Advertisement
ಗೌರಿ 2 ವರ್ಷದಿಂದ ಗರ್ಭಿಣಿ ಇದ್ದಾಳೆ. ಅವಳೇನು ದೆವ್ವನಾ? ಕ್ಯಾನ್ಸರ್ ಪೀಡಿತ ಪುಟ್ಟಗೌರಿಗೆ ಮುಖ್ಯಮಂತ್ರಿ ಸಾಂತ್ವನ ಹೇಳಿದರು ಎಂಬುದರಿಂದ ಹಿಡಿದು “ಕಾಡಿನಲ್ಲಿ ಮೋಗ್ಲಿ ಗೌರಿಯನ್ನು ಮದುವೆ ಆಗ್ತಾನೆ’ ಎಂಬಲ್ಲಿಯವರೆಗೂ ರಂಜನಿಯನ್ನು ಜನ ಟ್ರೋಲ್ ಮಾಡ್ತಾರೆ.
ಸೂಪರ್ ಸ್ಟಾರ್ ಆಗಿರೋದು ನಾನಲ್ಲ, ಪುಟ್ಟ ಗೌರಿ. ಆ ಪಾತ್ರಕ್ಕೆ ಸ್ಟಾರ್ ಪಟ್ಟ ಸಿಕ್ಕಿದೆ. ಆದರೆ ರಂಜನಿಗೆ ಇನ್ನೂ ಸ್ಟಾರ್ ಪಟ್ಟ ಸಿಕ್ಕಿಲ್ಲ. ನನಗೆ ಪುಟ್ಟ ಗೌರಿ ಪಾತ್ರದ ಹೊರತಾಗಿ ನನ್ನದೇ ಅಸ್ತಿತ್ವ ಇನ್ನೂ ಸಿಕ್ಕಿಲ್ಲ.
Related Articles
ನನಗೇ ಸುಮಾರು 200 ಟ್ರೋಲ್‌ಗಳು ಬಂದಿವೆ. ಇದರಿಂದ ನಾನು ಅರ್ಥ ಮಾಡಿಕೊಂಡಿರುವುದೇನೆಂದರೆ ಪುಟ್ಟ ಗೌರಿ ಧಾರಾವಾಹಿಯನ್ನು ತುಂಬಾ ಜನ ನೋಡ್ತಾರೆ. ಇಷ್ಟ ಪಟ್ಟು ನೋಡುವ ವರ್ಗ ಒಂದಾದರೆ, ಟ್ರೋಲ್ ಮಾಡಲೆಂದೇ ನೋಡುವ ವರ್ಗ ಬೇರೆ ಇದೆ. ಬಹುಷಃ ಎಲ್ಲಾ ಧಾರಾವಾಹಿಗಳಿಗೂ ಇಂಥ ವೀಕ್ಷಕ ವರ್ಗ ಸಿಗುವುದಿಲ್ಲ. ಆದರೆ ನಮಗೆ ಸಿಕ್ಕಿದೆ. ಅದು ಕೂಡ ಖುಷಿಯ ವಿಚಾರವೇ. ಜನ ಟ್ರೋಲ್ ಮಾಡುವುದಕ್ಕೇ ಇಷ್ಟು ಸಮಯ ವ್ಯಯಿಸಿರುವುದು ನೋಡಿದರೆ ಪುಟ್ಟ ಗೌರಿ ಎಷ್ಟು ಪಾಪ್ಯುಲರ್ ಧಾರಾವಾಹಿ ಅಂತ ತಿಳಿಯುತ್ತದೆ.
Advertisement
* ಕಾಡಿನ ಅನುಭವ ಹೇಗಿತ್ತು? ಜಾಲತಾಣಗಳಲ್ಲಿ ಕಾಡಿನ ಭಾಗ ಇನ್ನಿಲ್ಲದಂತೆ ಟ್ರೋಲ್ ಆಗ್ತಾ ಇರುವುದರ ಬಗ್ಗೆ ಹೇಗನ್ನಿಸುತ್ತಿದೆ?ಟ್ರೋಲ್ ಮಾಡುವವರಿಗೇನು ಗೊತ್ತು ನನಗೆ ಕಾಡಿನ ಭಾಗ ಎಷ್ಟು ಚಾಲೆಂಜಿಂಗ್ ಆಗಿತ್ತು ಅಂತ? ಕೆಲವೊಮ್ಮೆ ರಾತ್ರಿಯೆಲ್ಲಾ ಶೂಟಿಂಗ್ ಮಾಡಿದ್ದೇವೆ. ಸೀರೆ ಉಟ್ಟುಕೊಂಡು ಸ್ಟಂಟ್ಸ್ ಮಾಡಿದ್ದೇನೆ. ನನ್ನ ಕಾಸ್ಟೂéಮ್ ನನಗೆ ಸಹಕರಿಸುತ್ತಿರಲಿಲ್ಲ. ಆದರೂ ನಾನು ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ನಟನೆ ಕೊಟ್ಟಿದ್ದೇನೆ. ನನಗೆ ಕಾಡಿನ ಭಾಗದ ಶೂಟಿಂಗ್ ತುಂಬಾ ಇಷ್ಟ ಆಯ್ತು. ಏಕೆಂದರೆ ಗ್ರಾಫಿಕ್ ಹೆಚ್ಚಿರುವ ಸೀನ್‌ಗಳಲ್ಲಿ ನಟಿಸುವುದೂ ಒಂದು ಸವಾಲು. ಅದನ್ನೂ ಮಾಡಿದ್ದೇನೆ. * ನಿಮ್ಮನ್ನು ಕಾಡಿಗೆ ಕಳಿಸುವ ಕುರಿತು ನಿರ್ದೇಶಕರು ಹೇಳಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?
ಕಾಡಿನ ದೃಶ್ಯಗಳೂ ನನಗೂ ಸ್ವಲ್ಪ ಅತಿ ಎನ್ನಿಸಿತು. ನಾನದಕ್ಕೆ ನಕ್ಕು ಬಿಟ್ಟಿದ್ದೆ. ಅದಕ್ಕೆ ಅವರು “ಎಕ್ಸ್‌ಪೆರಿಮೆಂಟಲ್ ಆಗಿ ಇರುತ್ತೇರೀ. ಕಾಡಿನ ಭಾಗ ಕ್ಲಿಕ್ ಆಗಲಿಲ್ಲಾ ಅಂದ್ರೆ ಕೇಳಿ’ ಅಂತ ಹುರಿದುಂಬಿಸಿದರು. ನಮ್ಮ ನಿರ್ದೇಶಕರಿಗೆ ಈ ರೀತಿ ಪ್ರಯೋಗ ಮಾಡಲು ಹೆಚ್ಚೇ ಆಸಕ್ತಿ ಇದೆ. ಅದಕ್ಕೆ ಸರಿಯಾಗಿ ಅವರಿಗೆ ಪ್ರಮುಖ ಪಾತ್ರಧಾರಿಯಾಗಿ ನಾನು ಸಿಕ್ಕಿದ್ದೇನೆ. ನಾನು ಅವರು ಹೇಳಿದ್ದಕ್ಕೆಲ್ಲಾ ಜೈ ಎನ್ನುತ್ತೇನೆ. ಅವರು ಮಾಡುವ ಪ್ರಯೋಗಗಳಿಗೆಲ್ಲಾ ಒಡ್ಡಿಕೊಳ್ಳುತ್ತೇನೆ. * ಪುಟ್ಟ ಗೌರಿ ಧಾರಾವಾಹಿ ಆರಂಭವಾದಾಗಿನಿಂದಲೂ ಸೀರೆಯಲ್ಲೇ ಕಾಣಿಸಿಕೊಂಡಿದ್ದೀರಿ. ಸೀರೆ ಕಿರಿಕಿರಿ ಆಗಲ್ವಾ?
ಅಯ್ಯೋ… ಈಗ ನನಗೆ ಸೀರೆ ನೋಡಿದರೇನೆ ಜಿಗುಪ್ಸೆ ಆಗುತ್ತೆ. ಸೀರೆ ಧರಿಸಿದ ಕೂಡಲೇ ನಾನು ರಂಜನಿಯಲ್ಲ, ಪುಟ್ಟ ಗೌರಿ ಅಂತನ್ನಿಸಲು ಶುರುವಾಗುತ್ತದೆ. ಅದಕ್ಕೆ ಶೂಟಿಂಗ್ ಅಲ್ಲದೆ ಬೇರೆ ಸಮಯದಲ್ಲಿ ಸೀರೆಯನ್ನು ಮುಟ್ಟಿ ನೋಡುವುದೂ ಇಲ್ಲ. ಸಮಾರಂಭ ಮತ್ತು ಹಬ್ಬಗಳಲ್ಲಿ ಸೀರೆ ಉಡುವುದನ್ನೇ ಬಿಟ್ಟುಬಿಟ್ಟಿದ್ದೇನೆ. ಸೀರೆ ಉಟ್ಟರೆ ಪುಟ್ಟ ಗೌರಿ ಥರಾ ಆಡ್ತೀಯ ಅಂತ ನನ್ನ ಮನೆಯವರೂ ಸುಮಾರು ಬಾರಿ ಹೇಳಿದ್ದಾರೆ. * ನಿಮಗೂ ಮಹೇಶನಂಥ ಹುಡುಗ ಸಿಕ್ಕಿದ್ರೆ ಏನು ಮಾಡ್ತೀರಾ?
ನಾನು ಗೌರಿ ಥರಾ ಇಂಪ್ರಾಕ್ಟಿಕಲ್ ಹುಡುಗಿಯಲ್ಲ. ತುಂಬಾ ವಾಸ್ತವವಾದಿ. ನನಗೆ ಈ ರೀತಿ ಗಂಡ ಸಿಕ್ಕಿದ್ದರೆ ಅವನನ್ನು “ಏ ಹೋಗ್ತಾ ಇರು…’ ಅಂತ ಜೀವನದಿಂದ ಆಚೆ ತಳ್ಳಿ ಎಷ್ಟೋ ದಿನಗಳಾಗಿರುತ್ತಿದ್ದವೇನೋ. ಈಗ ಯಾವ ಹುಡುಗಿ ತಾನೆ ಗಂಡ ಏನು ಮಾಡಿದರೂ ಸಹಿಸಿಕೊಂಡು ಒಟ್ಟಿಗೇ ಬಾಳುತ್ತಾಳೆ? ಡಿವೋರ್ಸ್‌ಗಳೂ ಸದ್ದಿಲ್ಲದಂತೆ ನಡೆದು ಹೋಗುತ್ತವೆ. ಅಂಥದ್ದರಲ್ಲಿ ಗೌರಿ ಥರಾ ಅತ್ತೂ ಕರೆದು ರಂಪ ಮಾಡುವವರು ಹುಡುಕಿದರೂ ಸಿಗಲ್ಲವೇನೋ.. * ರಂಜನಿಗೂ, ಪುಟ್ಟ ಗೌರಿಗೂ ಇರುವ ವ್ಯತ್ಯಾಸಗಳೇನು?
ನನಗೂ, ಗೌರಿಗೂ ಸ್ವಲ್ಪವೂ ಹೋಲಿಕೆ ಇಲ್ಲ. ನನಗೆ ಅಳುವೇ ಬರುವುದಿಲ್ಲ. ಗೌರಿ ಸದಾ ಅಳುತ್ತಿರುತ್ತಾಳೆ. ನಾನು ಎಲ್ಲರೊಂದಿಗೆ ಬೆರೆಯುತ್ತೇನೆ, ಆದರೆ ಯಾರನ್ನೂ ಹಚ್ಚಿಕೊಳ್ಳುವುದಿಲ್ಲ. ಆಕೆ ಎಲ್ಲರನ್ನು ಹಚ್ಚಿಕೊಳ್ಳುತ್ತಾಳೆ. ನನಗೆ ಯಾರ ಬಗ್ಗೆ ಬೇಸರವಾದರೂ ಅವರನ್ನು ಇಗ್ನೊàರ್ ಮಾಡ್ತೇನೆ, ಜೊತೆಗೆ ಬೇಸರವನ್ನು ಮರುದಿನಕ್ಕೆ ಮುಂದುವರಿಸುವುದಿಲ್ಲ. ಅದರೆ ಗೌರಿ ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಾಳೆ. ಎಲ್ಲರನ್ನೂ ಕನ್ವಿನ್ಸ್ ಮಾಡಲು ಹೋಗ್ತಾಳೆ. ನನಗೆ ಗೌರಿಯ ಆ ಗುಣ ಸ್ವಲ್ಪವೂ ಇಷ್ಟ ಆಗಲ್ಲ. * ಗೌರಿಗೆ ಸಿಕ್ಕ ಹಾಗೆ ನಿಮಗೂ ತುಂಬು ಕುಟುಂಬ ಸಿಕ್ಕರೆ ಹೇಗೆ ನಿಭಾಯಿಸ್ತೀರಾ?
ನನಗೆ ಈ ಧಾರಾವಾಹಿಯಲ್ಲೇ ಅದೆಲ್ಲಾ ರಿಹರ್ಸಲ್ ಆಗಿಬಿಟ್ಟಿದೆ. ತುಂಬು ಕುಟುಂಬವೇನಾದರೂ ಸಿಕ್ಕರೆ ನೀಟಾಗಿ ಮ್ಯಾನೇಜ್ ಮಾಡ್ತೀನಿ. ಈ ಯೋಜನೆ ನನ್ನ ತಲೆಗೂ ಬಹಳ ಸಾರಿ ಬಂದಿದೆ. * ಹೊರಗಡೆ ಹೋದಾಗ ಜನರಿಂದ ಕಿರಿಕಿರಿ ಆದ ಸಂದರ್ಭ ಇದೆಯಾ?
ಜನರು ಮೊದಲು ನೋಡುವುದೇ ನನ್ನ ಮೂಗಿನ ಮೇಲೆ ಮಚ್ಚೆ ಇದೆಯಾ, ಇಲ್ವಾ ಅಂತ. ನನಗೆ ಧಾರಾವಾಹಿಯಲ್ಲಿ ಮಚ್ಚೆ ಇಟ್ಟಿದ್ದಾರಷ್ಟೇ, ನಿಜಕ್ಕೂ ನನಗೆ ಮಚ್ಚೆ ಇಲ್ಲ ಅಂತ ಹೇಳುತ್ತಲೇ ಇರುತ್ತೇನೆ. ಬಾಲಕಿ ಪಾತ್ರ ಮಾಡಿದ್ದ ಹುಡುಗಿಯೂ ನಾನೇ ಅಂತ ತುಂಬಾ ಜನ ನಂಬಿದ್ದಾರೆ! ನೀವು ಚಿಕ್ಕವಳಿದ್ದಾಗಿನಿಂದ ನಿಮ್ಮನ್ನು ನೋಡ್ತಾ ಇದ್ದೇವೆ ಅಂತಾರೆ. ಇನ್ನೂ ಕೆಲವು ಹಿರಿಯರು ನೋಡುತ್ತಿದ್ದಂತೆ ಬಂದು “ಗೌರಿ..’ ಅಂತ ಅಪ್ಪಿಕೊಳ್ಳುತ್ತಾರೆ. ಅವರ ಮನೆಯದ್ದೇ ಹುಡುಗಿಯೊಬ್ಬಳು ಕಷ್ಟಪಡುತ್ತಿದ್ದಾಳೆ ಅನ್ನುವಷ್ಟರ ಮಟ್ಟಿಗೆ ನನ್ನ ನೋಡಿ ಮರುಕ ಪಡುತ್ತಾರೆ. ಒಮ್ಮೆ ಒಂದು ಅಜ್ಜಿಯಂತೂ ನನ್ನನ್ನು ತಬ್ಬಿಕೊಂಡು ಗೋಳ್ಳೋ ಅಂತ ಅತ್ತುಬಿಟ್ಟಿದ್ದರು. * ಯಾವ ವಿಷಯದಲ್ಲಿ ನಿಮಗೆ ಕ್ರೇಜ್ ಇದೆ?
ಬೈಕ್, ಕಾರ್ ಓಡಿಸುವುದರಲ್ಲಿ ನನಗೆ ಭಯಂಕರ ಕ್ರೇಜ್ ಇದೆ. ಅದರಲ್ಲೂ ಬುಲೆಟ್ ಓಡಿಸುವುದರಲ್ಲಿ ಸಿಗುವ ಮಜವೇ ಬೇರೆ. ತುಂಬಾ ಸ್ಪೀಡಾಗಿ ಡ್ರೈವ್ ಮಾಡ್ತೀನಿ ಅಂತ ಮನೆಯವರ ಹತ್ರ ಬೈಸಿಕೊಳ್ಳುವುದೂ ಇದೆ. ಬೈಕ್, ಬುಲೆಟ್ ರೈಡ್ ಮಾಡುವಾಗ ನಾನು ಹುಡುಗರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಅಂತನ್ನಿಸುತ್ತದೆ. ನಾನು ಬೇರೆ ಹುಡುಗಿಯರಿಗೂ ಹೇಳುವುದಿಷ್ಟೇ, ಒಮ್ಮೆಯಾದರೂ ಬೈಕ್ ಓಡಿಸಿ. ಆ ಅನುಭವ ನಿಜಕ್ಕೂ ನಿಮಗೆ ಆತ್ಮವಿಶ್ವಾಸ ಕೊಡುತ್ತದೆ. * ಆಗಾಗ ಟೀವಿಯಲ್ಲಿ ನೀವು ಹಾಡುವುದು ಕಾಣಾ¤ ಇರುತ್ತದೆ. ಹಿನ್ನೆಲೆ ಗಾಯಕಿಯಾಗಲು ಪ್ರಯತ್ನಿಸಿಲ್ವಾ?
ನಾನೊಂಥರಾ ಜೂಕ್ ಬಾಕ್ಸ್. ಸುಮ್ಮನೆ ಕೂರಲು ನನಗೆ ಬರುವುದೇ ಇಲ್ಲ. ಯಾವುದಾದರೂ ಹಾಡನ್ನು ನನ್ನಷ್ಟಕ್ಕೆ ಗುನುಗುತ್ತಲೇ ಇರುತ್ತೇನೆ. ನಾನು ಸಂಗೀತ ಕಲಿತಿದ್ದೇನೆ. ಬರೀ ಶಾಸ್ತ್ರೀಯ ಮಾತ್ರವಲ್ಲ, ಭಾವಗೀತೆ, ಗಜಲ್, ಸೂಫಿ ಗೀತೆ, ಕವ್ವಾಲಿ..ಹೀಗೆ ಎಲ್ಲಾ ಬಗೆಯ ಹಾಡುಗಳನ್ನೂ ಹಾಡುತ್ತೇನೆ. ಚಿಕ್ಕಂದಿನಲ್ಲಿ ನಾನು ಅದೆಷ್ಟು ವೇದಿಕೆಗಳಲ್ಲಿ ಹಾಡಿದ್ದೇನೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಹಿನ್ನೆಲೆ ಗಾಯಕಿ ಆಗುವ ಆಸೆ ಈಗಲೂ ಇದೆ. ಆದರೆ ಸಮಯ ಇಲ್ಲ. ಒಟ್ಟಿಗೇ ಎರಡು ದೋಣಿ ಮೇಲೆ ಕಾಲಿಡಬಾರದು ಅಲ್ವಾ? ಆದರೆ ನನ್ನ ಚಿತ್ರದಲ್ಲಿ ಒಂದು ಹಾಡು ಹಾಡಿದ್ದೇನೆ. * ನೀವು ಆಗಾಗ ಗುನುಗುವ ಹಾಡು ಯಾವುದು? ಯಾವ ಗಾಯಕ/ಗಾಯಕಿ ನಿಮಗೆ ಇಷ್ಟ?
ಕುವಂಪು ಅವರ “ಮುಚ್ಚು ಮರೆ ಇಲ್ಲದೆಯೆ’ ಹಾಡು ಮನಸ್ಸಿಗೆ ತುಂಬಾ ನೆಮ್ಮದಿ ಕೊಡುತ್ತದೆ. ತುಂಬಾ ಖುಷಿ ಆದಾಗ ಐಟಂ ಸಾಂಗ್‌ಗಳನ್ನೂ ಹಾಡುತ್ತೇನೆ. ಬಿಂದಾಸ್ ಚಿತ್ರದ “ಗುಬ್ಬಚ್ಚಿ ಗೂಡಿನಲ್ಲಿ’ ಹಾಡು ತುಂಬಾ ಇಷ್ಟ. ಶ್ರೇಯಾ ಘೋಷಾಲ್, ವಿಜಯ್ ಪ್ರಕಾಶ್ ಮತ್ತು ಟಿಪ್ಪು ಇಷ್ಟ. * ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಫ್ಯಾಷನೇಬಲ್ ಅಲ್ಲದಿರೋ ಡ್ರೆಸ್ ಹಾಕುವುದು..(ನಗು). ನಾನು ತುಂಬಾ ಸಿಂಪಲ್. ನನಗೆ ಬಟ್ಟೆ ಬರೆ ಬಗ್ಗೆ ತಲೆಕೆಡಿಸಿಕೊಳ್ಳುವುದೆಲ್ಲಾ ಇಷ್ಟ ಆಗಲ್ಲ. ಆ ಸಮಯವನ್ನು ಬೇರೆ ಯಾವುದಾದರೂ ಕೆಲಸಕ್ಕೆ ಬಳಸಿಕೊಳ್ಳಬಹುದಲ್ವಾ? * ನಟಿಯಾದ ಮೇಲಿನ ಅವಿಸ್ಮರಣೀಯ ಕ್ಷಣ ಯಾವುದು?
ಒಂದು ಶಾಲೆಗೆ ಬಹುಮಾನ ವಿತರಣೆಗಾಗಿ ಹೋಗಿದ್ದೆ. ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ಮೊದಲ ಬಹುಮಾನವನ್ನು ಕಿಂಡರ್ ಗಾರ್ಟನ್ ಮಗುವೊಂದು ಗೆದ್ದಿತ್ತು. ಆಮೇಲೆ ಗೊತ್ತಾಯಿತು ಆ ಮಗು “ಪುಟ್ಟ ಗೌರಿ’ ವೇಷ ಹಾಕಿದ್ದಳು ಅಂತ. * ನಿಮ್ಮ ಗಂಡನಾಗುವವ ಹೇಗಿರಬೇಕು?
ಸ್ವತ್ಛ ಕನ್ನಡದಲ್ಲಿ ಅರಳು ಹುರಿದಂತೆ ಮಾತನಾಡಬೇಕು, ಬುದ್ಧಿವಂತ ಆಗಿರಬೇಕು, ಸೆನ್ಸ್ ಆಫ್ ಹ್ಯೂಮರ್ ಇರಬೇಕು. ನನ್ನ ವೃತ್ತಿಯನ್ನು ಗೌರವಿಸಬೇಕು. * ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಿಮಗೇ ಅತಿರೇಕ ಅನ್ನಿಸಿದ ಘಟನೆ ಯಾವುದು?
ತನ್ನ ಗಂಡನ ಮನಸ್ಸು ನನ್ನ ಕಡೆ ತಿರುಗಿದೆ. ಈಗ ಅವನು ನನ್ನನ್ನು ಪ್ರೀತಿಸುತ್ತಿದ್ದಾನೆ ಅಂತ ಗೊತ್ತಾದ ಮೇಲೂ ಗೌರಿ ಹಿಮ ಜೊತೆ ಮಹಿ ಮದುವೆ ಮಾಡಿಸುತ್ತಾಳಲ್ಲ ಅದು. ಅಷ್ಟು ನಿಸ್ವಾರ್ಥಿ ಹುಡುಗಿಯರೂ ಇರ್ತಾರ ಅನ್ನಿಸಿತು. * ಮತ್ತೆ ಸಿನಿಮಾ ಕಡೆ ಹೋಗ್ತಿàರಾ ಅಥವಾ ಕಿರಿತೆರೆಯಲ್ಲೇ ನೆಲೆ ನಿಲ್ಲುತ್ತೀರಾ?
ಬಹುಷಃ “ಪುಟ್ಟಗೌರಿ ಮದುವೆ’ ನನ್ನ ಕಡೇ ಧಾರಾವಾಹಿ. ಒಬ್ಬ ನಟಿಯಾಗಿ ನನಗೆ ಇದು ಕಂಪ್ಲೀಟ್ ಪ್ಯಾಕೇಜ್. ಇಲ್ಲಿ ನಾನು ನಕ್ಕಿದ್ದೇನೆ, ಅತ್ತಿದ್ದೇನೆ, ಅಳಿಸಿದ್ದೇನೆ, ಪ್ರೀತಿಸಿದ್ದೇನೆ, ಸಾಹಸ ಮಾಡಿದ್ದೇನೆ. ಇಷ್ಟೆಲ್ಲಾ ಸ್ಕೋಪ್ ಇರುವ ಪಾತ್ರಗಳು ಮತ್ತೆ ನನಗೆ ಕಿರುತೆರೆಯಲ್ಲಿ ಸಿಗುವುದು ಕಷ್ಟ. ಅದಕ್ಕಿಂತ ಹೆಚ್ಚಾಗಿ ನನಗೆ ರಂಜನಿಯಾಗಿ ಗುರುತಿಕೊಳ್ಳುವ ಬಯಕೆ ಬೆಟ್ಟದಷ್ಟಿದೆ. ಸಿನಿಮಾಗಳಲ್ಲಿ ಅಭಿನಯಿಸಿದರೆ ಜನ ನಮ್ಮನ್ನು ನಮ್ಮದೇ ಹೆಸರಿನಿಂದ ಗುರುತಿಸುತ್ತಾರೆ. ಆದರೆ ಧಾರಾವಾಹಿಯಲ್ಲಿ ನಟಿಸಿದರೆ ನಮ್ಮನ್ನು ಬರೀ ಪಾತ್ರದ ಹೆಸರಿನಲ್ಲಿ ಗುರುತಿಸುತ್ತಾರೆ. ಅದಕ್ಕೆ ಇನ್ನೇನಿದ್ದರೂ ಸಿನಿಮಾಗಳಲ್ಲಿ ಮಾತ್ರ ಅಭಿನಯ ಅಂತ ತೀರ್ಮಾನಿಸಿದ್ದೇನೆ. ಟ್ರೋಲ್‌ಗಳನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೇನೆ!
ಟ್ರೋಲ್ ಆಗ್ತಾ ಇರುವುದು ಪುಟ್ಟಗೌರಿಯೇ ಹೊರತು ರಂಜನಿಯಲ್ಲ. ಪುಟ್ಟಗೌರಿ ಪಾತ್ರ ಟ್ರೋಲ್ ಆದರೆ ಅದಕ್ಕೆ ನಾನು ತಲೆಕೆಡಿಸಿಕೊಳ್ಳಬೇಕಿಲ್ಲ. ಅದಕ್ಕೂ ಹೆಚ್ಚಾಗಿ ನಾನು ಮಾಡಿರುವ ಪಾತ್ರವೊಂದು ಇಷ್ಟೊಂದು ಜನಪ್ರಿಯವಾಗ್ತಿದೆಯಾ ಅನ್ನಿಸಿ ಖುಷಿ ಆಗುತ್ತದೆ. ಇದರಿಂದ ನಾನು ಒಂದು ವಿಷಯ ಅರ್ಥ ಮಾಡಿಕೊಂಡಿದ್ದೇನೆ. ಮಧ್ಯಮ ವರ್ಗ ಮತ್ತು ಹಿರಿಯರು ಗೌರಿಯನ್ನು ಪ್ರೀತಿಸಿದರೆ ಯುವ ಸಮುದಾಯ ಆಕೆಯನ್ನು ದ್ವೇಷಿಸುತ್ತಿದೆ. ಅವರಿಗೆ ನಾನು ಕಿರಿಕಿರಿ ಮಾಡ್ತಾ ಇದ್ದೇನೆ. ಅವರು ನನ್ನನ್ನು ಗೌರಿಯಾಗಿ ಸ್ವೀಕರಿಸಿಲ್ಲ. ಆದರೆ ನಾನು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೇನೆ. ನಾನು ಯುವಕರನ್ನೂ ತಲುಪುವಂಥ ಪಾತ್ರಗಳನ್ನು ಮುಂದೆ ಮಾಡ್ತೀನಿ. ಅವರು ನನ್ನ ಪಾತ್ರವನ್ನು ಸ್ವೀಕರಿಸಿ ಪಾಸಿಟಿವ್ ಆಗಿ ಮಾತಾಡುವಂತೆ ಮಾಡ್ತೀನಿ. * ಸ್ಟಾರ್ ಆಗಿರೋದು ಪುಟ್ಟಗೌರಿ, ನಾನಲ್ಲ
* ಬುಲೆಟ್ ಓಡಿಸೋದು ಅಂದ್ರೆ ನಂಗೆ ತುಂಬಾ ಇಷ್ಟ
* ಪುಟ್ಟಗೌರಿ ಗುಣಕ್ಕೆ ತದ್ವಿರುದ್ಧವಾಗಿ ನಾನಿದೀನಿ
* ಬಹುಶಃ “ಪುಟ್ಟಗೌರಿ’ಯೇ ನನ್ನ ಕಡೆಯ ಸೀರಿಯಲ್ ಈ ನಟಿಯರ ಕುರಿತು ಏನ್ ಹೇಳ್ತೀರಾ?
“ಅಕ್ಕ’ ಧಾರಾವಾಹಿಯ ಅನುಪಮ– ಒಳ್ಳೆಯ ನಟಿ
“ಅಗ್ನಿಸಾಕ್ಷಿ’ ವೈಷ್ಣವಿ- ಗುಳಿ ಕೆನ್ನೆಯ ಕ್ಯೂಟ್ ಹುಡುಗಿ
“ಅಗ್ನಿಸಾಕ್ಷಿ’ ಚಂದ್ರಿಕಾ- ಹೊಸಬರಾಗಿದ್ರೂ ಸ್ವಲ್ಪ ಸಮಯದಲ್ಲೇ ಕಿರುತೆರೆಯಲ್ಲಿ ತಮ್ಮದೇ ಆದ ಸ್ಥಾನ ಸಂಪಾದಿಸಿದ ನಟಿ.
“ಲಕ್ಷ್ಮೀ ಬಾರಮ್ಮ ಗೊಂಬೆ’ ನೇಹಾ- ತುಂಬಾ ಸ್ವೀಟ್, ಹೃದಯವಂತೆ.
“ಪುಟ್ಟಗೌರಿ’ ಮಹೇಶ್- ಉತ್ತಮ ಸಹನಟ. ಒಳ್ಳೆ ಧ್ವನಿ, ಎತ್ತರ, ರೂಪ ಇದೆ. ಮುಂದೆ ದೊಡ್ಡ ಹೀರೊ ಆಗಬಹುದು. -ಫೇವರಿಟ್ ನಟ- ಅನಂತ್ ನಾಗ್, ಯಶ್
-ಫೇವರಿಟ್ ನಟಿ- ರಾಧಿಕಾ ಪಂಡಿತ್
-ಇಷ್ಟದ ತಿಂಡಿ- ಮಸಾಲೆ ಪುರಿ
-ಫ್ಯೂಚರ್ ಪ್ಲಾನ್- ಯಶಸ್ವೀ ಉದ್ಯಮಿ ಆಗುವುದು
-ಬಿಡುವಿನಲ್ಲಿ ಮಾಡುವುದು- ನಿದ್ದೆ, ತಂಗಿ ಜೊತೆ ಚೌಕಾಬಾರ ಆಟ * ಚೇತನ ಜೆ.ಕೆ.