ಬಾಳೆಹೊನ್ನೂರು: ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಶ್ರೀ ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಜಗದ್ಗುರುಗಳು ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ ಶ್ರೀ ಜಗದ್ಗುರು ಪಂಚಾಚಾರ್ಯ ಧರ್ಮ ಧ್ವಜಾರೋಹಣ ನೆರವೇರಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯ ಜೀವನದಲ್ಲಿ ಏರಿಳಿತಗಳು ಬರುವುದು ಸಹಜ. ಆದರೆ ಸುಖವೇ ಬರಲಿ ದು:ಖವೇ ಬರಲಿ ಯಾವಾಗಲೂ ತಾಳ್ಮೆ, ಸಹನೆಯಿಂದ ಬಾಳಬೇಕಾಗುತ್ತದೆ. ಆಧ್ಯಾತ್ಮ ಸಾಧನೆಗೆ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಲು ಜಯಂತಿ- ಹಬ್ಬಗಳು ಸಹಕಾರಿಯಾಗಿವೆ.
ಮನುಷ್ಯ ಹೊರಗಿನ ಸಂಪತ್ತು ಗಳಿಸಲು ಪ್ರಯತ್ನಿಸಿದನೇ ವಿನ: ಒಳಗಿರುವ ಅಧ್ಯಾತ್ಮದ ಸಂಪತ್ತು ಗಳಿಸಲು ಮುಂದಾಗಲಿಲ್ಲ. ಹೀಗಾಗಿ ಮಾನವನ ಬದುಕು ಅಶಾಂತಿ ಅತೃಪ್ತಿಯ ಕಡಲಾಗಿದೆ. ಸ್ವಾರ್ಥಕ್ಕಾಗಿ ಆದರ್ಶ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ನಾಶಗೊಳಿಸಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ವಿಚಾರಧಾರೆಗಳು ಸರ್ವ ಸಮುದಾಯಕ್ಕೂ ಅನ್ವಯಿಸುತ್ತವೆ. ಕ್ಷೇತ್ರನಾಥನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿಯ ಕ್ರಿಯಾ ಕತೃತ್ವ ಶಕ್ತಿ ಅದ್ಭುತವಾದುದು. ಐದು ದಿನಗಳ ಕಾಲ ಜರುಗಲಿರುವ ಧರ್ಮ ಸಮಾವೇಶದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು, ಮಳಲಿ ನಾಗಭೂಷಣ ಶ್ರೀಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶ್ರೀಗಳು, ಹೆಗ್ಗಡಹಳ್ಳಿಮಠದ ಷಡಾ½ವ ರಹಿತೇಶ್ವರ ಶ್ರೀಗಳು, ಅರಗಿನಡೋಣಿ ಸಿದ್ಧಲಿಂಗ ಶ್ರೀಗಳು, ದೊಡ್ಡಸಗರದ ಸೋಮೇಶ್ವರ ಶ್ರೀಗಳು, ಆಡಳಿತಾ ಧಿಕಾರಿ ಎಸ್.ಬಿ.ಹಿರೇಮಠ, ನ್ಯಾಮತಿ ಬಸವರಾಜ, ವೇ.ಬಸವರಾಜ ಶಾಸ್ತ್ರಿಗಳು ಇದ್ದರು. ಇದೇ ಸಂದರ್ಭದಲ್ಲಿ ಶ್ರೀ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ನಂದಿ ಶಿಲಾ ಕಂಭವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರತಿಷ್ಠಾಪಿಸಿದರು. ಹರಿದ್ರಾ ಲೇಪನ ಕಾರ್ಯಕ್ಕೆ ಗಂಗಾಪೂಜೆ ನೆರವೇರಿಸಿ ಅಗ್ರೋದಕ ತರಲಾಯಿತು.ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾ ಧಿಕಾರಿಗಳು ಶ್ರೀ ಪೀಠಕ್ಕೆ ಆಗಮಿಸಿ ಜಗದ್ಗುರುಗಳ ಆಶೀರ್ವಾದ ಪಡೆದರು.