Advertisement

ಯಕ್ಷಗಾನ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುವುದು ಶ್ಲಾಘನೀಯ: ಈಶ್ವರ ಭಟ್

12:09 PM Dec 19, 2018 | Team Udayavani |

ಮೂಡುಬಿದಿರೆ: ಕಲೆಯನ್ನು ಧರ್ಮ ಪ್ರಸಾರ ಸಾಧನವಾಗಿ ಮುನ್ನಡೆಸುತ್ತ ಬರುತ್ತಿರುವವರು ಯಕ್ಷಗಾನ ಕಲಾವಿದರು. ಅವರ ಸಂಕಷ್ಟಗಳಿಗೆ ಸ್ಪಂದಿಸುವ, ಸಾಧಕರನ್ನು ಗೌರವಿಸುವ ಸಹೃದಯತೆಯಿಂದ ಕೆಲಸ ಮಾಡುತ್ತಿರುವ ಪಟ್ಲ ಫೌಂಡೇಶನ್‌ ನಿಜಕ್ಕೂ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ, ಆಡಳಿತ ಮೊಕ್ತೇಸರ ವೇ|ಮೂ| ಈಶ್ವರ ಭಟ್‌ ಹೇಳಿದರು.

Advertisement

ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೋಮವಾರ ಜರಗಿದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ನ ಮೂಡುಬಿದಿರೆ ಘಟಕದ ತೃತೀಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮ್ಮಾನ
ಕಾರ್ಯಕ್ರಮದಲ್ಲಿ 94ರ ಹರೆಯದ ಭಾಗವತ ಕಲ್ಲಮುಂಡ್ಕೂರಿನ ಅನಂತರಾಮ ರಾವ್‌ ಅವರನ್ನು ಸಮ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ, ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಪಟ್ಲ ಫೌಂಡೇಶನ್‌ನ ಗುಜರಾತ್‌ ಘಟಕದ ಅಧ್ಯಕ್ಷ ಅಪ್ಪಣ್ಣ ಶೆಟ್ಟಿ ಭಾಗವಹಿಸಿದ್ದರು.

3.5 ಕೋಟಿ ರೂ. ವಿನಿಯೋಗ
ಪಟ್ಲ ಫೌಂಡೇಶನ್‌ನ ಕೇಂದ್ರ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಮಾತನಾಡಿ, ಸ್ಥಾಪನೆಯಾಗಿ ಮೂರು ವರ್ಷ ಕಳೆಯುವಷ್ಟರಲ್ಲೇ 33 ಕಡೆಗಳಲ್ಲಿ ಫೌಂಡೇಶನ್‌ ಘಟಕಗಳು ಸ್ಥಾಪನೆಯಾಗಿವೆ. ಮುಂದಿನ ಜೂನ್‌ನಲ್ಲಿ ಅಮೆರಿಕದಲ್ಲಿ ಘಟಕ ಸ್ಥಾಪನೆಯಾಗಲಿದೆ ಎಂದು ಹೇಳಿದರು.

ಈಗಾಗಲೇ ಮೂವರು ಅಶಕ್ತ ಕಲಾವಿದರಿಗೆ ಮನೆ ನಿರ್ಮಿಸಿಕೊಟ್ಟಿದ್ದು, 100 ಮನೆಗಳನ್ನು ನಿರ್ಮಿಸಲು ಸೂಕ್ತ ನಿವೇಶನಕ್ಕಾಗಿ ಶೋಧ ನಡೆದಿದೆ. ಕಲಾವಿದರ ಅಪಘಾತ ವಿಮಾ ಯೋಜನೆಯಡಿ ಆಸ್ಪತ್ರೆಗೆ ದಾಖಲಾದಲ್ಲಿ ಗರಿಷ್ಠ 3 ಲಕ್ಷ ರೂ., ಸಾವಿನ ಪ್ರಕರಣದಲ್ಲಿ 8 ಲಕ್ಷ ರೂ. ಲಭಿಸುವಂತಾಗಿದೆ ಎಂದು ವಿವರಿಸಿದರು.

Advertisement

ಶ್ರದ್ದಾಂಜಲಿ
ಇತ್ತೀಚೆಗೆ ನಿಧನ ಹೊಂದಿರುವ ಧರ್ಮಸ್ಥಳ ಮೇಳದ ಮದ್ದಳೆವಾದಕ ಅಡೂರು ಗಣೇಶ ರಾವ್‌ ಅವರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಮೂಡುಬಿದಿರೆ ಘಟಕದ ಕಾರ್ಯಾಧ್ಯಕ್ಷ ಮುರಳೀಧರ ಶೆಟ್ಟಿ ಎಡಪದವು ಸ್ವಾಗತಿಸಿದರು. ಪ್ರಧಾನ ಸಂಚಾಲಕ ಪ್ರೇಮನಾಥ ಮಾರ್ಲ ಅತಿಥಿಗಳನ್ನು ಗೌರವಿಸಿದರು. ಪ್ರಧಾನ ಸಂಚಾಲಕ ಎಂ. , ದೇವಾನಂದ ಭಟ್‌ ಪ್ರಸ್ತಾವನೆಗೈದರು.

ಪ್ರಮುಖರಾದ ಸುಬ್ರಹ್ಮಣ್ಯಭಟ್‌, ಪ್ರಸಾದ್‌ ಭಟ್‌, ಸುಭಾಶ್ಚಂದ್ರ ಚೌಟ, ಶಾಂತರಾಮ ಕುಡ್ವಾ, ನೀಲೇಶ್‌ ಶೆಟ್ಟಿ, ಜೋಕಿಂ ಕೊರೆಯ, ಸಿ. ಎಚ್‌. ಅಬ್ದುಲ್‌ ಗಪೂರ್‌ ಮೊದಲಾದವರಿದ್ದರು. ಉಪಾಧ್ಯಕ್ಷ ದಿವಾಕರ ಶೆಟ್ಟಿ ತೋಡಾರು ನಿರೂಪಿಸಿದರು. ಕಾರ್ಯದರ್ಶಿ ಮೇನಕಾ ಸದಾಶಿವ ರಾವ್‌ ವಂದಿಸಿದರು. ಮೊದಲಿಗೆ ಪ್ರಸಿದ್ದ ಕಲಾವಿದರಿಂದ ‘ಯಕ್ಷ- ಗಾನ ಸಂಭ್ರಮ’, ಸಭಾ ಕಾರ್ಯಕ್ರಮದ ಬಳಿಕ ಹನುಮಗಿರಿ ಮೇಳದವರಿಂದ ‘ಮಾಯಾ ವಿಹಾರಿ’ ಯಕ್ಷಗಾನ ಬಯಲಾಟ ಜರಗಿತು.

ಘಟಕ ಸ್ಥಾಪನೆಗೆ ಹಲವು ಮನವಿ
‘ಸಂಪತ್ತಿರುವುದು ದಾನಕ್ಕೆ, ಬಡತನವಿರುವುದು ಧ್ಯಾನಕ್ಕೆ’ ಯೋಜನೆಗೆ ಕಲಾಭಿಮಾನಿಗಳು ಖಂಡಿತ ಸ್ಪಂದಿಸುತ್ತಾರೆ ಎಂಬುದಕ್ಕೆ ಫೌಂಡೇಶನ್‌ ಸಾಕ್ಷಿಯಾಗಿದೆ. ಈಗಾಗಲೇ 33 ಘಟಕಗಳಿದ್ದು ನಾಸಿಕ್‌, ಶಿವಮೊಗ್ಗ, ಕೊಪ್ಪ, ತೀರ್ಥಹಳ್ಳಿ, ಪಾಣಾಜೆ, ನಿಡ್ಡೋಡಿ, ಉಡುಪಿ, ಕುಂದಾಪುರ ಸಹಿತ ಸುಮಾರು 15 ಕಡೆಗಳಲ್ಲಿ ಘಟಕ ಸ್ಥಾಪನೆಗೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರೂ ಬಿಡುವು ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
– ಪಟ್ಲ ಸತೀಶ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next