ಪುಣೆ: ತ್ರಿರಂಗ ಸಂಗಮ ನಮ್ಮನ್ನು ಕರೆಸಿ ಮಹಾರಾಷ್ಟ್ರದಲ್ಲಿ ಒಟ್ಟು 14 ಪ್ರದರ್ಶನಗಳನ್ನು ಏರ್ಪಡಿಸಿದೆ. ನಾವು ಇಂದು ಸಮಾರೋಪ ಪ್ರದರ್ಶನ ನೀಡುತ್ತಿರುವುದು ಬಹಳಷ್ಟು ಸಂತೋಷ ನೀಡಿದೆ. ಇಂದು ಪಿಂಪ್ರಿ-ಚಿಂಚ್ವಾಡ್‌ನಲ್ಲಿ ಅಪಾರ ಸಂಖ್ಯೆಯ ಕಲಾಭಿಮಾನಿಗಳು ಸೇರಿದ್ದಾರೆ. ಈ ಕಾಲದಲ್ಲಿಯೂ ಹೊರನಾಡಿನಲ್ಲಿ ಯಕ್ಷಗಾನ ಕಲೆಗೆ ಇಷ್ಟೊಂದು ಪ್ರೋತ್ಸಾಹ ಸಿಗುತ್ತಿದೆ ಎಂದರೆ ಇದಕ್ಕಿಂತ ದೊಡ್ಡ ಸಂತೋಷ ಇನ್ನೇನಿದೆ. ಇಂದು ಅಂಕಿತಾ ಎನ್ನುವ ಹುಡುಗಿ ನನ್ನ ಭಾವಚಿತ್ರವೊಂದನ್ನು ಪಡಮೂಡಿಸಿ ನನಗೆ ಗೌರವಿಸಿರುವುದು ಯುವ ಜನತೆಯನ್ನು ಯಕ್ಷಗಾನ ಎಷ್ಟು ಆಕರ್ಷಿಸುತ್ತದೆ ಎಂಬುದಕ್ಕೆ ಸಾಕ್ಷಿ. ಯುವ ಜನತೆಯನ್ನು ಯಕ್ಷಗಾನಕ್ಕೆ ಆಕರ್ಷಿಸುವ ಕಾರ್ಯ ನಮ್ಮಿಂದಾಗಬೇಕಾಗಿದೆ ಎಂದು ಯಕ್ಷಧ್ರುವ ಹಾಗೂ ಪಟ್ಲ ಫೌಂಡೇಶನ್‌ನ ಸ್ಥಾಪಕ, ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಶ್ರೀ ಅಯ್ಯಪ್ಪ ಸೇವಾ ಮಂಡಲ ನೆಹರೂನಗರ ಪಿಂಪ್ರಿ – ಚಿಂಚ್ವಾಡ್ ಸಂಯೋಜನೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕ, ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರುಜ ಕ್ಷೇತ್ರ ಪಾವಂಜೆಯ ಪ್ರಸಿದ್ಧ ಕಲಾವಿದರಿಂದ ಅ. 20ರಂದು ಪಿಂಪ್ರಿಯ ಆಚಾರ್ಯ ಅತ್ರೆ ನಾಟ್ಯಗೃಹದಲ್ಲಿ ಆಯೋಜಿಸಿದ್ದ ಧರ್ಮ ಸಿಂಹಾಸನ ಯಕ್ಷಗಾನ ಪ್ರದರ್ಶನದ ಮಧ್ಯಾಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯಕ್ಷಗಾನ ಮನೋರಂಜನೆ ಜತೆಗೆ ಆರಾಧನ ಕಲೆಯಾಗಿದೆ. ಪಿಂಪ್ರಿ – ಚಿಂಚ್ವಾಡ್ ಶ್ರೀ ಅಯ್ಯಪ್ಪ ಸೇವಾ ಮಂಡಲ ಭಕ್ತಿಪೂರ್ವಕವಾಗಿ ಪೌರಾಣಿಕ ಯಕ್ಷಗಾನ ಪ್ರದರ್ಶನ ಆಯೋಜಿಸಿರುವುದಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹ ಖಂಡಿತಾ ಇದೆ. ಯಕ್ಷಗಾನ ನನಗೆ ಬಹಳಷ್ಟನ್ನು ನೀಡಿದ್ದು, ನಾನು ಯಕ್ಷಗಾನಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕಾಗಿದೆ. ನಾಡಿನ ಕಲೆಯನ್ನು, ಕಲಾವಿದರನ್ನು ಉಳಿಸಿ – ಬೆಳೆಸುವಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ನಿರಂತರವಾಗಿರಲಿ ಎಂದರು. ಪಿಂಪ್ರಿ-ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಶುಭಹಾರೈಸಿದರು.
ಪ್ರಾರಂಭದಲ್ಲಿ ದೀಪ ಪ್ರಜ್ವಲಿಸಿ ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಿಂಪ್ರಿ-ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ, ಪಿಂಪ್ರಿ-ಚಿಂಚ್ವಾಡ್ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಮಾಜಿ ಅಧ್ಯಕ್ಷ ಶ್ಯಾಮ್ ಸುವರ್ಣ, ಪಿಂಪ್ರಿ-ಚಿಂಚ್ವಾಡ್ ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಕೋಟ್ಯಾನ್, ಶ್ರೀ ಅಯ್ಯಪ್ಪ ಸೇವಾ ಮಂಡಲದ ಅಧ್ಯಕ್ಷ ಆನಂದ್ ನಾಯಕ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಅಯ್ಯಪ್ಪ ಸೇವಾ ಮಂಡಲದ ವತಿಯಿಂದ ಪಟ್ಲ ಸತೀಶ್ ಶೆಟ್ಟಿ ಹಾಗೂ ರಾಕೇಶ್ ಶೆಟ್ಟಿ ಬೆಳ್ಳಾರೆ ಅವರನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ತ್ರಿರಂಗ ಸಂಗಮದ ಸಂಚಾಲಕರಾದ ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ ಹಾಗೂ ನವೀನ ಶೆಟ್ಟಿ ಇನ್ನ ಬಾಳಿಕೆ ಅವರು ಶ್ರೀ ಅಯ್ಯಪ್ಪ ಸೇವಾ ಮಂಡಲದ ಅಧ್ಯಕ್ಷ ಆನಂದ್ ನಾಯಕ್, ಪಿಂಪ್ರಿ-ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಜಯಾನಂದ್ ಶೆಟ್ಟಿ ಹಾಗೂ ಜೀವನ್ ಶೆಟ್ಟಿ ದೊಂಡೇರಂಗಡಿ ಅವರುಗಳನ್ನು ಶಾಲು ಹೊದೆಸಿ, ಸ್ಮರಣಿಕೆ ಹಾಗೂ ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಕರ್ನೂರು ಮೋಹನ್ ರೈಯವರು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ನೆಹರೂ ನಗರ ಅಯ್ಯಪ್ಪ ಸೇವಾ ಮಂಡಲದ ಕಾರ್ಯಕಾರಿ ಸಮಿತಿಗೆ ಹಾಗೂ ಸಹಕಾರ ನೀಡಿದ ಸರ್ವ ಕಲಾಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಶ್ರೀ ಅಯ್ಯಪ್ಪ ಸೇವಾ ಮಂಡಲದ ಅಧ್ಯಕ್ಷ ಆನಂದ್ ನಾಯಕ್, ಮಾಜಿ ಅಧ್ಯಕ್ಷ ಶ್ರೀಧರ ಶೆಟ್ಟಿ, ಜಯಾನಂದ್ ಶೆಟ್ಟಿ, ಗಣೇಶ್ ಅಂಚನ್, ಕಾರ್ಯದರ್ಶಿ ವಿಟ್ಠಲ್ ಪೂಜಾರಿ, ಕೋಶಾಧಿಕಾರಿ ಗೋಪಾಲ್ ಪೂಜಾರಿ, ಉಪಾಧ್ಯಕ್ಷ ಸಂಜೀವ್ ಮೂಲ್ಯ, ಸದಸ್ಯರಾದ ಶೇಖರ್ ಶೆಟ್ಟಿ, ಜಯಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರತಿಮಾ ಸುಧಾಕರ ಶೆಟ್ಟಿ ಹಾಗೂ ಸುಮನಾ ಶಶಿಧರ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ಜೀವನ್ ಶೆಟ್ಟಿ ದೊಂಡೇರಂಗಡಿ ನಿರೂಪಿಸಿ, ವಂದಿಸಿದರು.
ಕಳೆದ 27 ವರ್ಷಗಳಿಂದ ನಿರಂತರವಾಗಿ ನೆಹರೂ ನಗರ ಅಯ್ಯಪ್ಪ ಸೇವಾ ಮಂಡಲ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಮ್ಮೂರಿನ ಯಕ್ಷಗಾನ, ತಾಳಮದ್ದಳೆ, ನಾಟಕ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಎಲ್ಲರನ್ನೂ ಜಾತ್ಯತೀತವಾಗಿ ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ನಮ್ಮ ಧಾರ್ಮಿಕ ನಂಬಿಕೆಗಳು, ಕಲೆ, ಸಂಸ್ಕೃತಿಗಳನ್ನು ಉಳಿಸುವಲ್ಲಿ ನಾವೆಲ್ಲ ಒಗ್ಗೂಡಿ ಶ್ರಮಿಸಬೇಕಾಗಿದೆ. ಇಂದು ಸೇವಾಭಾವದೊಂದಿಗೆ ಯಕ್ಷಗಾನ ಪ್ರದರ್ಶನ ಆಯೋಜಿಸಿರುವುದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಮುಂದೆ ಮಂದಿರದ ಅಭಿವೃದ್ಧಿಗಾಗಿ ನಾವೆಲ್ಲರೂ ಕೈಜೋಡಿಸೋಣ.
–ರಾಕೇಶ್ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷ, ಬಂಟರ ಸಂಘ ಪಿಂಪ್ರಿ-ಚಿಂಚ್ವಾಡ್