ಬೆಂಗಳೂರು: “ಜಾತಿಯ ಹಂಗು ತೊರೆದು ಕೊಡಗಿನ ಸಂತ್ರಸ್ತರ ನೋವಿಗೆ ಮಿಡಿಯುತ್ತಿರುವವರೇ ನಿಜವಾದ ದೇಶಭಕ್ತರು’ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕುವೆಂಪು ಕಲಾಕೇಂದ್ರ ಟಸ್ಟ್ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಕುವೆಂಪು ಸಾಹಿತ್ಯಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ದೇಶಾದ್ಯಂತ ಈಗ ಜಾತಿ , ಧರ್ಮ ಹಾಗೂ ದೇಶಭಕ್ತಿ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಆದರೆ, ಈ ಜಾತಿಯ ಹಂಗು ತೊರೆದು ಕೊಡಗಿನ ಸಂತ್ರಸ್ತರ ನೆರವಿಗೆ ಧಾವಿಸುತ್ತಿರುವ ಮನಸ್ಸುಗಳು ನಿಜವಾದ ದೇಶಭಕ್ತರು ಎಂದರು.
ಎಲ್ಲ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವವನ್ನೇ ಒಡೆಯುವ ಕೆಲಸದಲ್ಲಿ ನಿರತವಾಗಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ವೋಟಿನ ಆಸೆಗಾಗಿ, ಜಾತಿ ಧರ್ಮ ಹೆಸರಲ್ಲಿ ಒಡೆದಾಳಲಾಗುತ್ತದೆ. ಆದರೆ, ಸಾಹಿತ್ಯ ಮತ್ತು ಕಲೆ ಮಾತ್ರ ಯಾವಾಗಲೂ ಧರ್ಮವನ್ನು ಒಂದು ಗೂಡಿಸುವ ಕೆಲಸ ಮಾಡುತ್ತಲೇ ಇರುತ್ತವೆ ಎಂದು ತಿಳಿಸಿದರು.
ವಿಶ್ವಾಸರ್ಹತೆ ಪ್ರಶ್ನೆ ಕಾಡುತ್ತಿದೆ: ಸಾಹಿತಿಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಮೂಡಿದಂತೆ ಈಗ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆಯೂ ಹಲವು ಅನುಮಾನಗಳು ಕಾಡಲು ಆರಂಭವಾಗಿದೆ. ನ್ಯಾಯಾಧೀಶರು ಬದಲಾದಂತೆ ಕೆಲವು ಸಲ ತೀರ್ಪುಗಳು ಕೂಡ ಆಗಾಗ ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಸಾಪ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ಎಲ್ಲ ಕ್ಷೇತ್ರದಲ್ಲೂ ಸಲ್ಲುವ ಸಾಹಿತಿ ಅಂದರೆ ಅದು, ಬರಗೂರು ರಾಮಚಂದ್ರಪ್ಪ ಮಾತ್ರ. ಯಾವುದೇ ವ್ಯಕ್ತಿಯಾಗಿರಲಿ ಜಾತಿ, ಧರ್ಮವನ್ನು ಮೀರಿ ಬರೆಯಬೇಕು ಹಾಗೆ ,ಅವರು ಬದುಕ ಬೇಕು. ಈ ಎರಡು ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿರುವ ಅವರು ನಮಗೆ ಮಾದರಿ ಎಂದರು.
ಹಿರಿಯ ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ, ಕುವೆಂಪು ಕಲಾ ಕೇಂದ್ರ ಟ್ರಸ್ಟ್‌ನ ಅಧ್ಯಕ್ಷ ಎಂ.ಕೆ.ರಂಗಪ್ಪ ಮಾದಲಗೆರೆ, ಕರ್ನಾಟಕ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಸಿ.ಕೆ.ರಾಮೇಗೌಡ ಇತರರು ಇದ್ದರು. ಪ್ರಶಸ್ತಿ ಮೊತ್ತ ಕೊಡಗು ಸಂತ್ರಸ್ತರಿಗೆ: ಕುವೆಂಪು ಕಲಾಕೇಂದ್ರ ಟ್ರಸ್ಟ್ ನೀಡಿರುವ “ಕುವೆಂಪು ಸಾಹಿತ್ಯಶ್ರೀ’ ಪ್ರಶಸ್ತಿ ಮೊತ್ತದ 5 ಸಾವಿರ ರೂ.ನಗದು ಕೊಡಗು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಬರಗೂರರು ಹೇಳಿದರು.