Advertisement

ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲವೆಂದು ಸೋಂಕಿತರ ಪ್ರತಿಭಟನೆ

09:51 PM May 13, 2021 | Team Udayavani |

ಚಾಮರಾಜನಗರ: ನಗರದ ಎಡಬೆಟ್ಟದ ಬಳಿಯಿರುವ ಸರ್ಕಾರಿ ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲವೆಂದು ಸೋಂಕಿತರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.

Advertisement

ಈ ಕೋವಿಡ್ ಕೇರ್ ಸೆಂಟರ್ ಆರಂಭವಾಗಿ ಒಂದು ವಾರವಾಗಿದ್ದು, ರೋಗಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಸೋಂಕಿತರು ಗುರುವಾರ ಕೇರ್ ಸೆಂಟರ್‌ನ ಹಾಲ್‌ನಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸೋಂಕಿತರೊಬ್ಬರು ಮಾತನಾಡಿ, ಕಳೆದ 8 ದಿನಗಳಿಂದ ಈ ಕೋವಿಡ್ ಕೇರ್ ಕೇಂದ್ರದಲ್ಲಿದ್ದೇನೆ. ಪ್ರತಿ ದಿನ ರೋಗಿಗಳಿಗೆ ಆಹಾರದ ಕೊರತೆಯಾಗುತ್ತಿದೆ. ಇವತ್ತು ಬೆಳಿಗ್ಗೆ 20 ಜನರಿಗೆ ತಿಂಡಿ ಸಿಗಲಿಲ್ಲ. ನಿನ್ನೆ ರಾತ್ರಿ ಸಹ ಊಟದ ಕೊರತೆಯಾಯಿತು. ಮೊಟ್ಟೆಯನ್ನು 50 ಜನರಿಗೆ ಮಾತ್ರ ನೀಡಲಾಗುತ್ತದೆ. ಇದು ಊರಿನಿಂದ ದೂರದಲ್ಲಿದ್ದು,

ಮನೆಯವರಿಂದಲೂ ತಿಂಡಿ ಊಟ ತರಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಬಂದಿದ್ದೇವೆ. ಅಷ್ಟು ದೂರದಿಂದ ಮನೆಯವರು ಬಂದು ತಿಂಡಿ ಊಟ ಕೊಡಲು ಸಾಧ್ಯವಿಲ್ಲ. ಇಲ್ಲಿ ದಾಖಲು ಮಾಡಿಕೊಂಡ ಮೇಲೆ ನಮಗೆ ತಿಂಡಿ ಊಟವನ್ನು ಸರಿಯಾಗಿ ಒದಗಿಸುವುದು ಆರೋಗ್ಯ ಇಲಾಖೆಯ ಕರ್ತವ್ಯ ಎಂದರು.

ನಮ್ಮನ್ನು ಯಾವಾಗಲೋ ಒಮ್ಮೆ ವೈದ್ಯರು, ನರ್ಸ್ ನೋಡುತ್ತಾರೆ. ರಾತ್ರಿ 12 ಗಂಟೆ ಮೇಲೆ ಯಾರೂ ಇರುವುದಿಲ್ಲ. ಆ ಸಮಯದಲ್ಲಿ ಏನಾದರೂ ತೊಂದರೆಯಾದರೆ ಕೇಳಲು ಸಹ ಯಾರೂ ಇರುವುದಿಲ್ಲ.

Advertisement

ಇದನ್ನೂ ಓದಿ :ಪತಿ – ಮಗನಿಗೆ ಕೋವಿಡ್ ಪಾಸಿಟಿವ್ : ಮನನೊಂದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಊಟ ತಿಂಡಿ ಮಾತಿರಲಿ, ರೋಗಿಗಳಿಗೆ ಸರಿಯಾಗಿ ಮಾತ್ರೆಗಳನ್ನೂ ನೀಡುತ್ತಿಲ್ಲ. ಕೇಳಿದರೆ ಸ್ಟಾಕ್ ಇಲ್ಲ. ನಾಳೆ ಬರುತ್ತದೆ, ನಾಡಿದ್ದು ಬರುತ್ತದೆ ಎನ್ನುತ್ತಾರೆ. ಹೀಗಾದರೆ ನಮ್ಮ ಕಾಯಿಲೆ ಗುಣವಾಗುವುದು ಹೇಗೆ ಎಂದು ಒಬ್ಬ ರೋಗಿ ಪ್ರಶ್ನಿಸಿದರು.

ಪ್ರತಿಭಟನೆಯ ವಿಷಯ ತಿಳಿದು ಮೆಡಿಕಲ್ ಕಾಲೇಜು ಡೀನ್ ಡಾ. ಸಂಜೀವ್ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದರು. ಆಗ ರೋಗಿಗಳು ಅವರನ್ನು ತರಾಟೆಗೆ ತೆಗೆದುಕೊಂಡರು. ವಿಷಯ ತಿಳಿದು ಮಾಧ್ಯಮದವರು ಕೋವಿಡ್ ಕೇರ್ ಸೆಂಟರ್‌ಗೆ ತೆರಳುತ್ತಿದ್ದಂತೆಯೇ ಡೀನ್ ಕಾರು ಹತ್ತಿ ಹೊರಟುಹೋದರು.

ಮನೆಯಲ್ಲೇ ಸಾಯಬಾರದಾ ಎಂದ ಎಸ್ ಐ, ಕಣ್ಣೀರು ಹಾಕಿದ ಸೋಂಕಿತೆ
ಚಾಮರಾಜನಗರ: ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಸೋಂಕಿತ ಮಹಿಳೆಯೊಬ್ಬರ ಬಳಿ ಬಂದು ಹೀಗೆಲ್ಲ ಯಾಕೆ ಮಾಡ್ತೀರಿ ಎಂದು ದಬಾಯಿಸಿದರು. ಆಗ ಮಹಿಳೆ ನಾನು ಮತ್ತು ನನ್ನ ಇಬ್ಬರು ಮಕ್ಕಳು ಇಲ್ಲಿ ಅಡ್ಮಿಟ್ ಆಗಿದ್ದೇವೆ. ನಮಗೆ ಎರಡು ದಿನಗಳಿಂದ ಮಾತ್ರೆ ಕೊಟ್ಟಿಲ್ಲ. ಮಾಸ್ಕ್, ಸ್ಯಾನಿಟೈಸರ್ ನೀಡಿಲ್ಲ ಎಂದು ಅಳಲು ತೋಡಿಕೊಂಡರು. ಅದಕ್ಕೆ ಆ ಸಬ್‌ಇನ್‌ಸ್ಪೆಕ್ಟರ್, ಇಲ್ಲಿಗೇಕೆ ಬಂದೆ? ಮನೆಯಲ್ಲೇ ಸಾಯಬಾರದಾ ? ಎಂದು ಆ ಎಸ್‌ಐ ಬೈದರು ಎಂದು ಮಾಧ್ಯಮದವರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next