ಮುಂಬಯಿ: ಪತ್ತನಾಜೆ ತುಳು ಚಲನಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದು ಅದ್ಭುತ ಯಶಸ್ಸಿನೊಂದಿಗೆ ಭಿವಂಡಿಯಲ್ಲಿ ಮುಂಬಯಿಯ 50 ನೇ ಪ್ರಯೋಗದ ದಾಖಲೆ ಪ್ರದರ್ಶನವನ್ನು ನೀಡಿ ಹೌಸ್‌ಫುಲ್ ಶೋ ಮೂಲಕ ಚಿತ್ರದ ಜನಪ್ರಿಯತೆಯನ್ನು ಸಾರಿ ಹೇಳಿದೆ. ಈ ಚಿತ್ರದ ನಿರ್ದೇಶಕ, ನಿರ್ಮಾಪಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರು ಲಿಮ್ಕಾ ಬುಕ್ ದಾಖಲೆಯ ಮೂಲಕ ವಿಶ್ವ ಖ್ಯಾತಿಯನ್ನು ಪಡೆದ ಈ ದೇಶದ ಮಹಾನ್ ಕಲಾವಿದ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಮುಂಬಯಿಯ ಪ್ರತಿಭಾ ಸಂಪನ್ನರು. ಇದೀಗ ಕಲಾಜೀವನದ ಹೊಸ ಹೆಜ್ಜೆಯಂತೆ ಚಿತ್ರ ನಿರ್ಮಾಣದಂತಹ ಕ್ಲಿಷ್ಟ ಕಾರ್ಯಕ್ಕೆ ಮನಸ್ಸು ಮಾಡಿ ಇಲ್ಲಿಯೂ ಅದ್ಭುತ ಯಶಸ್ಸನ್ನು ಕಂಡಿದ್ದಾರೆ. ಅವರಿಂದ ಇನ್ನಷ್ಟು ಉತ್ತಮ ಚಿತ್ರಗಳು ನಿರ್ಮಾಣಗೊಳ್ಳಲಿ ಎಂದು ಭಿವಂಡಿಯ ನಗರ ಸೇವಕ ಸಂತೋಷ್ ಎಂ. ಶೆಟ್ಟಿ ನುಡಿದರು.
ಜು. 1 ರಂದು ಭಿವಂಡಿಯ ಆಶೀಷ್ ಚಿತ್ರ ಮಂದಿರದಲ್ಲಿ ಕಲಾ ಜಗತ್ತು ಮುಂಬಯಿ ಕ್ರಿಯೇಶನ್ಸ್ ನಿರ್ಮಾಣದ ಪತ್ತನಾಜೆ ತುಳು ಸಿನೆಮಾದ 50ನೇ ಪ್ರದರ್ಶನದ ಮಧ್ಯೆ ನಡೆದ ಸಮ್ಮಾನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿ, ವಿಜಯ ಕುಮಾರ್ ಶೆಟ್ಟಿ ಅವರ ಸಿದ್ಧಿ-ಸಾಧನೆಗಳನ್ನು ಶ್ಲಾಘಿಸಿ, ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಪತ್ತನಾಜೆ ಸಿನೇಮಾದ ಮುಂಬಯಿಯ ಈ 50ನೇ ಪ್ರದರ್ಶನವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಭಿವಂಡಿಯ ಹಾಗೂ ಆಸುಪಾಸಿನ ಗಣ್ಯರು, ಕಲಾಜಗತ್ತು ಮತ್ತು ವಿಜಯಕುಮಾರ್ ಶೆಟ್ಟಿ ಅವರ ಅಭಿಮಾನಿಗಳಿಂದ 800 ಆಸನಗಳು ತುಂಬಿ ತುಳುಕುತ್ತಿದ್ದವು.
ಪ್ರಾರಂಭದಲ್ಲಿ ಚಿತ್ರಪ್ರೇಮಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ವಿನೂತನ ರೀತಿಯಲ್ಲಿ ಚಾಲನೆ ನೀಡಿದರು.
ಸಮಾರಂಭದಲ್ಲಿ ಭಿವಂಡಿ ನಗರ ಸೇವಕ ಸಂತೋಷ್ ಶೆಟ್ಟಿ ಹಾಗೂ ಭಿವಂಡಿಯ ಸಮಾಜ ಸೇವಕ, ಉದ್ಯಮಿ ಭಾಸ್ಕರ ಶೆಟ್ಟಿ ಅವರಿಗೆ ಕಲಾಜಗತ್ತು ವತಿಯಿಂದ ತೌಳವ ಸಿರಿ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು. ಶಶಿಲತಾ ಸಂತೋಷ್ ಶೆಟ್ಟಿ ಮತ್ತು ಜಯಂತಿ ಭಾಸ್ಕರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಸುಮಿತ್ ಶೆಟ್ಟಿ, ಕಲಾವಿದೆ ಐಶ್ವರ್ಯಾ ಶಂಕರ ಪೂಜಾರಿ, ಯುವ ನಾಯಕ ಪ್ರಶಾಂತ್ ಪೂಜಾರಿ, ಮುಂಬಯಿಯ ನೃತ್ಯ ನಿರ್ದೇಶಕಿ ದೀಕ್ಷಾ ದೇವಾಡಿಗ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಸಮ್ಮಾನಿಸಲಾಯಿತು.
ಅತಿಥಿಗಳಾಗಿ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಎನ್. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಭಿವಂಡಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಪೂಜಾರಿ, ಜಯರಾಮ ಪೂಜಾರಿ, ಧರ್ಮದರ್ಶಿ ವಿಶ್ವನಾಥ ಶೆಟ್ಟಿ, ಉದ್ಯಮಿಗಳಾದ ಜಗದೀಶ್ ಕೌಡೂರು, ರವೀಂದ್ರ ಶೆಟ್ಟಿ, ವಾಸು ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಭಾಸ್ಕರ ಶೆಟ್ಟಿ, ಹರೀಶ್ ಶೆಟ್ಟಿ, ರಾಜು ಮೆಂಡನ್, ನವೀನ್ ಶೆಟ್ಟಿ, ರತ್ನಾಕರ ಪೂಜಾರಿ, ಪ್ರಶಾಂತ್ ಪೂಜಾರಿ, ಯೋಗೀಶ್ ಶೆಟ್ಟಿ, ಆನಂದ, ಶಶಿಕಲಾ ಪೂಜಾರಿ, ಪವಿತ್ರಾ ಶೆಟ್ಟಿ, ಶೈಲಜಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿನೋದಾ ಶಂಕರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಲಾಜಗತ್ತಿನ ಬಿ. ಎಸ್. ಪೈ ಅವರು ವಂದಿಸಿದರು.