Advertisement

ಕಳಪೆ ಕಾಮಗಾರಿ-ತನಿಖೆಗೆ ಪಾಟೀಲ ಆಗ್ರಹ

12:52 PM Jan 10, 2022 | Team Udayavani |

ಚಿಂಚೋಳಿ: ಪಟ್ಟಣದ ಸರ್ಕಾರಿ ಬೀಜೋತ್ಪಾದನಾ ಕೇಂದ್ರದಲ್ಲಿ ನಿರ್ಮಿಸಲಾಗುತ್ತಿರುವ ತಾಲೂಕು ಆಡಳಿತ ಕಟ್ಟಡ ಕಾಮಗಾರಿ ಅತ್ಯಂತ ಕಳಪೆಮಟ್ಟದಿಂದ ನಡೆಯುತ್ತಿದ್ದು, ತಾಂತ್ರಿಕ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಬೇಕೆಂದು ಕಾಂಗ್ರೆಸ್‌ ಪಕ್ಷದ ವಕ್ತಾರ, ನ್ಯಾಯವಾದಿ ಶರಣು ಪಾಟೀಲ ಆಗ್ರಹಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಇಲಾಖೆಗೆ ಒಳಪಟ್ಟ ಬೀಜೋತ್ಪಾದನಾ ಕೇಂದ್ರಕ್ಕೆ ಸೇರಿದ 10 ಎಕರೆ ಜಮೀನಿನಲ್ಲಿ ತಾಲೂಕು ಆಡಳಿತ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ 2017-18ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ 10 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಬಿಳಿ, ಕೆಂಪು ಮಿಶ್ರಿತ ಉಸುಕು ಬಳಸಿಕೊಳ್ಳಲಾಗುತ್ತಿದೆ. ಸಿಮೆಂಟ್‌ ಬಳಕೆ ಸರಿಯಾಗಿ ಮಾಡುತ್ತಿಲ್ಲ. ಕಬ್ಬಿಣದ ರಾಡು, ಸಿಮೆಂಟ್‌ ಗುಣಮಟ್ಟ ಸರಿಯಿಲ್ಲ ಎಂದು ದೂರಿದರು.

ತಾಲೂಕು ಆಡಳಿತ ಕಟ್ಟಡ ಕಾಮಗಾರಿಯನ್ನು ಕರ್ನಾಟಕ ಹೌಸಿಂಗ್‌ ಮಂಡಳಿಗೆ ವಹಿಸಲಾಗಿದೆ. ಕೆಲಸ ನೋಡಿಕೊಳ್ಳಲು ಯಾವುದೇ ಇಂಜಿನಿಯರ್‌ ಇಲ್ಲ. ಗುತ್ತಿಗೆದಾರನದ್ದೇ ಅಂತಿಮ ತೀರ್ಮಾನವಾಗಿದೆ. ಬಾಳಿಕೆ ಬಾರದಂತ ಕಿಟಕಿ, ಬಾಗಿಲು ಅಳವಡಿಸಲಾಗಿದೆ. ಕಟ್ಟಡದ ಕಾಮಗಾರಿಯಲ್ಲಿ ಗೋಡೆ ಪ್ಲಾಸ್ಟರ್‌ ಸರಿಯಾಗಿ ಆಗಿಲ್ಲ. ಕ್ಯೂರಿಂಗ್‌ ಸರಿಯಾಗಿ ಆಗದ ಕಾರಣ ಎಲ್ಲವೂ ಉದುರಿದೆ ಎಂದು ಹೇಳಿದರು.

ಕರ್ನಾಟಕ ಹೌಸಿಂಗ್‌ ಬೋರ್ಡ್‌ ಮೇಲ್ವಿಚಾರಣೆಯಲ್ಲಿ ತಾಲೂಕಿನ ಅಣವಾರ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಮಕ್ಕಳ ವಸತಿ ಶಾಲೆ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡವು ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ. ಆದ್ದರಿಂದ ಈ ಕಟ್ಟಡಗಳ ಕಾಮಗಾರಿಯನ್ನು ತಾಂತ್ರಿಕ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next