ವಿಜಯಪುರ: ವಿಜಯಪುರ ಜಿಲ್ಲೆ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಬೇಕಿದ್ದರೆ ಪ್ರಾಥಮಿಕ ಹಂತದಲ್ಲೇ ಅಗತ್ಯ ಸೌಕರ್ಯ ಸಹಿತ ಗುಣಮಟ್ಟದ ಶಿಕ್ಷಣ ಕೊಡಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ
ಡಾ| ಎಂ.ಬಿ. ಪಾಟೀಲ ಸೂಚಿಸಿದರು.
ಜಿಲ್ಲಾಡಳಿತ, ಜಿಪಂ ಸಾರ್ವಜನಿಕ ಹಾಗೂ ಪಪೂ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ 2017-18ನೇ ಸಾಲಿನ ಎಸ್ಸೆಸ್ಸೆಲ್ಸಿ. ಮತ್ತು ಪಿಯುಸಿ ಫಲಿತಾಂಶ ಸುಧಾರಣೆ, ಪ್ರೌಢಶಾಲೆ, ಪಪೂ ಕಾಲೇಜ್‌ಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ಅಳವಡಿಕೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಜನ್ಮತಃ ಯಾವುದೇ ಮಗು ಬುದ್ಧಿವಂತ ಅಥವಾ ದಡ್ಡನೂ ಆಗಿರುವುದಿಲ್ಲ. ಅವರವರ ಪರಿಸರ,
ಕೌಟುಂಬಿಕ ಸ್ಥಿತಿ, ಸಾಮಾಜಿಕ ವ್ಯವಸ್ಥೆ ಅವರ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಒಂದನೇ ತರಗತಿಯಿಂದಲೇ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದಲ್ಲಿ ಪ್ರತಿ ಮಗುವಿನ ಶೈಕ್ಷಣಿಕ ಭವಿಷ್ಯಕ್ಕೆ ಭದ್ರ ಬುನಾದಿ ಆಗಲಿದೆ. ಅದುವೇ ಜಿಲ್ಲೆಯ ಎಸ್ಸೆಸ್ಸೆಲ್ಸಿ-ಪಿಯು ಫಲಿತಾಂಶದಲ್ಲಿ ರಾಜ್ಯದಲ್ಲೇ ವಿಜಯಪುರ ಜಿಲ್ಲೆ ವಿಶೇಷ ಸ್ಥಾನ ಪಡೆಯಲು ಸಾಧ್ಯವಿದೆ ಎಂದರು.
ಜಿಲ್ಲೆಯು ಕಳೆದ ಮೂರು ವರ್ಷಗಳಿಗಿಂತ ಈ ವರ್ಷ ರ್‍ಯಾಂಕ್ ಪಟ್ಟಿಯಲ್ಲಿ 20ನೇ ಸ್ಥಾನ ಪಡೆದಿದೆ. ಆದರೆ ಟಾಪ್ 10ರಲ್ಲಿ ಸ್ಥಾನ ಪಡೆಯುವ ಅರ್ಹತೆ ತಂದುಕೊಳ್ಳಬೇಕು. ಇದಕ್ಕಾಗಿ ಶಿಕ್ಷಕರು ಶಿಕ್ಷಣಲ್ಲಿ ಆಧುನಿಕ ತಂತ್ರಜ್ಞಾನ, ಹೊಸ ತರಬೇತಿ ವಿಧಾನ ಅಳವಡಿಸಿಕೊಳ್ಳಬೇಕು. ನಿಯಮಿತವಾಗಿ ಯೂನಿಟ್ ಟೆಸ್ಟ್ ನಡೆಸಿ ಮಕ್ಕಳಿಗೆ ಪರೀಕ್ಷಾ ಭಯ ಹೋಗಲಾಡಿಸುವ ಜೊತೆಗೆ ಓದುವ ಆಸಕ್ತಿ ಮೂಡಿಸಬೇಕು ಎಂದರು. ನಿಗದಿತ ಸಮಯಕ್ಕೆ ಸರಿಯಾಗಿ ಪಠ್ಯಕ್ರಮ ಮುಗಿಸಿ, ಅದಕ್ಕೆ ತಕ್ಕಂತೆ ಮಕ್ಕಳಿಗೆ ಪರೀಕ್ಷೆ ಆಯೋಜಿಸಬೇಕು. ನ್ಯೂನ್ಯತೆ ಕಂಡುಬಂದಲ್ಲಿ ಶಿಕ್ಷಣದಲ್ಲಿ ಹಿಂದೆ ಉಳಿಯುವ ಮಕ್ಕಳಿಗೆ ಒತ್ತು ನೀಡಲು ನೆರವಾಗುತ್ತದೆ ಎಂದರು.
ಖಾಸಗಿ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುವ ಮಾದರಿಯಲ್ಲೇ ಸರ್ಕಾರಿ ಶಾಲೆಗಳಲ್ಲೂ ಶೈಕ್ಷಣಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ವಿಷಯ ಪರಿಣಿತರನ್ನು ಕರೆಸಿ ವಿಶೇಷ ಉಪನ್ಯಾಸ ಕೊಡಿಸಬೇಕು. ಅಗತ್ಯವಿದ್ದರೆ ಶಿಕ್ಷಕರಿಗೆ ವಿಶ್ವವಿದ್ಯಾಲಯಗಳ ವಿಷಯ ಪರಿಣಿತ ಪ್ರಾಧ್ಯಾಪಕರಿಂದ ತರಬೇತಿ ಕೊಡಿಸಿ ಶಿಕ್ಷಕರ ಮೌಲ್ಯಮಾಪನ ಮಾಡಿಸಬೇಕು. ಗ್ರಾಮೀಣ ಮಕ್ಕಳು ಶಾಲೆಗೆ ತೊರೆಯದಂತೆ ಪಾಲಕರ ಮನವೊಲಿಸುವ, ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು, ಸರ್ಕಾರಿ ಶಾಲೆಗಳ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬಂತೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ| ಕೃಪಾ ಆಳ್ವಾ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸದಿದ್ದರೆ ಮಕ್ಕಳಿಗೆ ಮಾಡುವ ವಂಚನೆ. ಪ್ರತಿ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹದಂಥ ಸಮಸ್ಯೆಗಳಿಂದ ಮುಕ್ತಗೊಳಿಸುವ ಕೆಲಸ ಮಾಡಬೇಕು ಎಂದರು.
ಶಿಕ್ಷಣ ಇಲಾಖೆ ನಮ್ಮ ಆಯೊಗದ ಜೊತೆ ಕೈ ಜೋಡಿಸಿದರೆ ವಿದ್ಯಾವಂತ ಮಕ್ಕಳಿಂದ ಸದೃಢ ಸಮಾಜ ನಿರ್ಮಿಸಬಹುದು. ಶಿಕ್ಷಣ ವಂಚಿತ ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯ ನಡೆಯಲಿದ್ದು, ಪ್ರಶ್ನಿಸುವ ತಿಳಿವಳಿಕೆ, ಧೈರ್ಯವೂ ಇರುವುದಿಲ್ಲ. ಶಿಕ್ಷಣ ಮಾತ್ರ ಮಕ್ಕಳಿಗೆ ಆತ್ಮವಿಶ್ವಾಸ ತುಂಬುತ್ತದೆ ಎಂದರು.