ಬೆಂಗಳೂರು: ದೇಶದ ಪ್ರತಿಯೊಬ್ಬ ವ್ಯಕ್ತಿಗೆ ವಿಶೇಷ ಗುರುತಿನ ಸಂಖ್ಯೆ ಇರುವಂತೆಯೇ ಈಗ ಪ್ರತಿಯೊಬ್ಬ ರೋಗಿಗಳಿಗಾಗಿಯೇ ವಿಶೇಷ ಗುರುತಿನ ಸಂಖ್ಯೆ ಬರಲಿದೆ. ಆ ಸಂಖ್ಯೆಯಿಂದ ರೋಗಿಯ ಎಲ್ಲ ಪ್ರಕಾರದ ವೈದ್ಯಕೀಯ ದಾಖಲೆಗಳು ಮತ್ತು ಸ್ಕ್ಯಾನ್ ಇಮೇಜ್‌ಗಳು ಬೆರಳ ತುದಿಯಲ್ಲೇ ಲಭ್ಯವಾಗಲಿವೆ!.
ಇಂಥದ್ದೊಂದು ಪ್ರಯತ್ನಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಣಿಪಾಲ್ ಆಸ್ಪತ್ರೆ ಮತ್ತು ಫ್ಯೂಜಿಫಿಲ್ಮ್ ಮುಂದಾಗಿವೆ. ಈ ಸಂಬಂಧ ಎರಡೂ ಪ್ರತಿಷ್ಠಿತ ಸಂಸ್ಥೆಗಳು ದೀರ್ಘಾವಧಿ ಒಡಂಬಡಿಕೆ ಮಾಡಿಕೊಂಡಿದ್ದು, ಇದರಡಿ ಮಣಿಪಾಲ್ ಆಸ್ಪತ್ರೆಗಳಿಗೆ ಬರುವ ರೋಗಿಗಳ ರೋಗ ಪತ್ತೆ ಒಳಗೊಂಡಂತೆ ಎಲ್ಲ ರೀತಿಯ ವೈದ್ಯಕೀಯ ದಾಖಲಾತಿಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತದೆ. ಅದೆಲ್ಲವನ್ನೂ ಒಂದು ಸಾಫ್ಟ್ವೇರ್‌ನಲ್ಲಿ ಹಾಕಿ, ರೋಗಿಯ ಮೊಬೈಲ್‌ನಲ್ಲೇ ಅದನ್ನು ವೀಕ್ಷಿಸುವ ವ್ಯವಸ್ಥೆ ಪರಿಚಯಿಸಲಾಗುತ್ತಿದೆ.
ದೇಶಾದ್ಯಂತ ಸುಮಾರು 23 ಮಣಿಪಾಲ್ ಆಸ್ಪತ್ರೆಗಳು ಮತ್ತು 45 ಟೆಲಿರೇಡಿಯಾಲಜಿ ಸೌಲಭ್ಯಗಳಿದ್ದು, ಸುಮಾರು ನಾಲ್ಕು ಸಾವಿರ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ನಿತ್ಯ ಸಾವಿರಾರು ರೋಗಿಗಳು ಅಲ್ಲಿಗೆ ಭೇಟಿ ನೀಡುತ್ತಾರೆ. ಆ ರೋಗಿಗಳ ಸೂಕ್ಷ್ಮ ವೈದ್ಯಕೀಯ ದಾಖಲಾತಿಗಳು, ಸ್ಕ್ಯಾನ್, ಎಕ್ಸ್- ರೇ ಮತ್ತಿತರ ಇಮೇಜ್‌ಗಳನ್ನು ಡಿಜಿಟಲೀಕರಣಗೊಳಿಸಿ ವಿಶೇಷ ಗುರುತಿನ ಸಂಖ್ಯೆ ನೀಡಿ ಸಂಗ್ರಹ ಮಾಡಲಾಗುತ್ತದೆ. ಇದರಿಂದ ಪ್ರತಿ ಸಲ ರೋಗಿಗಳು ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಕೇವಲ ಮೊಬೈಲ್‌ನಲ್ಲಿಯ ಲಿಂಕ್‌ನಿಂದ ತಜ್ಞ ವೈದ್ಯರು ರೋಗಿಯ ವೈದ್ಯಕೀಯ ದಾಖಲೆಗಳನ್ನು ವೀಕ್ಷಿಸಬಹುದು. ಇದರಿಂದ ಸಮಯ ಉಳಿತಾಯದ ಜತೆಗೆ ರೋಗಿಯ ಕೇಸ್ ಹಿಸ್ಟರಿ ನೋಡಲು ನೆರವಾಗುತ್ತದೆ.
ಒಡಂಬಡಿಕೆಗೆ ಸಂಬಂಧಿಸಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಣಿಪಾಲ್ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಪ್ ಜೋಸ್, ಫ್ಯೂಜಿಫಿಲ್ಮ್ ಇಂಡಿಯಾದೊಂದಿಗೆ ಸಹಭಾಗಿತ್ವ ಹೊಂದಿರುವುದು ಹರ್ಷ ತಂದಿದೆ. ಈ ಪ್ರಯತ್ನವು ಮಣಿಪಾಲ್ ಆಸ್ಪತ್ರೆಗಳ ಜಾಲದಲ್ಲಿ ಡಿಜಿಟಲೀಕರಣದ ಕಡೆಗಿನ ನಮ್ಮ ಪ್ರಗತಿಯ ವೇಗವನ್ನು ಹೆಚ್ಚಿಸಲಿದೆ. ಮುಂಬರುವ ದಿನಗ
ಳಲ್ಲಿ ಈ ಪಾಲುದಾರಿಕೆ ರೋಗಪತ್ತೆ ಶ್ರೇಣಿ ಮತ್ತು ಚಿಕಿತ್ಸಾ ಫಲಿತಾಂಶಗಳಿಗೆ ಇನ್ನಷ್ಟು ಮೌಲ್ಯವರ್ಧನೆ ನೀಡಲಿದೆ’ ಎಂದು ಹೇಳಿದರು.
ಫ್ಯೂಜಿಫಿಲ್ಮ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕೋಜಿ ವಾಡಾ ಮಾತನಾಡಿ, “ಜೀವಗಳ ರಕ್ಷಣೆಗೆ ನೆರವಾಗುವ ಉನ್ನತ ತಾಂತ್ರಿಕ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸುವ ಮತ್ತು ರೋಗಿಗಳು ತಮ್ಮ ವೈಯಕ್ತಿಕ ಆರೈಕೆ ಕುರಿತು ಹೆಚ್ಚಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಗುರಿಯನ್ನು ಈ ಒಡಂಬಡಿಕೆ ಹೊಂದಿದೆ’ ಎಂದರು.