ಭೋಪಾಲ್: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ವಿವಾದ ಮಧ್ಯಪ್ರದೇಶದಲ್ಲಿ ಇನ್ನೂ ಶಮನವಾಗಿಲ್ಲ.ಥಿಯೇಟರ್‌ಗಳಲ್ಲಿ ಚಲನಚಿತ್ರವನ್ನು ನಿಷೇಧಿಸಲು ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಸೋಮವಾರದಿಂದ ಪ್ರಾರಂಭವಾಗಲಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚಿಸುವ ಸಾಧ್ಯತೆಯಿದೆ.
ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಚಿತ್ರದ ‘ಬೇಷರಂ ರಂಗ್’ ಶೀರ್ಷಿಕೆಯ ಹಾಡಿನಿಂದ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಕ್ಷೇಪಿಸಿದ ನಂತರ ‘ಪಠಾಣ್’ ಸುತ್ತ ವಿವಾದ ಹುಟ್ಟಿಕೊಂಡಿದೆ. ಹಾಡಿನಲ್ಲಿ ಬಳಸಿರುವ ವೇಷಭೂಷಣಗಳಲ್ಲಿ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಬಳಸಿರುವ ರೀತಿ ಆಕ್ಷೇಪಾರ್ಹವಾಗಿದೆ ಎಂದು ಮಿಶ್ರಾ ಹೇಳಿದ್ದರು.
ಅಸೆಂಬ್ಲಿ ಸ್ಪೀಕರ್ ಗಿರೀಶ್ ಗೌತಮ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾರುಖ್ ಖಾನ್ ಅವರ ಮಗಳ ಜೊತೆಗೆ ಅವರ ‘ಪಠಾಣ್’ ಚಿತ್ರವನ್ನು ವೀಕ್ಷಿಸಲು ಧೈರ್ಯ ಮಾಡುತ್ತೀರಾ ಎಂದು ಕೇಳಿದ್ದರು. ಶಾರುಖ್ ನಿಮ್ಮ ಮಗಳಿಗೆ 23-24 ವರ್ಷ, ಅವಳೊಂದಿಗೆ ನಿಮ್ಮ ಸಿನಿಮಾ ನೋಡಿ” ಎಂದು ಗೌತಮ್ ಶನಿವಾರ ಹೇಳಿದ್ದರು.
ಐದು ದಿನಗಳ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಈ ವಿಷಯವನ್ನು ಬಿಜೆಪಿ ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಇತರ ಬಲಪಂಥೀಯ ಗುಂಪುಗಳಲ್ಲದೆ, ಕೆಲವು ಕಾಂಗ್ರೆಸ್ ಸದಸ್ಯರು ಮತ್ತು ಹಲವಾರು ಮುಸ್ಲಿಂ ಸಂಘಟನೆಗಳು ಕೂಡ ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಒತ್ತಾಯಿಸಿವೆ.
ಇದೇ ವೇಳೆ ಇನ್ನು ಕೆಲವು ರಾಜಕಾರಣಿಗಳು ಚಿತ್ರಕ್ಕೆ ಬಹಿಷ್ಕಾರ ಹಾಕುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ವಿವೇಕ್ ಟಂಖಾ ಅವರು ಚಲನಚಿತ್ರವನ್ನು ಬೆಂಬಲಿಸಲು ಮುಂದೆ ಬಂದಿದ್ದಾರೆ, ಇದು ಸಮಾಜವಿರೋಧಿ ಪ್ರಕ್ರಿಯೆಯಾದ್ದರಿಂದ ಏನನ್ನಾದರೂ ಬಹಿಷ್ಕರಿಸುವುದನ್ನು ನಾನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
`ಬೇಷರಂ ರಂಗ್` ಹಾಡು ಬಿಡುಗಡೆಯಾದ ನಂತರ, #BoycottPathaan ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ, ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿಯನ್ನು ಧರಿಸಿರುವುದಕ್ಕೆ ಹಲವರು ವಿರೋಧ ವ್ಯಕ್ತ ಪಡಿಸಿದ್ದಾರೆ. ‘ಪಠಾಣ್’ ಜನವರಿ 25 ರಂದು ತೆರೆಗೆ ಬರಲಿದೆ.