Advertisement

ರಸ್ತೆ ಮಾದರಿಯಲ್ಲೇ ಮೇಲ್ಸೇತುವೆ ದತ್ತು

12:36 AM Dec 24, 2019 | Lakshmi GovindaRaj |

ಬೆಂಗಳೂರು: ನಗರದ ರಸ್ತೆಗಳನ್ನು ದತ್ತು ನೀಡುವ ಯೋಜನೆ ರೂಪಿಸಿದ್ದ ಬಿಬಿಎಂಪಿ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಗರದ ಮೇಲ್ಸೇತುವೆ, ಅಂಡರ್‌ಪಾಸ್‌ಗಳನ್ನೂ ದತ್ತು ನೀಡಲು ಮುಂದಾಗಿದೆ. ಅಡಾಫ್ಟ್ ಎ ಸ್ಟ್ರೀಟ್‌ (ರಸ್ತೆ ದತ್ತು ತೆಗೆದುಕೊಳ್ಳಿ) ಯೋಜನೆಯಲ್ಲಿ ಆಸಕ್ತಿ ಹೊಂದಿರುವ ಸಂಸ್ಥೆಗಳೊಂದಿಗೆ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

Advertisement

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಂದೀಪ್‌, ಅಡಾಫ್ಟ್ ಎ ಸ್ಟ್ರೀಟ್‌ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಮೇಲ್ಸೇತುವೆ, ಅಂಡರ್‌ ಪಾಸ್‌, ರಸ್ತೆಗಳು ಹಾಗೂ ಕೆರೆಗಳನ್ನೂ ದತ್ತು ನೀಡಲಾಗುವುದು ಎಂದರು. ಕೆಲವು ಸಂಸ್ಥೆಗಳು ರಸ್ತೆಗಳನ್ನು ದತ್ತು ಪಡೆದುಕೊಂಡು ಅತ್ಯುತ್ತಮವಾಗಿ ನಿರ್ವಹಿಸಿವೆ. ಇದೇ ರೀತಿ ಜವಾಬ್ದಾರಿಯಿಂದ ನಿರ್ವಹಣೆ ಮಾಡಲು ಮುಂದೆ ಬರುವ ಸಂಸ್ಥೆಗಳಿಗೆ ರಸ್ತೆಗಳ ಜತೆಗೆ ಮೇಲ್ಸೇತುವೆ ಸೇರಿದಂತೆ ಕೆರೆಗಳ ದತ್ತು ನೀಡುವ ಚಿಂತನೆಯೂ ಇದೆ ಎಂದು ಹೇಳಿದರು.

ಈಗಾಗಲೇ ರಸ್ತೆ ದತ್ತು ಯೋಜನೆಗೆ ಹಲವು ಸಂಸ್ಥೆಗಳು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಸೋಮವಾರ 25 ಸಂಸ್ಥೆಗಳೊಂದಿಗೆ 30ಕ್ಕೂ ಹೆಚ್ಚು ರಸ್ತೆಗಳನ್ನು ದತ್ತು ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಉದ್ದೇಶದಿಂದ ರಸ್ತೆ ದತ್ತು ಪಡೆಯುವ ಯೋಜನೆಗೆ ಪಾಲಿಕೆ ಚಾಲನೆ ನೀಡಿದ್ದು, ಈಗಾಗಲೇ ಇಂಡಿಯಾ ರೈಸಿಂಗ್‌ ಟ್ರಸ್ಟ್‌ ಸಂಸ್ಥೆ 10 ರಸ್ತೆಗಳನ್ನು ದತ್ತು ಪಡೆದುಕೊಂಡಿದ್ದು, ಈ ರಸ್ತೆಗಳಲ್ಲಿ ಬದಲಾವಣೆ ತಂದಿದೆ ಎಂದರು.

ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಅಡಾಫ್ಟ್- ಎ ಸ್ಟ್ರೀಟ್‌ಗೆ ಸಂಬಂಧಿಸಿದಂತೆ ಅರ್ಜಿ ಸಿದ್ಧಪಡಿಸಲಾಗಿದ್ದು, ಆಸಕ್ತರು ಅರ್ಜಿ ಭರ್ತಿ ಮಾಡಿ adoptastreetbbmp@gmail.comಗೆ ಕಳುಹಿಸುವ ಅವಕಾಶ ಪಾಲಿಕೆ ಕಲ್ಪಿಸಿದೆ. ದತ್ತು ನೀಡುವ ಮುನ್ನ ಸಂಘ-ಸಂಸ್ಥೆಗೆ ಪ್ರಾಯೋಗಿಕವಾಗಿ ರಸ್ತೆ ಸ್ವಚ್ಛತೆ ಮಾಡುವಂತೆ ಸೂಚನೆ ನೀಡಲಾಗುತ್ತದೆ. ಆ ನಂತರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಮುಂದೆ ಬಂದ ಸಂಸ್ಥೆಗಳು: ಬಿಬಿಎಂಪಿ ಮಹಾತ್ವಾಕಾಂಕ್ಷಿ ಯೋಜನೆಯಾದ ಅಡಾಫ್ಟ್- ಎ ಸ್ಟ್ರೀಟ್‌ಗೆ ಖಾಸಗಿ ಸಂಸ್ಥೆಗಳು ಅತ್ಯುತ್ತಮವಾದ ಪ್ರತಿಕ್ರಿಯೆ ಬಂದಿದ್ದು, ಕೆಲವು ಸಂಸ್ಥೆಗಳು ಖುದ್ದು ತಮ್ಮ ಹಣದಲ್ಲೇ ರಸ್ತೆಗಳನ್ನು ಅಭಿವೃದ್ಧಿ ಮಾಡುವುದಕ್ಕೂ ಮುಂದೆ ಬಂದಿವೆ. ಈ ಬಗ್ಗೆ ಮೇಯರ್‌ ಹಾಗೂ ಆಯುಕ್ತರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದರು.

Advertisement

ದತ್ತು ಪಡೆದಿರುವ ಸಂಸ್ಥೆಗಳು: ಪ್ರಾಯೋಗಿಕವಾಗಿ ಕೋರಮಂಗಲ, ಜೆ.ಪಿ.ನಗರ, ಸದಾಶಿವನಗರ ಸೇರಿದಂತೆ ಕೆಲವು ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದೀಗ ಅಭ್ಯುದಯ, ಡೆಲ್, ಸಿಡಬ್ಲೂಎ, ಸಿಜಿಐ ಇಂಡಿಯಾ, ಎಸ್‌ಡಬ್ಲೂಎಆರ್‌, ಸೇವ್‌ ಗ್ರೀನ್‌, ಒನ್‌ ಡ್ರೀಮ್‌ ಫೌಂಡೇಷನ್‌, ವಿಪರ್ವ ಸೇರಿದಂತೆ 25 ಸಂಸ್ಥೆಗಳು 30ಕ್ಕೂ ಹೆಚ್ಚು ರಸ್ತೆಗಳನ್ನು ದತ್ತು ಪಡೆಯಲು ಮುಂದೆ ಬಂದಿವೆ.

ಈ ನಡುವೆ ಇಂಡಿಯಾ ರೈಸಿಂಗ್‌ ಟ್ರಸ್ಟ್‌, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ, ಚರ್ಚ್‌ ಸ್ಟ್ರೀಟ್‌, ರಿಚ್ಮಂಡ್‌ ರಸ್ತೆ, ಲ್ಯಾವೆಲ್ಲೆ ರೋಡ್‌, ಸೇಂಟ್‌ ಮಾರ್ಕ್ಸ್ ರೋಡ್‌, ಮ್ಯೂಸಿಯಂ ರಸ್ತೆ, ಕ್ಯಾಮೆಸೆರಿಯೆಟ್‌ (ಮೇಯೋಹಾಲ್‌ನಿಂದ ಗುರುಡಾಮಾಲ್‌ ರವರಿಗಿನ ರಸ್ತೆ), ಮದ್ರಾಸ್‌ ರಸ್ತೆ ಸೇರಿ 10 ರಸ್ತೆಗಳನ್ನು ದತ್ತು ಪಡೆದಿದೆ.

ದತ್ತು ಪಡೆದ ಸಂಸ್ಥೆಗಳ ಕೆಲಸವೇನು?: ಪಾಲಿಕೆ ವ್ಯಾಪ್ತಿಗೊಳಪಡುವ ಯಾವುದೇ ರಸ್ತೆಯನ್ನಾದರೂ ದತ್ತು ಪಡೆಯಬಹುದಾಗಿದೆ. ದತ್ತು ಪಡೆದ ಸಂಸ್ಥೆ ಆ ರಸ್ತೆಯಲ್ಲಿ ಬ್ಲಾಕ್‌ಸ್ಪಾಟ್‌ (ಕಸ ಸುರಿಯುವ ಸ್ಥಳ) ತೆರವುಗೊಳಿಸುವುದು, ಪೌರಕಾರ್ಮಿಕರ ಸಹಯೋಗದಲ್ಲಿ ಬ್ಲಾಕ್‌ ಸ್ಪಾಟ್‌ ಸ್ಥಳದಲ್ಲಿ ರಂಗೋಲಿ ಬಿಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಮೇಲ್ಸೇತುವೆ ಹಾಗೂ ರಸ್ತೆಗಳ ಬದಿಯಲ್ಲಿನ ಗೋಡೆಗಳ ಮೇಲೆ ಮತ್ತು ಮರಕ್ಕೆ ಅಂಟಿಸಿರುವ ಬಿತ್ತಿಪತ್ರಗಳನ್ನು ತೆರವುಗೊಳಿಸುವುದು,

ಗೋಡೆಗಳ ಮೇಲೆ ಬಣ್ಣ ಬಳಿಯುವುದು, ಪಾದಚಾರಿ ಮಾರ್ಗ ಸರಿಪಡಿಸುವುದು, ಒಣ ಮರ ಅಥವಾ ಮರಕ್ಕೆ ಅಳವಡಿಸಿರುವ ಗ್ರಿಲ್‌ ತೆರವುಗೊಳಿಸುವುದು, ಬೀದಿದೀಪ ನಿರ್ವಹಣೆಯ ಮೇಲೆ ಉಸ್ತುವಾರಿ ವಹಿಸಬೇಕು. ಅಲ್ಲದೆ, ದತ್ತು ಪಡೆದುಕೊಂಡ ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಡುವುದು, ಉದ್ಯಾನ ಸ್ವಚ್ಛಗೊಳಿಸುವುದು, ರಸ್ತೆಯಲ್ಲಿ ಬ್ಯಾನರ್‌, ಫ್ಲೆಕ್ಸ್‌, ಒಎಫ್ಸಿ, ರಸ್ತೆ ಗುಂಡಿ ಕಂಡು ಬಂದರೆ ಸಹಾಯ ಅಪ್ಲಿಕೇಷನ್‌ ಅಥವಾ ಫಿಕ್ಸ್‌ ಮೈ ಸ್ಟ್ರೀಟ್‌ ಅಪ್ಲಿಕೇಷನ್‌ನಲ್ಲಿ ದೂರು ದಾಖಲಿಸುವುದು ಸೇರಿದಂತೆ ಒಟ್ಟಾರೆ ರಸ್ತೆಯನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಈ ಯೋಜನೆಯಡಿ ಪಾಲಿಕೆ ಯಾವುದೇ ರೀತಿ ಅನುದಾನ ನೀಡುವುದಿಲ್ಲ. ರಸ್ತೆ ದತ್ತು ಪಡೆದರೆ ಅದರ ಸ್ವಚ್ಛತಾ ಜವಾಬ್ದಾರಿ ಆ ಸಂಸ್ಥೆಯದ್ದೇ ಆಗಿರುತ್ತದೆ. ತಿಂಗಳಿಗೊಮ್ಮೆಯಾದರೂ ರಸ್ತೆಯನ್ನು ಸ್ವಚ್ಛ ಮಾಡುತ್ತಿರಬೇಕು. ದತ್ತು ಪಡೆದ ಸಂಸ್ಥೆ ಹಾಗೂ ರಸ್ತೆಯ ಹೆಸರಿರುವ ನಾಮಫ‌ಲಕವನ್ನು ಪಾಲಿಕೆ ವತಿಯಿಂದ ಅಳವಡಿಸಲಾಗುವುದು. ರಸ್ತೆಯಲ್ಲಿ ಸಂಸ್ಥೆಯ ಜಾಹೀರಾತು ಅಳವಡಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ರಸ್ತೆಯ ನಿರ್ವಹಣೆ ಮಾಡುವಲ್ಲಿ ಸಂಸ್ಥೆ ವಿಫ‌ಲವಾದರೆ ದತ್ತು ನೀಡಿರುವ ರಸ್ತೆಯನ್ನು ಪಾಲಿಕೆ ಹಿಂಪಡೆಯಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.

ರಸ್ತೆ ದತ್ತು ಪಡೆವ ಸಂಸ್ಥೆಗಳು
ಅಭ್ಯುದಯ ಟ್ರಸ್ಟ್‌- ಜಯನಗರ, ಎಎಸ್‌ಎಂ ಟೆಕ್ನಾಲಜಿ- ರಿಚ್ಮಂಡ್‌ ಟೌನ್‌, ಬೆಂಗಳೂರು ರಿಪೇರ್‌ ಪ್ರಾಜೆಕ್ಟ್- ಆಲೂರು ರಸ್ತೆ, ಬಾಷ್‌- ಬೆಳ್ಳಂದೂರು, ಸಿಜಿಐ ಇಂಡಿಯಾ- ಯಮಲೂರು, ಸಿಟ್ರಿಕ್ಸ್‌ ಇಂಡಿಯಾ- ಹಲಸೂರು, ಸಿಡಬುಎ- ರೀನಿಯಸ್‌ ಸ್ಟ್ರೀಟ್‌, ಡೆಲ್‌ ಟೆಕ್ನಾಲಜಿ- ದೊಡ್ಡನೆಕ್ಕುಂದಿ, ಎಂಬೆಸ್ಸಿ ಗ್ರೂಪ್‌-ದೊಮ್ಮಲೂರು, ಗ್ರಾಂಟ್‌ ಥಾರ್ನ್ಟನ್‌- ಹಳೇ ಮದ್ರಾಸು ರಸ್ತೆ, ಎಂಎಐಎ ಎಸ್ಟೇಟ್ಸ್‌- ಜಕ್ಕೂರು, ಮ್ಯಾಟ್ರಿಮೋನಿ.ಕಾಂ- ಅಡುಗೋಡಿ, ಮೈಕ್ರೋಲ್ಯಾಂಡ್‌ ಫೌಂಡೇಷನ್‌- ಮಹದೇವಪುರ, ಒನ್‌ ಡ್ರೀಮ್‌ ಫೌಂಡೇಷನ್‌- ಜೆ.ಪಿ ನಗರ, ಪ್ರಕ್ರಿಯಾ- ಬಿಳೇಕಲ್ಲಳ್ಳಿ,  ಆರ್‌ಟಿಎಸ್‌ ಆಂಡ್‌ ಕೋ- ನಾಗರಬಾವಿ, ಸೇವ್‌ ಗ್ರೀನ್‌- ಸಿ.ವಿ ರಾಮನ್‌ನಗರ, ಸುಮಧುರ ಫೌಂಡೇಷನ್‌- ವೈಟ್‌ಫೀಲ್ಡ್‌, ಎಸ್‌ಡಬುಎಆರ್‌- ಬೇಗೂರು, ಟಾಟಾ ಹೌಸಿಂಗ್‌- ಇಟ್ಟಮಡು, ಟ್ರಿನಿಟಿ ಎನ್‌ಕ್ಲೇವ್‌ -ಹೊರಮಾವು, ಟ್ರಿವಿಯುಮ್‌ ಸಲ್ಯೂಷನ್‌- ಇಂದಿರಾ ನಗರ, ಉಜ್ಜೀವನ್‌ ಬ್ಯಾಂಕ್‌- ನಗರದ ವಿವಿಧೆಡೆ, ವಿಪ್ರವ- ವಿಕ್ಟೋರಿಯಾ ಲೇಔಟ್‌, ವಿಎಂ ಇಂಡಿಯಾ- ದಕ್ಷಿಣ ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next