Advertisement
ನಮಗೆ ಮಾತ್ರ ಯಾಕಿಲ್ಲ?ಹಲವು ವರ್ಷಗಳಿಂದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಮೆಸ್ಕಾಂಗೆ ಅರ್ಜಿ ಹಾಕಿದರೂ, ಮನೆ ಕಟ್ಟಿರುವ ಜಾಗ ಗೋಮಾಳವೆಂದು ಹೇಳಿ ತಲ್ಲೂರು ಗ್ರಾಮ ಪಂಚಾಯತ್ ಸಿಬಂದಿ ನಿರಾಕ್ಷೇಪಣಾ ಪತ್ರ ನೀಡಲು ಹಿಂದೇಟು ಹಾಕಿದ್ದಾರೆ. ಆದರೆ ಸುತ್ತಮುತ್ತಲಿರುವ ಅಂಗಡಿ ಸಹಿತ ಇನ್ನಿತರ ವಾಣಿಜ್ಯ ಮಳಿಗೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಿದ್ದಾರೆ. ನಮ್ಮದೊಂದು ಪುಟ್ಟ ಕ್ಯಾಂಟೀನ್/ಮನೆಗೆ ಯಾಕೆ ಕೊಡುತ್ತಿಲ್ಲ ಎನ್ನುವುದು ಈ ದಂಪತಿಯ ಪ್ರಶ್ನೆ.
ಈ ದಂಪತಿಗೆ ಕ್ಯಾಂಟೀನ್ ಮನೆಯಾಗಿದೆ. 3 ವರ್ಷದ ಹಿಂದೆ ನಿವೇಶನಕ್ಕಾಗಿ 94 ಸಿಯಡಿ ಅರ್ಜಿ ಸಲ್ಲಿಸಿದ್ದೇವೆ. ಆದರೆ ಈವರೆಗೆ ಹಕ್ಕುಪತ್ರ ಮಾತ್ರ ಸಿಕ್ಕಿಲ್ಲ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆರ್ಥಿಕ ಸಂಕಷ್ಟವೂ ಇರುವುದರಿಂದ ಬೇರೆ ಕಡೆಗೆ ಹೋಗಿ ಮನೆ ಕಟ್ಟಿ ಬದುಕುವುದು ಕಷ್ಟವಾಗಿದೆ ಎನ್ನುತ್ತಾರೆ. ನಾರಾಯಣ ಶೆಟ್ಟಿ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ ಎನ್ನುವುದರ ಈ ಕುರಿತು “ಉದಯವಾಣಿ’ ಕಳೆದ ಜನವರಿಯಲ್ಲಿ ವಿಶೇಷ ವರದಿ ಮೂಲಕ ಗಮನಸೆಳೆದಿತ್ತು. ಆ ಬಳಿಕ ಅಂದರೆ ತಲ್ಲೂರು ಗ್ರಾ.ಪಂ. ವತಿಯಿಂದ ಕಳೆದ ಮಾರ್ಚ್‌ನಲ್ಲಿ ಜಿ.ಪಂ. ಸದಸ್ಯೆ ಜ್ಯೋತಿಯವರು ನಾರಾಯಣ ಶೆಟ್ಟಿ ಅವರ ಮನೆಗೆ ಸೋಲಾರ್ ದೀಪವನ್ನು ನೀಡಿದ್ದರು.
ಬೆಳಕಾಗದ “ಜ್ಯೋತಿ’
2015ರಲ್ಲಿ ಕೇಂದ್ರ ಸರಕಾರವು ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೀನ ದಯಾಳ ಉಪಾಧ್ಯಾಯ “ಗ್ರಾಮಜ್ಯೋತಿ’ ಯೋಜನೆ ಜಾರಿಗೆ ತಂದಿದ್ದು, ಇದರಂತೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬ ಕರೆಂಟಿಲ್ಲ ಅಂದರೆ ಅರ್ಜಿ ಸಲ್ಲಿಸಬಹುದು. ಆದರೆ ನಾರಾಯಣ ಶೆಟ್ಟಿ ಅವರು ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಎಲ್ಲ ಹೊಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಕರೆಂಟು ಇಲ್ಲ, ಸೀಮೆಎಣ್ಣೆಯೂ ಸಿಗುತ್ತಿಲ್ಲ
ಮಗಳು ಪಿಯುಸಿ, ಮಗ ಎಸೆಸೆಲ್ಸಿ ಓದುತ್ತಿದ್ದಾರೆ. ನಮಗೆ ಕರೆಂಟಂತೂ ಇಲ್ಲ. ಆದರೆ ಕ್ಯಾಂಟೀನ್‌ಗಾಗಿ ಪಡಿತರ ಚೀಟಿಯಲ್ಲಿ ಗ್ಯಾಸ್ ಪಡೆಯುತ್ತಿರುವುದ ರಿಂದ ಸೀಮೆಎಣ್ಣೆಯೂ ಸಿಗುತ್ತಿಲ್ಲ. ಕಳೆದ ಮಾರ್ಚ್‌ನಲ್ಲಿ ಪಂಚಾಯತ್‌ನವರು ಸೋಲಾರ್ ಕೊಟ್ಟದ್ದು ಸಹಾಯವಾಗಿದೆ. ಆದರೆ ಈಗ ಮಳೆಗಾಲ. 1 ಗಂಟೆಗಿಂತ ಜಾಸ್ತಿ ಸೋಲಾರ್ ಉರಿಯುತ್ತಿಲ್ಲ ಎನ್ನುವುದು ನಾರಾಯಣ ಶೆಟ್ಟಿ ಅವರ ಪತ್ನಿ ಗಿರಿಜಾ ಅವರ ನೋವಿನ ನುಡಿ.
Related Articles
ಜೀವನೋಪಾಯಕ್ಕೆ ಮನೆಯಲ್ಲೇ ಹಲವು ವರ್ಷಗಳಿಂದ ಒಂದು ಪುಟ್ಟ ಕ್ಯಾಂಟೀನ್ ನಡೆಸುತ್ತಿದ್ದರೂ, ಅದರಲ್ಲಿ ಏನೂ ಸಿಗುವುದಿಲ್ಲ. ಆದರೂ ಹೇಗೋ ದಿನ ನಡೆಯುತ್ತಿದೆ. ಪಂಚಾಯತ್‌ನವರು ಕರೆಂಟು ಕೊಡಲು ಅನುಮತಿ ನೀಡಿದರೆ ನಮಗೆ ಬಹಳ ದೊಡ್ಡ ಉಪಕಾರವಾಗುತ್ತದೆ.
– ನಾರಾಯಣ ಶೆಟ್ಟಿ, ತಲ್ಲೂರು
Advertisement
300 ಅರ್ಜಿ ಬಾಕಿ ಇವೆನಾರಾಯಣ ಶೆಟ್ಟಿಯವರಿಗೆ ಗೋಮಾಳ ಜಾಗವಾದ್ದರಿಂದ ನಿರಪೇಕ್ಷಣಾ ಪತ್ರ ಕೊಟ್ಟಿಲ್ಲ. ಅಕ್ಕ- ಪಕ್ಕ ಪಂಚಾಯತ್ ಕಟ್ಟಡವಾದ್ದರಿಂದ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ನಿವೇಶನ ಹಕ್ಕುಪತ್ರಕ್ಕಾಗಿ ತಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 300 ಮಂದಿ ಅರ್ಜಿ ಸಲ್ಲಿಸಿದ್ದು, ಅವರ್ಯಾರಿಗೂ ಸಿಕ್ಕಿಲ್ಲ. ಈಗಾಗಲೇ 50 ಸೆಂಟ್ಸ್ ಜಾಗ ಗುರುತಿಸಿದ್ದು, ಆದರೆ ಅದು ಸಾಕಾಗಲ್ಲ, ಹೆಚ್ಚಿನ ಜಾಗ ಕಾಯ್ದಿರಿಸಲು ತಹಶೀಲ್ದಾರ್‌ಗೆ ತಿಳಿಸಲಾಗಿದೆ.
– ಆನಂದ ಬಿಲ್ಲವ
ತಲ್ಲೂರು ಗ್ರಾ.ಪಂ. ಅಧ್ಯಕ್ಷ – ಪ್ರಶಾಂತ್ ಪಾದೆ