Advertisement

“ಪಾಟೀಲ್‌’ಮತ “ಶ್ರೀಮಂತ’

09:49 PM Dec 09, 2019 | Lakshmi GovindaRaj |

ಬೆಳಗಾವಿ: ನಿರ್ಣಾಯಕರಾಗಿದ್ದ ಲಿಂಗಾಯತ ಮತದಾರರಲ್ಲಿ ವಿಶ್ವಾಸ ಮೂಡಿಸಿ, ಸರ್ಕಾರ ಉಳಿಯಲು ನಿಮ್ಮ ಸಹಾಯ ನಮಗೆ ಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದು ಕಾಗವಾಡ ಕ್ಷೇತ್ರದಲ್ಲಿ ಶ್ರೀಮಂತ ಪಾಟೀಲಗೆ ಯಾರೂ ನಿರೀಕ್ಷೆ ಮಾಡಿರದಷ್ಟು ಭರ್ಜರಿ ಜಯದ ಸವಿ ನೀಡಿತು.

Advertisement

ಕಾಂಗ್ರೆಸ್‌ನಿಂದ ಜಿಗಿದು ಬಿಜೆಪಿ ಪಾಳೆಯ ಸೇರಿದ್ದ ಶ್ರೀಮಂತ ಪಾಟೀಲ ಚುನಾವಣೆ ಆರಂಭದಿಂದಲೂ ಜಯದ ಆತಂಕದಲ್ಲಿದ್ದರು. ಪ್ರಚಾರದ ಸಮಯದಲ್ಲಿ ಶ್ರೀಮಂತ ಪಾಟೀಲ ವಿರುದ್ಧ ಇದ್ದ ಅಲೆ ರಾಜು ಕಾಗೆಗೆ ಬಹಳ ಅನುಕೂಲ ಮಾಡಬೇಕಿತ್ತು. ಕಾಂಗ್ರೆಸ್‌ದಿಂದ ಗೆದ್ದು ಬಂದಿದ್ದ ಶ್ರೀಮಂತ ಪಾಟೀಲ ಸರಿಯಾಗಿ ಕಬ್ಬಿನ ಬಾಕಿ ಹಣ ಕೊಡದೆ ರೈತರ ಕೋಪಕ್ಕೆ ಗುರಿಯಾಗಿದ್ದರು. ಮೇಲಾಗಿ ಮರಾಠಾ ಸಮಾಜಕ್ಕೆ ಸೇರಿದ ಶ್ರೀಮಂತ ಪಾಟೀಲ ಮೂಲತಃ ಕರ್ನಾಟಕದವರಲ್ಲ.

ಅವರು ಇರುವುದೂ ಮಹಾರಾಷ್ಟ್ರದಲ್ಲಿ ಎಂಬ ಭಾವನೆ ಜನರಲ್ಲಿತ್ತು. ಈ ಎಲ್ಲ ಅಂಶಗಳು ಬಿಜೆಪಿಗೆ ಮುಳುವಾಗಬಹುದು ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಮುಖ್ಯಮಂತ್ರಿಗಳ ರಾಜಕೀಯದ ಆಟದ ಮುಂದೆ ಇದೆಲ್ಲವೂ ತೆರೆ ಹಿಂದೆ ಸರಿದವು. ಯಡಿಯೂರಪ್ಪ ಅವರ ಜೊತೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವ ಶ್ರೀಮಂತ ಪಾಟೀಲರಿಗೆ ಆನೆ ಬಲ ತಂದುಕೊಟ್ಟಿತು.

ತಮ್ಮ ಅಭ್ಯರ್ಥಿ ಗೆಲುವಿನ ಜವಾಬ್ದಾರಿ ಹೊತ್ತುಕೊಂಡಿದ್ದ ಸವದಿ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಗೆ ದ್ರೋಹ ಮಾಡಲಿಲ್ಲ. ಈ ಮೂಲಕ ಯಡಿಯೂರಪ್ಪ ಅವರಿಗೆ ಕೊಟ್ಟ ಮಾತನ್ನು ಸವದಿ ಉಳಿಸಿಕೊಂಡರು. ಇನ್ನೊಂದು ಕಡೆ ಲಿಂಗಾಯತ ಸಮಾಜದ ಪ್ರಬಲ ನಾಯಕ ಹಾಗೂ 4 ಬಾರಿ ಶಾಸಕರಾಗಿದ್ದ ರಾಜು ಕಾಗೆ ಆವರಿಗೆ ಟಿಕೆಟ್‌ ನೀಡಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್‌ ನಾಯಕರು ವಿಫಲರಾದರು.

ಆಂತರಿಕ ಮನಸ್ತಾಪ ಹಾಗೂ ಪ್ರಮುಖ ನಾಯಕರು ಪ್ರಚಾರದಿಂದ ದೂರ ಉಳಿದು ತಮ್ಮ ಅಭ್ಯರ್ಥಿ ಸೋಲಿಗೆ ಕಾರಣರಾದರು. ಇನ್ನೊಂದೆಡೆ ತಮಗೆ ಕಾಗವಾಡ ಟಿಕೆಟ್‌ ಕೊಡಲಿಲ್ಲ ಎಂಬ ಅಸಮಾಧಾನದಿಂದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸಹ ಪ್ರಚಾರದಿಂದ ಅಂತರ ಕಾಯ್ದುಕೊಂಡರು. ಜಿಲ್ಲೆಯ ನಾಯಕರೂ ಕಾಗೆ ನೆರವಿಗೆ ಬರಲಿಲ್ಲ. ಇದರಿಂದ ಬಿಜೆಪಿ ಬಿಟ್ಟು ತಪ್ಪು ಮಾಡಿದನೇ ಎಂಬ ವಿಚಾರ ರಾಜು ಕಾಗೆ ತಲೆಯಲ್ಲಿ ಸುಳಿದಾಡುತ್ತಿದೆ.

Advertisement

ಗೆದ್ದವರು
ಶ್ರೀಮಂತ ಪಾಟೀಲ(ಬಿಜೆಪಿ)
ಪಡೆದ ಮತ: 76,952
ಗೆಲುವಿನ ಅಂತರ‌: 18,557

ಸೋತವರು

ರಾಜು ಕಾಗೆ (ಕಾಂಗ್ರೆಸ್‌)
ಪಡೆದ ಮತ: 58,395

ಶ್ರೀಶೈಲತೂಗಶೆಟ್ಟಿ (ಜೆಡಿಎಸ್‌)
ಪಡೆದ ಮತ: 2448

ಗೆದ್ದದ್ದು ಹೇಗೆ?
-ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟ ಯಡಿಯೂರಪ್ಪ ಕ್ಷೇತ್ರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು.

-ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು.

ನಿರ್ಣಾಯಕ ಲಿಂಗಾಯತ ಮತ ಕಡೆ ಕ್ಷಣದಲ್ಲಿ ಬಿಜೆಪಿ ಪರವಾಗಿದ್ದು.

ಸೋತದ್ದು ಹೇಗೆ?
-ಅನರ್ಹ ಶಾಸಕ ಶ್ರೀಮಂತ ಪಾಟೀಲ ವಿರುದ್ಧ ಇದ್ದ ಅಲೆಯ ಸಂಪೂರ್ಣ ಲಾಭ ಪಡೆಯಲು ರಾಜು ಕಾಗೆ ವಿಫಲರಾಗಿದ್ದು.

-ಕಾಂಗ್ರೆಸ್‌ ಪಕ್ಷದೊಳಗಿನ ಮನಸ್ತಾಪ ಹಾಗೂ ಸ್ಥಳೀಯ ನಾಯಕರಲ್ಲಿ ಭಿನ್ನಮತ ಸೃಷ್ಟಿಸಿದ್ದು.

-ಸಿದ್ದರಾಮಯ್ಯ ಬಿಟ್ಟರೆ ಬೇರೆ ರಾಜ್ಯ ನಾಯಕರು ಪ್ರಚಾರಕ್ಕೆ ಕ್ಷೇತ್ರಕ್ಕೆ ಬಾರದೇ ಹೋಗಿದ್ದು ಉಪಚುನಾವಣೆಯಲ್ಲಿ ಸೋಲಲು ಕಾರಣವಾಗಿದೆ.

ಪಕ್ಷ ಬದಲಿಸಿದರೂ ಮತದಾರರು ನಮ್ಮ ಕೈ ಬಿಡಲಿಲ್ಲ. ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದು ಅವರ ಸೇವೆಗೆ ನಮ್ಮ ತಂದೆ ಮುಂದಾಗಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ.
-ಶ್ರೀನಿವಾಸ ಪಾಟೀಲ, ಶ್ರೀಮಂತ ಪಾಟೀಲ ಪುತ್ರ

ನಾನು, ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಬೇಸರವಾಗಿದೆ. ಈ ಸ್ಥಿತಿಯಲ್ಲಿ ತನಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಸೋಲನ್ನು ಸ್ವೀಕರಿಸಿದ್ದೇನೆ.
-ರಾಜು ಕಾಗೆ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next