ಪಟಿಯಾಲ: ನಗರದಲ್ಲಿ ಶುಕ್ರವಾರ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಬರ್ಜಿಂದರ್ ಸಿಂಗ್ ಪರ್ವಾನಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ರಾಜಪುರದ ನಿವಾಸಿ ಪರ್ವಾನಾ ಅವರನ್ನು ಮೊಹಾಲಿ ಪೊಲೀಸರು ಬಂಧಿಸಿದ್ದಾರೆ ಎಂದು ಐಜಿ-ಪಟಿಯಾಲ ಮುಖ್ವಿಂದರ್ ಸಿಂಗ್ ಚೀನಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಟಿಯಾಲ ಘರ್ಷಣೆಯ ಪ್ರಮುಖ ಆರೋಪಿ ಬರ್ಜಿಂದರ್ ಪರ್ವಾನಾ ಅವರನ್ನು ಮೊಹಾಲಿಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಸಮಾಜ ವಿರೋಧಿ ಮತ್ತು ದೇಶ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಆದೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಗಲಭೆ ಮತ್ತು ಹಿಂಸಾಚಾರದ ಹಿಂದೆ ಇರುವವರ ವಿರುದ್ಧ ಪೊಲೀಸರು ಮತ್ತು ಜಿಲ್ಲಾಡಳಿತ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಕೆಲವು ಹಿಂದೂ ಗುಂಪುಗಳ ಪ್ರತಿನಿಧಿಗಳು ದೇವಸ್ಥಾನದ ಹೊರಗೆ ತಮ್ಮ ಧರಣಿಯನ್ನು ಹಿಂತೆಗೆದುಕೊಂಡರು ಮತ್ತು ತಮ್ಮ ಉದ್ದೇಶಿತ ಪ್ರತಿಭಟನಾ ಮೆರವಣಿಗೆಯನ್ನು ಮುಂದೂಡಿದ್ದಾರೆ.
ಖಲಿಸ್ಥಾನ್ ವಿರೋಧಿ ಮೆರವಣಿಗೆಯಲ್ಲಿ ಗುಂಪುಗಳ ಘರ್ಷಣೆಯಾಗಿ ಪರಸ್ಪರ ಕಲ್ಲು ತೂರಾಟ ಮತ್ತು ಕತ್ತಿಗಳನ್ನು ಬೀಸಿದ್ದವು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಗಿತ್ತು.