ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಬದುಕು ಎನ್ನುವುದು ನಂಬಿಕೆ, ಪರಂಪರೆ, ಸಂಪ್ರದಾಯಗಳ ಮುಪ್ಪರಿ. ಈ ಮುಪ್ಪರಿಯ ಒಳಗಡೆ ತುಳುವರ ಅನನ್ಯತೆ ಅಡಗಿದೆ. ಇದಕ್ಕೆ ನಿದರ್ಶನವೇ ತುಳುವರ “ಪತ್ತನಾಜೆ” ಅಥವಾ ಹತ್ತರ ಅವಧಿ.
ತುಳುವರ ಬೇಷ ತಿಂಗಳ ಅನಂತರ ಹತ್ತು ದಿನದ ಲೆಕ್ಕಾಚಾರವನ್ನು ಇಲ್ಲಿ ಪರಿಗಣಿಸಲಾಗುವುದು. ಕಳೆದ ಮೇ 15ರಂದು ಸಂಕ್ರಮಣ, 16ರಂದು “ಸಿಂಗೋಡೆ”, ಸಿಂಗೋಡೆಯಿಂದ ಇಂದಿನವರೆಗೆ 10ನೇ ದಿನ ಇಂದು “ಪತ್ತನಾಜೆ”. ಇಲ್ಲಿಯ ವಿಶೇಷವೇನೆಂದರೆ ತುಳುವರಿಗೆ ಒಂದು ವಿಶೇಷ “ಗಡು”. ಈ ದಿನಕ್ಕೆ ತುಳುನಾಡಿನ ಧ್ವಜಾರೋಹಣವಾಗಿ ನಡೆಯುವ ಜಾತ್ರೆ, ನೇಮ, ಕೋಲಗಳು ಮುಕ್ತಾಯಗೊಳ್ಳುತ್ತವೆ. ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ ಪತ್ತನಾಜೆಗೆ “ನೇಮ” ನಡೆಯುತ್ತದೆ. ಜಾನ ಪದ ಪ್ರಸಿದ್ಧ ಕ್ಷೇತ್ರವಾದ ಖಂಡಿಗೆಯಲ್ಲಿ ಇಂದು “ಕಲ್ಕುಡ ಕೋಲ”. ಇದು ಪರಂಪರೆಯಿಂದ ನಡೆದು ಬಂದ ಸಂಪ್ರದಾಯ.
ಯಕ್ಷಗಾನ ಮೇಳಗಳಿಗೆ ಒಳಸೇರುವ ಗಡು
ತುಳುನಾಡಿನ ಉಭಯ ಜಿಲ್ಲೆಗಳಲ್ಲಿರುವ ತೆಂಕು, ಬಡಗು ಯಕ್ಷಗಾನ ಮೇಳಗಳು ಮಹಾನವಮಿಯ ಸಂದರ್ಭ ತಿರುಗಾಟಕ್ಕೆ ತೊಡಗಿದರೆ “ಪತ್ತ ನಾಜೆ”ಗೆ ತಮ್ಮ ಕ್ಷೇತ್ರದಲ್ಲಿ ಪ್ರದರ್ಶನ ನೀಡಿ ಸಾಂಪ್ರದಾಯಿಕವಾಗಿ ಒಳ ಸೇರುವುದು ಪದ್ಧತಿ. ಅದಲ್ಲದೆ ದೇವಸ್ಥಾನಗಳ, ದೈವಸ್ಥಾನಗಳ ರಥ, ಬಂಡಿ, ಕುದುರೆ ಅಲ್ಲದೆ ಆರಾಧನಾ ಸಂದರ್ಭಗಳಲ್ಲಿ ಉಪಯೋಗಿಸುವ ಎಲ್ಲ ಪರಿಕರಗಳನ್ನು ದಾಸ್ತಾನು ಆವರಣಕ್ಕೆ ಸೇರಿಸಲಾಗುವುದು. ಕೇವಲ ಅಗೇಲು, ತಂಬಿಲಗಳು ಮಾತ್ರ ನಡೆಸಬಹುದು.
ಕೃಷಿ ಮೂಲ ಸಂಸ್ಕೃತಿಯ ಸಂಬಂಧ
ಪತ್ತನಾಜೆ, ಕೆಡ್ಡಸ, ಬಿಸು, ತುಳುವರ ಬಲಿಪೂಜೆ, ಪೊಲಿಪೂಜೆ, ಮಾರ್ನೆಮಿ ಈ ಎಲ್ಲ ಆಚರಣೆಗಳು ಕೃಷಿ ಮೂಲದಿಂದ ಆರಂಭವಾದ ಸಾಂಪ್ರದಾಯಿಕ ಆಚರಣೆಗಳು. ಆಧುನಿಕ ಕೃಷಿ ಪದ್ಧತಿ, ಸಾಮಾಜಿಕ ಪದ್ಧತಿ ಆರಂಭ ಆಗುವ ಮುನ್ನ ಮಳೆ ಮತ್ತು ಬೆಳೆಯನ್ನು ಆಧರಿಸಿ, ಅನುಸರಿಸಿಕೊಂಡು ಬರುತ್ತಿದ್ದ ತುಳುವರು “ಪತ್ತನಾಜೆ”ಯಂತಹ ಗಡುವನ್ನು (ಗಡು ಎಂದರೆ ನಿಷೇಧ, ತಡೆ ಎಂಬ ಅರ್ಥ) ಇಟ್ಟುಕೊಂಡಿದ್ದರು. ಇದಕ್ಕೆ ವೈಜ್ಞಾನಿಕ ಕಾರಣವೂ ಇತ್ತು.
Related Articles
ಈಗಿನಂತೆ ಮಳೆಗಾಲದಲ್ಲಿ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿ ಚಪ್ಪರದ ಒಳಗಡೆ, ಧ್ವನಿವರ್ಧಕದ ಬಳಕೆಯಿಂದ ಬಯಲಾಟವನ್ನೋ, ನೇಮ, ಕೋಲಗಳನ್ನೋ ಮಾಡಲು ಹಿಂದೆ ಅವಕಾಶ ಇರಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಪತ್ತನಾಜೆಯ ಅನಂತರ ತುಳುನಾಡಿನ ನಾಗರಿಕ ಸಮುದಾಯ ಹೆಂಗಸರು, ಮಕ್ಕಳು ಮುದುಕರೆನ್ನದೆ ಬೇಸಾಯದಲ್ಲಿ ತೊಡಗಿಕೊಳ್ಳಬೇಕಾಗಿರುವ ಅನಿವಾರ್ಯತೆಯಿತ್ತು. ಪತ್ತನಾಜೆಯ ಮೊದಲು ಏಣೇಲು ಬೇಸಾಯಕ್ಕೆ ಸಂಬಂಧಿಸಿದ ಸುಡುಮಣ್ಣು ಮಾಡುವುದು, ತೋಡು ಕೆರೆಗಳನ್ನು ಹೂಳೆತ್ತುವುದು, ಗೊಬ್ಬರ ನೇಜಿ ತಯಾರಿ ಈ ಎಲ್ಲ ಕೆಲಸಗಳು ಮುಗಿದಿರಬೇಕು. ಆ ಕಾರಣದಿಂದ ನಮ್ಮ ಹಿರಿಯರು ಮಾಡಿಕೊಂಡಿರುವ ಸಾಂಪ್ರದಾಯಿಕ ಚೌಕಟ್ಟು “ಪತ್ತನಾಜೆ” ಎನ್ನಬಹುದು. ಈ ಪಾರಿಭಾಷಿಕ ಶಬ್ದವನ್ನೇ ನೋಡಿದಾಗ “ಪತ್ತೆರೆ ಅಜೆ”. “ಅಜೆ” ಎಂದರೆ ತುಳು ಭಾಷೆಯಲ್ಲಿ ಅನುಭವಪೂರ್ಣ ನಡೆ ಎಂದರ್ಥ. “ಹತ್ತು ಸೇರಿದಲ್ಲಿ ಮುತ್ತು ಇದೆ” ಎಂದಾಗ ಸಮುದಾಯದ ತೀರ್ಮಾನ ಎಂದೂ ಅರ್ಥವಾಗುತ್ತದೆ. ಒಟ್ಟಿನಲ್ಲಿ ಪತ್ತನಾಜೆ ಎಂದರೆ ತುಳುವರ ಧಾರ್ಮಿಕ, ಸಾಮಾಜಿಕ ಅನನ್ಯತೆಯ ಸಂಕೇತ ಮತ್ತು ಸಂಕ್ರಮಣ.
ಡಾ| ಗಣೇಶ್ ಅಮೀನ್ ಸಂಕಮಾರ್