Advertisement
ವಿಕ್ಟೋರಿಯಾ ಸಮುಚ್ಛಯದ ನಿವಾಸಿ ವೈದ್ಯ ಸಂಘದ ಬೆಂಬಲದ ಜತೆಗೆ ಶನಿವಾರ ಬೆಳಗ್ಗೆ ಮಿಂಟೋ ಆಸ್ಪತ್ರೆಯಿಂದ ಬೆಂಗಳೂರು ಮೆಡಿಕಲ್ ಕಾಲೇಜುವರೆಗೆ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿ ನಡೆಸಿದರು. ಮಿಂಟೋ, ವಿಕ್ಟೋರಿಯಾ, ವಾಣಿ ವಿಲಾಸ ಆಸ್ಪತ್ರೆಗಳ ಹೊರರೋಗಿಗಳ ಘಟಕವನ್ನು ಬಂದ್ ಮಾಡಿ ಕರವೇ ವಿರುದ್ಧ ಘೋಷಣೆ ಕೂಗಿದರು.
Related Articles
Advertisement
ಅನುಮತಿ ನೀಡಿಲ್ಲ: ರೋಗಿಗಳ ಪರದಾಟ ಕುರಿತು ಆಸ್ಪತ್ರೆ ಮುಖ್ಯಸ್ಥರನ್ನು ಪ್ರಶ್ನಿಸಿದರೆ ಒಪಿಡಿ ಬಂದ್ ಮಾಡಲು ಅನುಮತಿ ನೀಡಿಲ್ಲ. ಒಪಿಡಿ ಘಟಕ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳುತ್ತಾರೆ. ಇನ್ನೊಂದೆಡೆ ಸ್ನಾತಕೋತ್ತರ ವಿದ್ಯಾರ್ಥಿಗಳು ಕ್ಷಮೆ ಕೇಳುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರಕ್ಷಣೆ ಸಿಗುವ ತನಕ ಕರ್ತವ್ಯಕ್ಕೆ ಹಾಜರಾಗದಿರಲು ತೀರ್ಮಾನಿಸಿದ್ದು, ಭಾನುವಾರವೂ ಕೂಡಾ ಪ್ರತಿಭಟನೆ ಮುಂದುವರೆಯುವ ಸಾಧ್ಯತೆಗಳಿವೆ.
ಪ್ರಕರಣ ದಾಖಲು: ಘಟನೆ ಕುರಿತು ಕರವೇ ಕಾರ್ಯಕರ್ತರ ವಿರುದ್ಧ ವಿವಿ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಡಾ.ಸತೀಶ್ ಅವರು ದೂರು ದಾಖಲಿಸಿದ್ದಾರೆ. 30-35 ಕರವೇ ಕಾರ್ಯಕರ್ತರು ಮಿಂಟೋ ಆವರಣಕ್ಕೆ ಬಂದು ವೈದ್ಯರ ಜತೆಗೆ ಅನುಚಿತ ವರ್ತನೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಹಲ್ಲೆ ನೆಪದಲ್ಲಿ ಪ್ರಕರಣ ತಿರುಚುವ ಯತ್ನ: ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಕರವೇ ಮಹಿಳಾ ಘಟಕದ ಉಪಾಧ್ಯಕ್ಷೆ ಅಶ್ವಿನಿ ಗೌಡ, ಕಿರಿಯ ವೈದ್ಯರ ಮೇಲೆ ನಾವು ಹಲ್ಲೆ ಮಾಡಿಲ್ಲ. ಕಣ್ಣು ಕಳೆದುಕೊಂಡವರಿಗೆ ನ್ಯಾಯ ಕೇಳಲು ಹೋದಾಗ ಕನ್ನಡ ಭಾಷೆ ಬಗ್ಗೆ ವೈದ್ಯೆ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಕನ್ನಡ ಭಾಷೆ ಗೊತ್ತಿದ್ದರೂ ಏಕೆ ಉಡಾಫೆ ಅಂತ ಪ್ರಶ್ನಿಸಿದಾಗ, “ನನ್ನ ಇಷ್ಟ’ ಎಂದು ಉತ್ತರ ನೀಡಿದರು. ಆ ವೇಳೆ ಸೌಜನ್ಯದಿಂದಲೇ ಕನ್ನಡದಲ್ಲಿ ಮಾತನಾಡಿ ಅಂತ ಹೇಳಿದ್ದು, ಯಾವುದೇ ಹಲ್ಲೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಮಿಂಟೋ ಆಸ್ಪತ್ರೆ ವೈದ್ಯರು ತಮ್ಮ ನಿರ್ಲಕ್ಷ್ಯದಿಂದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ 22 ಮಂದಿ ಬಡ ಹಾಗೂ ವಯಸ್ಸಾದವರಿಗೆ ಕಣ್ಣು ಕಳೆದಿದ್ದಾರೆ. ನಾಲ್ಕು ತಿಂಗಳಾದರೂ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ. ಇಂದಿಗೂ ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಇನ್ನು ಮಿಂಟೋ ವೈದ್ಯರು ಸುಳ್ಳು ಆರೋಪ ಮಾಡಿ, ಹಲ್ಲೆ ನೆಪದಲ್ಲಿ ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಕಣ್ಣು ಕಳೆದುಕೊಂಡವರಿಗಾಗಿ ನಮ್ಮ ನಾಯ್ಯಯುತ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.