ರಾಯಚೂರು: ಜಿಲ್ಲೆಯನ್ನು ಕಡೆಗಣಿಸಿದ ಸರ್ಕಾರದ ವಿರುದ್ಧ ಆವೇಶದಲ್ಲಿ ನೀಡಿದ್ದ ಹೇಳಿಕೆಯನ್ನೇ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ತೆಲಂಗಾಣ ರಾಷ್ಟ್ರ ಸಮಿತಿ ನಾಯಕರಿಗೆ ಬಿಜೆಪಿ ಶಾಸಕ ಡಾ| ಶಿವರಾಜ್ ಪಾಟೀಲ್ ಅವರ ಭಾಷೆಯಲ್ಲೆ ಉತ್ತರ ನೀಡಿದ್ದಾರೆ.
ತೆಲುಗಿನಲ್ಲಿ ವಿಡಿಯೊ ಮಾಡಿ ವಿನಾಕಾರಣ ತಮ್ಮ ಹೇಳಿಕೆಯನ್ನು ತಿರುಚಿ ರಾಜಕೀಯಕ್ಕೆ ಬಳಸಿಕೊಳ್ಳದಂತೆ ಎಚ್ಚರಿಸಿದ್ದಾರೆ. ಕಳೆದ ವರ್ಷ ನಗರಕ್ಕೆ ಆಗಮಿಸಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಕಾರ್ಯಕ್ರಮದಲ್ಲಿ ಶಾಸಕ ಶಿವರಾಜ್ ಪಾಟೀಲ್ ಮಾತನಾಡುವ ಭರದಲ್ಲಿ ಸರ್ಕಾರದ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
ಭಾಗವನ್ನು ಸರ್ಕಾರ ಕಡೆಗಣಿಸುತ್ತಿದೆ. ಸರಿಯಾದ ಸೌಲಭ್ಯ, ಅನುದಾನ ಕೊಡದಿದ್ದರೆ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕ ಆಡಿದ ಮಾತನ್ನು ಬೇರೆ ರೀತಿಯಲ್ಲಿ ಬಿಂಬಿಸಿ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವಂತೆ ಶಾಸಕರೇ ಹೇಳಿದ್ದಾರೆ ಎಂದು ಸುದ್ದಿ ಹಬ್ಬಿಸಲಾಯಿತು. ಶಾಸಕರು ಮಾತನಾಡಿದ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿತ್ತು. ಈ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಿದ್ದ ಶಾಸಕ ಶಿವರಾಜ್ ಪಾಟೀಲ್, “ನಾನು ಆವೇಶದಲ್ಲಿ ಸರ್ಕಾರದ ಮೇಲಿನ ಅಸಮಾಧಾನದಿಂದ ಈ ಮಾತನಾಡಿದ್ದು, ದಯವಿಟ್ಟು ಕ್ಷಮಿಸಿ’ ಎಂದು ಸ್ಪಷ್ಟಿಕರಣ ಕೂಡ ನೀಡಿದ್ದರು.
ಮಳೆ ನಿಂತರೂ ಮರದ ಹನಿ ನಿಲ್ಲಿಲಿಲ್ಲ ಎನ್ನುವಂತೆ ಶಾಸಕರ ಈ ಹೇಳಿಕೆಯನ್ನು ಟಿಆರ್ ಎಸ್ ನಾಯಕರು ಇಂದಿಗೂ ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ಅಲ್ಲಿನ ಬಿಜೆಪಿ ನಾಯಕರನ್ನು ಕೆಣಕುತ್ತಿದ್ದಾರೆ.
ತೆಲುಗಿನಲ್ಲೇ ಉತ್ತರ!: ಟಿಆರ್‌ಎಸ್ ಮುಖಂಡ ಹಾಗೂ ಸಿಎಂ ಪುತ್ರ ಕೆ.ಟಿ. ರಾಮರಾವ್ ತಮ್ಮ ಸದನದಲ್ಲಿ, ಪ್ರಚಾರ ಸಭೆಗಳಲ್ಲಿ ಈ ವಿಚಾರ ಒತ್ತಿ ಒತ್ತಿ ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. “ನಮ್ಮ ಟಿಆರ್‌ಎಸ್ ಆಡಳಿತ ಕಂಡು ಬಿಜೆಪಿಯ ಶಾಸಕರೇ ಮರುಳಾಗಿದ್ದಾರೆ. ಕರ್ನಾಟಕದ ತಮ್ಮ ಕ್ಷೇತ್ರವನ್ನು ತೆಲಂಗಾಣಕ್ಕೆ ಸೇರಿಸಲು ಉತ್ಸುಕರಾಗಿದ್ದಾರೆ. ಅಲ್ಲಿನ ಬಿಜೆಪಿ ಕಿಂಚಿತ್ತೂ ಅಭಿವೃದ್ಧಿ ಮಾಡಿಲ್ಲ. ರೈತರಿಗೆ ವಿದ್ಯುತ್ ಕೊಡುತ್ತಿಲ್ಲ. ಸರಿಯಾದ ರಸ್ತೆಗಳಿಲ್ಲ. ಬಡವರಿಗೆ ಸೌಲಭ್ಯ ನೀಡುತ್ತಿಲ್ಲ. ನಮಗೆ ಸಾಕಾಗಿದೆ, ತೆಲಂಗಾಣಕ್ಕೆ ಸೇರಿಸಿಬಿಡಿ ಎಂದು ಗೋಗರೆಯುತ್ತಿದ್ದಾರೆ’ ಎಂದೆಲ್ಲ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಈ ಹೇಳಿಕೆ ಕೇಳಿ ಕೇಳಿ ಬೇಸತ್ತಿದ್ದ ಶಾಸಕ ಪಾಟೀಲ್ ಕೊನೆಗೆ ಕನ್ನಡದಲ್ಲಿ ಉತ್ತರ ನೀಡದೇ ಆ ನಾಯಕರಿಗೆ ಅರ್ಥವಾಗುವ ಹಾಗೆ ತೆಲುಗಿನಲ್ಲೇ ವಿಡಿಯೋ ಮಾಡಿ ಉತ್ತರ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಶಾಕಸರು ಮಾಡಿರುವ ವಿಡಿಯೊದಲ್ಲಿ “ನಾನು ಆವೇಷದಲ್ಲಿ ಹೇಳಿದ್ದ ಒಂದು ಮಾತನ್ನು ನೀವು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಬಿಡಿ. ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ಮಾಡಿದಷ್ಟು ನೀವು ಮಾಡಲು ಸಾಧ್ಯವಿಲ್ಲ. ಮೊದಲು ನಿಮ್ಮ ರಾಜ್ಯವನ್ನು ಅಭಿವೃದ್ಧಿ ಮಾಡಿಕೊಳ್ಳಿ. ತೆಲಂಗಾಣದ ಮೆಹಬೂಬ್ ನಗರ ರಾಯಚೂರು ಪಕ್ಕದಲ್ಲೇ ಇದ್ದು, ಎಷ್ಟು ಅಭಿವೃದ್ಧಿಯಾಗಿದೆ ಎಂದು ಒಮ್ಮೆ ನೋಡಿಕೊಳ್ಳಿ. ನಮ್ಮಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಐದು ಸಾವಿರ ಕೋಟಿ ಅನುದಾನ ತಂದು ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನನ್ನ ಹೇಳಿಕೆಯನ್ನೇ ಬಳಸಿಕೊಂಡು ಬಿಟ್ಟಿ ಪ್ರಚಾರ ಪಡೆಯುವುದು ಬಿಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಲಾಭ ಪಡೆಯಲು ಕಾಂಗ್ರೆಸ್ ಯತ್ನ
ಪ್ರತಿಪಕ್ಷ ಕಾಂಗ್ರೆಸ್ ಈ ಅವಕಾಶವನ್ನು ಬಳಸಿಕೊಂಡು ಶಾಸಕರ ವಿರುದ್ಧ ವಾಗ್ಧಾಳಿ ನಡೆಸುತ್ತಿದೆ. ಟಿಆರ್ ಎಸ್ ನಾಯಕರ ಹೇಳಿಕೆಗಳನ್ನು ತಮ್ಮ ಸುದ್ದಿಗೋಷ್ಠಿಯಲ್ಲಿ ಬಳಸಿಕೊಳ್ಳುವುದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿವರಾಜ್ ಪಾಟೀಲ್ ವರ್ಚಸ್ಸು ಕುಗ್ಗಿಸುವ ಯತ್ನದಲ್ಲಿದೆ. ಈ ಎಲ್ಲ ಬೆಳವಣಿಗೆ ಗಮನಿಸಿ ಶಾಸಕರು ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.
-ಸಿದ್ಧಯ್ಯಸ್ವಾಮಿ ಕುಕನೂರು