ್ರದಾಯ
ಪತ್ತನಾಜೆ ಎಂಬುದು ತುಳುನಾಡಿನ ಸಂಪ್ರದಾಯ. ಇದು ಆಚರಣೆಯಲ್ಲ. ಹತ್ತು ಜನರ ಅಭಿಪ್ರಾಯ ಎಂಬ ಅರ್ಥದಲ್ಲಿ ಇದನ್ನು ಪರಿಗಣಿಸಲಾಗುತ್ತದೆ. ಮಳೆಗಾಲದ ಸಂದರ್ಭ ಈ ಎಲ್ಲ ಆಚರಣೆಗಳಿಗೆ ಪೂರ್ಣವಿರಾಮ ಹಾಕಿ ಕೃಷಿ ಚಟುವಟಿಕೆಗಳನ್ನು ಮಾಡಲು ಒಂದು ಗಡುವು ಮಾಡಲಾಗಿತ್ತು. ಇದೇ ದಿನ ಪತ್ತನಾಜೆ. ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಪೂಜೆ-ಆಟ-ನೇಮ ಮಾಡಲು ಇಂದಿನ ಹಾಗೆ ವ್ಯವಸ್ಥೆಗಳೂ ಇರಲಿಲ್ಲ.
ಗಣೇಶ ಅಮೀನ್‌ ಸಂಕಮಾರ್‌,
   ಜಾನಪದ ತಜ್ಞರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next