ಸೋನೆಪತ್ (ಹರ್ಯಾಣ): : ಪ್ರೊ ಕಬಡ್ಡಿ 5ನೇ ಆವೃತ್ತಿಯ ಹರಿಯಾಣ ಚರಣಕ್ಕೆ ಶುಕ್ರವಾರ ಮೋತಿಲಾಲ್ ನೆಹರೂ ಸ್ಕೂಲ್ ಆಫ್ ನ್ಪೋರ್ಟ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ರೋಚಕ ಚಾಲನೆ ದೊರಕಿತು. ಗೆಲುವಿನ ಉಮೇದಿನೊಂದಿಗೆ ಕಣಕ್ಕೆ ಇಳಿದಿದ್ದ ಆತಿಥೇಯ ಹರ್ಯಾಣ ಸ್ಟೀಲರ್ ತಂಡವನ್ನು ಕೊನೆಯಲ್ಲಿ 41-41 ಅಂತರದಿಂದ ಪಾಟ್ನಾ ಪೈರೇಟ್ಸ್ ಟೈ ಮಾಡಿಸಿತು.
ಆರಂಭದಲ್ಲಿ ಹರ್ಯಾಣ ಅಬ್ಬರಿಸಿತ್ತು. ಎದುರಾಳಿ ಕೋಟೆನ್ನು ಮೊದಲ ಅವಧಿಯಲ್ಲಿ ಒಮ್ಮೆ, 2ನೇ ಅವಧಿಯಲ್ಲಿ ಂದು ಸಲ ಆಲೌಟ್ ಮಾಡಿತು. ಆದರೆ ಇದ್ಯಾವುದೂ ಸ್ಟೀಲರ್ ನೆರವಿಗೆ ಬರಲಿಲ್ಲ. ಹರಿಯಾಣ ಪರ ಮೋಹಿತ್ ಚಿಲ್ಲರ್ 5 ಟ್ಯಾಕಲ್ ಅಂಕ ಪಡೆದರು. ವಜೀರ್ ಸಿಂಗ್ ರೈಡಿಂಗ್‌ನಿಂದ 10 ಅಂಕ ಸಂಪಾದಿಸಿದರು.
2ನೇ ಅವಧಿಯ ಕೊನೆಯ 10 ನಿಮಿಷದ ಆಟದ ಅವಧಿಯಲ್ಲಿ ಪಾಟ್ನಾ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಒಟ್ಟಾರೆ 18 ಅಂಕದ ಹಿನ್ನಡೆಯಲ್ಲಿದ್ದ ಪಾಟ್ನಾ 2 ಬಾರಿ ಸ್ಟೀಲರ್ ಆಲೌಟ್ ಮಾಡಿತ್ತಲ್ಲದೆ 41-41 ಅಂತರದ ಟೈ ಸಾಧಿಸಿ ಊಹಿಸಲಾಗದ ಫಲಿತಾಂಶವೊಂದನ್ನು ನೀಡಿತು. ತಂಡದ ಪರ ಪ್ರದೀಪ್ ನರ್ವಾಲ್ ರೈಡಿಂಗ್‌ನಿಂದ 13 ಅಂಕ ತಂದರು. ವಿಜಯ್ 4 ಟ್ಯಾಕಲ್ ಅಂಕ ತಂದುಕೊಟ್ಟು ಪಾಟ್ನಾ ಟೈ ಸಾಧಿಸುವಂತೆ ಮಾಡಿದರು.
ಪಂದ್ಯದ ಆರಂಭದಿಂದಲೂ ಹರಿಯಾಣ ತಂಡ ಅಬ್ಬರ ಹಾಗೂ ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಪ್ರಾಶಸ್ತÂ ನೀಡಿತು. ಹರಿಯಾಣಕ್ಕೆ ರೈಡರ್ ಸುರ್ಜಿತ್ ಸಿಂಗ್ ಪ್ರಾರಂಭಿಕ ಮುನ್ನಡೆ ತಂದುಕೊಟ್ಟರು. ಇವರಿಗೆ ವಜೀರ್ ಸಿಂಗ್, ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾಥ್ ನೀಡಿದರು. ಮೊದಲ ಅವಧಿ ಮುಗಿಯಲು ಇನ್ನೇನು 7 ನಿಮಿಷ ಬಾಕಿ ಇರುವಾಗ ಪಾಟ್ನಾ ಪೈರೇಟ್ಸ್ ಮೊದಲ ಬಾರಿಗೆ ಆಲೌಟಾಯಿತು. ಈ ವೇಳೆ ಹರಿಯಾಣ 15-8ರಿಂದ ಭರ್ಜರಿ ಮುನ್ನಡೆ ಪಡೆದುಕೊಂಡಿತ್ತು. ಆದರೆ ಹರ್ಯಾಣ ಇಲ್ಲಿಗೆ ತನ್ನ ಅಬ್ಬರವನ್ನು ನಿಲ್ಲಿಸಲಿಲ್ಲ. ಮೊದಲ ಅವಧಿ ಮುಗಿದಾಗ ಆತಿಥೇಯ ತಂಡ 22-12 ಅಂತರದ ಮುನ್ನಡೆ ಕಾಯ್ದುಕೊಂಡಿತ್ತು. ಆಗ ಪಾಟ್ನಾ 2ನೇ ಸಲ ಆಲೌಟಾಗುವ ಆತಂಕಕ್ಕೆ ಒಳಗಾಗಿತ್ತು.
2ನೇ ಅವಧಿಯ ಆರಂಭದ ಮೊದಲ ನಿಮಿಷದಲ್ಲೇ ಪಾಟ್ನಾವನ್ನು ಹರಿಯಾಣ ಆಲೌಟ್ ಮಾಡಿತು. 26-13 ಅಂತರದಿಂದ ಸ್ಟೀಲರ್ ದೊಡ್ಡ ಮುನ್ನಡೆ ಪಡೆದುಕೊಂಡರು. ಅಲ್ಲದೆ ನಿರಂತರವಾಗಿ ಪಾಟ್ನಾ ಕೋಟೆಯನ್ನು ಹರಿಯಾಣ ಸ್ಟೀಲರ್ ಖಾಲಿ ಮಾಡುತ್ತಾ ಸಾಗಿತು. ಅಷ್ಟೇ ಅಲ್ಲ 31-15 ಅಂತರದ ಭಾರೀ ಮುನ್ನಡೆಯನ್ನು ಹರಿಯಾಣ ಪಡೆದುಕೊಂಡಿತು. ಪಂದ್ಯ ಮುಗಿಯಲು 9 ನಿಮಿಷ ಇರುವಾಗ ಪಾಟ್ನಾ ಪರ ಸಂದೀಪ್ ನರ್ವಲ್ ಭರ್ಜರಿ ರೈಡಿಂಗ್ ಮೂಲಕ 3 ಆಟಗಾರರನ್ನು ಔಟ್ ಮಾಡಿದರು. ಆಗ ಇಕ್ಕಟ್ಟಿಗೆ ಹರ್ಯಾಣ ಇಕ್ಕಟ್ಟಿಗೆ ಸಿಲುಕಿತ್ತಲ್ಲದೆ ಮೊದಲ ಬಾರಿಗೆ ಆಲೌಟಾಯಿತು. ಅಲ್ಲಿಂದ ಪಾಟ್ನಾ ಓಟ ಶುರುವಾಯಿತು.
ರಾಷ್ಟ್ರಗೀತೆ ಹಾಡಿ ಸಾಕ್ಷಿ ಚಾಲನೆ
ಪಂದ್ಯದ ಆರಂಭಕ್ಕೂ ಮೊದಲು ಹರಿಯಾಣದ ಖ್ಯಾತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಕ್ರೀಡಾಂಗಣಕ್ಕೆ ಆಗಮಿಸಿದರು. ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕ್ರೀಡಾಂಗಣಕ್ಕೆ ಆಗಮಿಸಿ ಅಭಿಮಾನಿಗಳತ್ತ ಕೈಬೀಸಿದರು. ರಾಷ್ಟ್ರಗೀತೆ ಹಾಡುವ ಮೂಲಕ ಹರಿಯಾಣ ಚರಣಕ್ಕೆ ಚಾಲನೆ ನೀಡಿದರು.
– ಹೇಮಂತ್ ಸಂಪಾಜೆ