Advertisement

ಆತ್ಮವಿಶ್ವಾಸ ಸ್ವಾವಲಂಬಿ ಬದುಕಿನ ಮಾರ್ಗ

10:10 AM Mar 16, 2020 | mahesh |

“ಸ್ವ -ಆರೈಕೆಯಲ್ಲಿ ಸ್ವಾವಲಂಬನೆ’ ಎಂಬುದು ಅನಾರೋಗ್ಯಗಳು, ಅಂಗವೈಕಲ್ಯದಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಗಗನಕುಸುಮವಾಗಿರುತ್ತದೆ. ಶ್ಯಾಮ್‌ ಅವರ ಜೀವನದ ಕತೆಯೂ ಹೀಗೆಯೇ ಇದೆ. ಶಾಲಾಕಾಲೇಜು ದಿನಗಳಲ್ಲಿಯೇ ಅವರು ಚೆನ್ನಾಗಿ ಓದಿ ತನ್ನ ಕಾಲಮೇಲೆ ನಿಂತು ಬದುಕು ಕಟ್ಟಿಕೊಳ್ಳಬೇಕು, ತಂದೆ -ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದಾಗಿ ಕನಸು ಕಟ್ಟಿದ್ದರು. ಆದರೆ ಎರಡು ವರ್ಷಗಳ ಹಿಂದಿನ ಒಂದು ಕೆಟ್ಟ ದಿನ ಇದೆಲ್ಲವನ್ನೂ ತಲೆಕೆಳಗು ಮಾಡಿತು. 28 ವರ್ಷ ವಯಸ್ಸಿನ ಶ್ಯಾಮ್‌ ಅಪಘಾತಕ್ಕೆ ಈಡಾಗಿದ್ದರಿಂದ ಶೌಚಕ್ಕೆ ಹೋಗುವುದು, ಸ್ನಾನ ಮಾಡುವುದು, ಕೂದಲು ಬಾಚುವುದು, ಉಡುಪು ಧರಿಸಿಕೊಳ್ಳುವಂತಹ ಸ್ವಯಂ ಆರೈಕೆಯ ಕೆಲಸಕಾರ್ಯಗಳಿಗೂ ಶ್ಯಾಮ್‌ ಅವರು ತನ್ನ ವಯೋವೃದ್ಧ ತಂದೆ-ತಾಯಂದಿರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಬಂತು. ಪ್ರತಿ ದಿನ ತನ್ನ ತಾಯಿಯ ಸಹಾಯದಿಂದ ಈ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವಾಗ ಶ್ಯಾಮ್‌ ಬಹಳ ಖನ್ನರಾಗುತ್ತಾರೆ ಮತ್ತು ಬದುಕಿನ ಬಗ್ಗೆ ಆಶಾವಾದವನ್ನೇ ಕಳೆದುಕೊಳ್ಳುತ್ತಾರೆ. ಒಂದು ಕಾಲದಲ್ಲಿ ಅವರಿಗೆ ತನ್ನ ಕಾಲಿನ ಮೇಲೆ ನಿಂತು ಸ್ವಾವಲಂಬಿಯಾಗಬೇಕು ಎಂಬ ಕನಸಿತ್ತು. ಆದರೆ ಇಂದು ಅವರಿಗೆ ಆತ್ಮವಿಶ್ವಾಸವೇ ಇಲ್ಲವಾಗಿದೆ.

Advertisement

ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.2ರಿಂದ 5ರಷ್ಟು ಮಂದಿ ಶ್ಯಾಮ್‌ ಅವರಂತೆಯೇ ತೀವ್ರ ತರಹದ ಅಂಗವೈಕಲ್ಯಗಳಿಂದ ಬಳಲುತ್ತಿದ್ದಾರೆ. ದೈಹಿಕ ಸಾಮರ್ಥ್ಯದ ಕೊರತೆಯು ಈ ವ್ಯಕ್ತಿಗಳನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ತಡೆಹಿಡಿಯುತ್ತದೆ. ಇದರಿಂದಾಗಿ ಅವರು ಮನೆ ಮತ್ತು ಸಮಾಜದ ಆಗುಹೋಗುಗಳು, ಚಟುವಟಿಕೆಗಳಿಂದ ದೂರ ಉಳಿಯಬೇಕಾಗುತ್ತದೆಯಲ್ಲದೆ ಮನುಷ್ಯನಿಗೆ ವ್ಯಕ್ತಿತ್ವ ಗುರುತನ್ನು ತಂದುಕೊಡುವ ದೈನಿಕ ಬದುಕಿನ ಅನೇಕ ಅರ್ಥವತ್ತಾದ ಕೆಲಸಕಾರ್ಯಗಳಲ್ಲಿ ಭಾಗವಹಿಸುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಸ್ವಯಂ ಆರೈಕೆಯ ಕೊರತೆಯಿಂದ ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯುವುದು ಅನೇಕರಿಗೆ ಮಾನಸಿಕ ಸಮಸ್ಯೆಗಳನ್ನೂ ಉಂಟು ಮಾಡಬಹುದು. ಶ್ಯಾಮ್‌ ಅವರಂತೆ ಇತರರ ಸಹಾಯದಿಂದ ದೈನಂದಿನ ಕೆಲಸಕಾರ್ಯಗಳನ್ನು ಪೂರೈಸಿಕೊಳ್ಳಬೇಕಾದ ಸ್ಥಿತಿ ಒತ್ತಡ ಮತ್ತು ಸಮಸ್ಯಾತ್ಮಕವಾಗುತ್ತದೆ.

ದೈನಂದಿನ ಬದುಕಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಯಾಗಿದ್ದರೆ ನಮ್ಮ ಒಟ್ಟಾರೆ ಆರೋಗ್ಯ ಮತ್ತು ಕ್ಷೇಮ ಚೆನ್ನಾಗಿರುತ್ತದೆ, ಇದರಿಂದ ಜೀವನ ಗುಣಮಟ್ಟವೂ ವೃದ್ಧಿಸುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಅಲ್ಲದೆ ಇದು ನಮ್ಮ ಬದುಕಿಗೊಂದು ಚೌಕಟ್ಟನ್ನೂ ಅರ್ಥವನ್ನೂ ಸೃಷ್ಟಿಸಿಕೊಡುತ್ತದೆ. ಇದಲ್ಲದೆ, ನಮ್ಮ ಸಂಧಿಗಳು ಮತ್ತು ಸ್ನಾಯುಗಳಿಗೂ ಬಲ ನೀಡುತ್ತವೆಯಲ್ಲದೆ ನಮ್ಮ ಚಟುವಟಿಕೆಗಳ ಮಟ್ಟವನ್ನು ಉತ್ತಮಪಡಿಸುತ್ತದೆ. ದೈನಂದಿನ ಚಟುವಟಿಕೆಗಳು ಮಿದುಳಿಗೆ ಚೈತನ್ಯ ನೀಡುತ್ತವೆ ಮತ್ತು ದೇಹದ ಲಯ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತವೆ. ಅದು ಆಸ್ಪತ್ರೆ ವಾಸದ ಅವಧಿಯನ್ನು, ಖರ್ಚನ್ನು ಮತ್ತು ಭವಿಷ್ಯದಲ್ಲಿ ಸಾಂಸ್ಥಿಕ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂಬುದಾಗಿಯೂ ಅಧ್ಯಯನಗಳು ಹೇಳಿವೆ. ಸ್ವಾವಲಂಬನೆಯು ಹೆಚ್ಚಿದಂತೆ ವ್ಯಕ್ತಿಗೆ ತಾನು ಬಯಸಿದಂತೆ ಬದುಕುವ ಮುಕ್ತ ಅವಕಾಶ ಒದಗುತ್ತದೆ, ಆತ್ಮವಿಶ್ವಾಸ ವೃದ್ಧಿಸುತ್ತದೆ ಮತ್ತು ವ್ಯಕ್ತಿತ್ವ ಗುರುತಿನ ಸಂವೇದನೆಯೂ ವೃದ್ಧಿಸುತ್ತದೆ. ಸ್ನಾನ ಮಾಡುವುದು, ಉಡುಪು ಧರಿಸುವುದು, ಶೌಚಕ್ರಿಯೆಗಳು, ಕೂದಲು ಬಾಚುವುದು ಮತ್ತು ಊಟ ಉಪಾಹಾರ ಸೇವಿಸುವಂತಹ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬನೆಯು ವ್ಯಕ್ತಿಯ ಕುಟುಂಬ ಸದಸ್ಯರ ಮೇಲಿನ ಹೊರೆಯನ್ನು ಕೂಡ ತಗ್ಗಿಸುತ್ತದೆ.

ಅನಾರೋಗ್ಯ ಸ್ಥಿತಿಗಳಿಂದಾಗಿ ಕಾರ್ಯಚಟುವಟಿಕೆಗಳನ್ನು ನಡೆಸಲು ಅಡ್ಡಿಯನ್ನು ಅನುಭವಿಸುವ ವ್ಯಕ್ತಿಗಳು ದೈನಂದಿನ ಬದುಕಿನ ಚಟುವಟಿಕೆಗಳನ್ನು ನಡೆಸುವಲ್ಲಿ ಸಂಕಷ್ಟವನ್ನು ಅನುಭವಿಸುವುದು ಹೆಚ್ಚು ಮತ್ತು ಗುಣ ಹೊಂದುವ ಸಮಯದಲ್ಲಿ ದೈನಿಕ ಬದುಕಿನ ಚಟುವಟಿಕೆಗಳನ್ನು ಮತ್ತೆ ನಡೆಸುವ ಸ್ವಾವಲಂಬನೆಗೆ ಒತ್ತು ನೀಡಲಾಗುವುದಿಲ್ಲ. ಈ ಸ್ವಾವಲಂಬನೆಯನ್ನು ಸಾಧಿಸುವುದು ವಸ್ತುಶಃ ಅಸಾಧ್ಯ ಅಥವಾ ವಿಶ್ರಾಂತಿಯ ಬಳಿಕ ಸ್ವಲ್ಪ ಮಟ್ಟಿನ ಸ್ವಾವಲಂಬನೆ ಅವರಿಗೆ ಸಾಧ್ಯವಾಗುತ್ತದೆ ಎಂದು ಭಾವಿಸಲಾಗುತ್ತದೆ. ಆದ್ದರಿಂದ ಅಂತಹ ವ್ಯಕ್ತಿಗಳು ತಮ್ಮನ್ನು ತಾವು ಇನ್ನಷ್ಟು ಸೀಮಿತಗೊಳಿಸಿಕೊಳ್ಳುತ್ತಾರೆ ಮತ್ತು ಇದರಿಂದಾಗಿ ಅವರ ಗುಣಹೊಂದುವ ಸಮಯವೂ ದೀರ್ಘ‌ವಾಗುತ್ತದೆ. ದೈನಂದಿನ ಬದುಕಿನ ಚಟುವಟಿಕೆಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದಕ್ಕೆ ಆದ್ಯತೆ ನೀಡಿದಲ್ಲಿ ಅದರಿಂದ ಗುಣ ಹೊಂದುವಿಕೆಗೆ ವೇಗ ಸಿಗುತ್ತದೆಯಲ್ಲದೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಹೆಚ್ಚು ಸಾಧಿಸುವುದಕ್ಕೂ ಇದು ಇಂಧನವಾಗುತ್ತದೆ.

ಪಲ್ಲವಿ ಭಟ್‌, ಕೌಶಿಕಾ ವಿ.,  ಸಂಜನಾ ಟಿಪ್ನಿಸ್‌
ಪ್ರಥಮ ವರ್ಷದ ಎಂಒಟಿ ವಿದ್ಯಾರ್ಥಿಗಳು
ಕೌಶಿಕ್‌ ಸಾಹು, ಸಹಾಯಕ ಪ್ರೊಫೆಸರ್‌, ಸೀನಿಯರ್‌ ಸ್ಕೇಲ್‌,
ಅಕ್ಯುಪೇಶನಲ್‌ ತೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next