Advertisement
Related Articles
Advertisement
ಪಟ್ಲರ ಮಹತ್ವಾಕಾಂಕ್ಷೆ ಅರಿತಿದ್ದ ಅವರ ಅಭಿಮಾನಿಗಳು ಜೊತೆಗೂಡಿ ಯಕ್ಷಗಾನ ರಂಗ ಹಿಂದೆಂದೂ ಕಾಣದ ರೀತಿಯಲ್ಲಿ ಬೃಹತ್ ಟ್ರಸ್ಟನ್ನಾಗಿಸಿ ಕಲಾವಿದರೆಲ್ಲರ ಮೊಗದಲ್ಲಿ ನಗು ಕಾಣಿಸಿದ್ದಾರೆ. ನೂರಾರು ಅಶಕ್ತ ಕಲಾವಿದರು ಪಟ್ಲ ಟ್ರಸ್ಟ್‌ನ ಸದುಪಯೋಗ ಪಡೆದುಕೊಂಡಿದ್ದಾರೆ.
ಪಟ್ಲ ಯಕ್ಷಾಶ್ರಯ ಯೋಜನೆಯ ಮೂಲಕ ಮನೆ ಇಲ್ಲದ ಬಡ ಕಲಾವಿದರಿಗೆ ನೂರು ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆ ಟ್ರಸ್ಟ್ ಮುಂದಿದ್ದು, ಈಗಾಗಲೇ ಕೆಲ ಅಶಕ್ತ ಕಲಾವಿದರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಕಲಾವಿದರ ಮಕ್ಕಳು ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣವನ್ನು ನಿಲ್ಲಿಸಬಾರದು ಎಂದು ವಿದ್ಯಾರ್ಥಿ ವೇತವನ್ನೂ ನೀಡಲಾಗುತ್ತಿದೆ.
ಸುಮಾರು 300 ಮಂದಿ ಕಲಾವಿದರಿಗೆ ಅಪಘಾತ ವಿಮಾ ಯೋಜನೆಯನ್ನೂ ಜಾರಿ ಮಾಡಲಾಗಿದೆ. ಅಪಘಾತ ಚಿಕಿತ್ಸಾ ವೆಚ್ಚ ರೂ. 3 ಲಕ್ಷ ಹಾಗೂ ಆಕಸ್ಮಿಕ ಜೀವಹಾನಿಯಾದಲ್ಲಿ ಕುಟುಂಬಕ್ಕೆ 8 ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ. ದುರಂತವೆಂಬಂತೆ ಹೊನ್ನಾವರದಲ್ಲಿ ಭೀಕರ ಅಪಘಾತದಲ್ಲಿ ಮೃತ ಪಟ್ಟ ಸೌಕೂರು ಮೇಳದ ಕಲಾವಿದ ದಿನೇಶ್ ಹೆನ್ನಾಬೈಲು ಅವರು ಈ ವಿಮೆ ಮಾಡಿಸಿದ್ದರು. ಅವರ ಕುಟುಂಬಕ್ಕೆ ಟ್ರಸ್ಟ್ ವತಿಯಿಂದ 8 ಲಕ್ಷ ರೂಪಾಯಿ ನೀಡಲಾಗುತ್ತಿದೆ.
ಪ್ರತೀ ವರ್ಷವೂ ಕಲಾವಿದರಿಗೆ ಸನ್ಮಾನ, ಅತ್ಯುತ್ತಮ ಯಕ್ಷಗಾನ ಪ್ರದರ್ಶನಗಳು, ತಾಳ ಮದ್ದಲೆಗಳನ್ನು ಸಂಯೋಜಿಸಲಾಗುತ್ತಿದೆ.
ಪಟ್ಲ ಸತೀಶ್ ಶೆಟ್ಟಿ ಅವರ ಕಿರು ಪರಿಚಯಬಂಟ್ವಾಳದ ಪಟ್ಲಗುತ್ತುವಿನಲ್ಲಿ ಮಹಾಬಲ ಶೆಟ್ಟಿ ಮತ್ತು ಲಲಿತಾ ದಂಪತಿಗಳ ಮಗನಾಗಿ ಜನಿಸಿದ ಸತೀಶ್ ಶೆಟ್ಟಿ ಅವರು ಅಜ್ಜ ದುಗ್ಗಪ್ಪ ಶೆಟ್ಟಿ ಅವರ ಪ್ರೀತಿಯಲ್ಲಿ ಬೆಳೆದರು. ಪಿಯುಸಿ ಶಿಕ್ಷಣ ಮುಗಿಸಿ ಸತೀಶ್ ಶೆಟ್ಟಿಯವರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಲ್ಲಿ ಶಿಷ್ಯತ್ವವನ್ನು ಪಡೆದು ಯಕ್ಷಗಾನ ಶಿಕ್ಷಣ ಆರಂಭಿಸಿದರು. ಅದಾಗಲೇ ಓರ್ವ ಶ್ರೇಷ್ಠ ಭಾಗವತನಾಗಿ ಹೊರ ಹೊಮ್ಮುವ ಕಂಠ ಸಿರಿ ಅವರಲ್ಲಿತ್ತು. ಹಿಂದೂಸ್ಥಾನಿ, ಕರ್ನಾಟಕ ಸಂಗೀತವನ್ನೂ ಸತೀಶ್ ಶೆಟ್ಟಿ ಅವರು ಅಭ್ಯಸಿಸಿದ್ದಾರೆ. 1999 ರ ಲ್ಲಿ ಕಟೀಲು ಮೇಳಕ್ಕೆ ಸೇರಿಕೊಂಡ ಸತೀಶ್ ಶೆಟ್ಟಿ ಅವರು , ಅಲ್ಲಿ ದಿಗ್ಗಜ ಭಾಗವತರಾದ ಬಲಿಪ ಭಾಗವತರೊಂದಿಗಿನ ಒಡನಾಟದಲ್ಲಿ ಬೆಳೆದವರು. ನಿರಂತರವಾಗಿ ಕಟೀಲು ಮೇಳದಲ್ಲಿಯೇ 18 ವರ್ಷಗಳಿಂದ ಭಾಗವತರಾಗಿ ತನ್ನದೇ ಪಟ್ಲ ಶೈಲಿಯ ಮೂಲಕ ಗಾನ ಸಿರಿಯನ್ನು ಹರಿಸುತ್ತಿದ್ದು ಲಕ್ಷಾಂತರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದಾರೆ. ಅಮೆರಿಕಾ, ಇಂಗ್ಲೆಂಡ್, ಮಸ್ಕತ್, ದುಬೈ, ಸಿಂಗಾಪುರ ಸೇರಿದಂತೆ ವಿದೇಶದಲ್ಲೂ ನೂರಾರು ಕಾರ್ಯಕ್ರಮಗಳನ್ನು ನೀಡಿ ಮನಗೆದ್ದಿದ್ದಾರೆ.
ಪತ್ನಿ ನಿರ್ಮಿತ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಹೊಂದಿರುವ ಪಟ್ಲರು ಯಕ್ಷರಂಗಕ್ಕೆ ಇನ್ನಷ್ಟು ಕೊಡುಗೆಗಳನ್ನು ನೀಡಲಿ ಎನ್ನುವುದು ಆಶಯ.