Advertisement

ನೀರಸ ಪಂದ್ಯದಲ್ಲಿ  ಹರಿಯಾಣಕ್ಕೆ 30-26ರ ಜಯ

09:50 AM Sep 22, 2017 | Team Udayavani |

ರಾಂಚಿ: ಇದೊಂದು ನೀರಸ ಪಂದ್ಯ… ಹರಿಯಾಣ ಸ್ಟೀಲರ್ಸ್‌ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ ನಡುವೆ ಪ್ರೊ ಕಬಡ್ಡಿ ರಾಂಚಿ ಚರಣದ ಕೊನೆಯ ದಿನ ನಡೆದ ಪಂದ್ಯವನ್ನು ಹೀಗೆ ವಿವರಿಸಿದರೆ ಸರಿಯಾಗುತ್ತದೆ. ಎರಡೂ ತಂಡಗಳ ರಕ್ಷಣೆ ಮತ್ತು ದಾಳಿಯಲ್ಲಿ ಚುರುಕುತನವಾಗಲೀ, ಗುಣಮಟ್ಟವಾಗಲೀ ಇರಲಿಲ್ಲ. ಎರಡರ ಪೈಕಿ ಹರಿಯಾಣ 30-26 ಅಂಕಗಳಿಂದ ಗೆದ್ದರೂ ಇಬ್ಬರಲ್ಲೊಬ್ಬರು ಗೆಲ್ಲುವುದು ಸಹಜವಾಗಿರುವುದರಿಂದ ಇದನ್ನು ಗೆಲುವು ಎಂದು ಹೇಳಲು ಕಷ್ಟವಾಗುತ್ತದೆ. ದಿನದ ಎರಡನೇ ಪಂದ್ಯ ಮಾತ್ರ ತೀವ್ರ ಸೆಣಸಾಟದಿಂದ ಸಾಗಿತ್ತು. ಆದರೆ ಆತಿಥೇಯ ಪಾಟ್ನಾ ಪೈರೇಟ್ಸ್‌ ತಂಡ ಗೆಲ್ಲಲು ಮಾತ್ರ ವಿಫ‌ಲವಾಯಿತು. ಅಂತಿಮವಾಗಿ ಯುಪಿ ಯೋಧಾ ತಂಡವು 46-41 ಅಂಕಗಳಿಂದ ಜಯಭೇರಿ ಬಾರಿಸಿ ಪಾಟ್ನಾವನ್ನು ಆಘಾತಗೊಳಿಸಿತು. 

Advertisement

ಹರಿವಂಶ್‌ ಭಗತ್‌ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 5ನೇ ಆವೃತ್ತಿ ಪ್ರೊ ಕಬಡ್ಡಿ ರಾಂಚಿ ಚರಣದ ಮೊದಲ ಪಂದ್ಯದಲ್ಲಿ ಪ್ರೇಕ್ಷಕರಿಗೆ ಹೇಳಿಕೊಳ್ಳುವಂತಹ ರಂಜನೆಯೇನಿರಲಿಲ್ಲ. ಎರಡೂ ತಂಡಗಳಲ್ಲಿ ಪ್ರಬಲ, ಸಮರ್ಥ ಆಟಗಾರರ ಕೊರತೆ ಎದ್ದು ಕಾಣುತ್ತಿತ್ತು. ಜಿಂಬಾಬ್ವೆ ಮತ್ತು ಕೀನ್ಯ ನಡುವೆ ಕ್ರಿಕೆಟ್‌ ಪಂದ್ಯ ನಡೆದರೆ ಹೇಗಿರುತ್ತದೋ ಅಂತಹದ್ದೇ ಅನುಭವ ಇಲ್ಲೂ ಇತ್ತು.

ಪಂದ್ಯದ ಮೊದಲರ್ಧ ಎರಡೂ ತಂಡಗಳ ನಡುವೆ ಅಂಕಗಳಿಗಾಗಿ ನಿಕಟ ಕಾದಾಟ ನಡೆದಿತ್ತು. 20ನೇ ನಿಮಿಷ ಮುಗಿದಾಗ ಇತ್ತಂಡಗಳೂ 12-12ರಿಂದ ಸಮಬಲ ಸಾಧಿಸಿದ್ದವು. ಅಂದ ಮಾತ್ರಕ್ಕೆ ಇಲ್ಲಿ ರೋಚಕತೆ ಇರಲಿಲ್ಲ. ಹೇಗೋ ಒಂದು ರೀತಿಯಲ್ಲಿ ಅಂಕಗಳು ಬರುತ್ತಿದ್ದಂತಹ ಸ್ಥಿತಿಯಿತ್ತು. ಪಂದ್ಯಕ್ಕೆ ತುಸು ರೋಚಕತೆ ಬಂದಿದ್ದು 2ನೇ ಅವಧಿಯಲ್ಲಿ. ಇಲ್ಲಿ ಹರಿಯಾಣ ತಂಡ ಪೂರ್ಣ ಮೇಲುಗೈ ಸಾಧಿಸಿತು.

ಪಂದ್ಯದ ಕೊನೆಯ ನಿಮಿಷಗಳಲ್ಲಿ ಜೈಪುರಕ್ಕೆ ಕೆಲವು ಅಂಕಗಳು ಲಭಿಸಿದರೂ ಅಷ್ಟೊತ್ತಿಗಾಗಲೇ ಹರ್ಯಾಣ ಗೆದ್ದಾಗಿತ್ತು! ಮುಂದೆ ಜೈಪುರ ಗಳಿಸಿದ ಅಂಕಗಳೆಲ್ಲ ಅಂತರ ಕಡಿಮೆಗೊಳ್ಳಲಷ್ಟೇ ನೆರವಾದವು. ಸ್ವತಃ ಜೈಪುರದ ನಾಯಕ ಮಂಜೀತ್‌ ಚಿಲ್ಲರ್‌ ವೈಫ‌ಲ್ಯಅನುಭವಿಸಿದರು. ಅದೂ ರಕ್ಷಣಾ ವಿಭಾಗದಲ್ಲಿಯೇ ಪ್ರಸಿದ್ಧವಾಗಿರುವ ಅವರು 2 ಬಾರಿ ಅನವಶ್ಯಕವಾಗಿ ಔಟಾಗಿ, ಪ್ರೇಕ್ಷಕರಿಗೆ ನಿರ್ಲಕ್ಷ್ಯತನವಿರಬಹುದೆಂಬ ಭಾವನೆ ಮೂಡಿಸಿದರು. ದಾಳಿಯಲ್ಲೂ ಅವರ ಪಾಲು ಕನಿಷ್ಠ. ಇಡೀ ಪಂದ್ಯದಲ್ಲಿ ಜೈಪುರ ಒಮ್ಮೆ ಮಾತ್ರ ಆಲೌಟಾ ಯಿತು. ಅದು ಪಂದ್ಯದ 28ನೇ ನಿಮಿಷದಲ್ಲಿ. ಇದನ್ನು ಹೊರತುಪಡಿಸಿದರೆ ಇತ್ತಂಡಗಳು ಆಲೌಟಾಗ ಲಿಲ್ಲ. ಈ ಗೆಲುವಿನ ಮೂಲಕ ವಲಯ 1ರ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಉಳಿಸಿಕೊಳ್ಳಲು ಹರ್ಯಾಣ ಯಶಸ್ವಿಯಾಯಿತು.

ಕೆ.ಪೃಥ್ವಿಜಿತ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next