Advertisement

ಮೋದಿಯೊಳಗೆ ಪಟೇಲ್‌ ನಾಯಕತ್ವ

07:20 AM Feb 10, 2019 | Team Udayavani |

ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯೊಳಗೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಹೋಲುವಂತಹ ನಾಯಕತ್ವವಿರುವ ಕಾರಣ ಭಾರತ ಪ್ರಗತಿಯಲ್ಲಿ ನಿರ್ಣಾಯಕ ಘಟ್ಟವನ್ನು ತಲುಪಿದೆ ಎಂದು ಕೇಂದ್ರ ಮಾಜಿ ಸಚಿವ ಎಸ್‌.ಎಂ.ಕೃಷ್ಣ ಬಣ್ಣಿಸಿದರು.

Advertisement

ನಗರದ ಚಿಕ್ಕೇಗೌಡನದೊಡ್ಡಿಯಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಸಮುದಾಯ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಟೇಲ್‌ ಅವರಂತಹ ಶಕ್ತಿಯುತವಾದ, ಗಟ್ಟಿ ನಾಯಕತ್ವವನ್ನು ನರೇಂದ್ರ ಮೋದಿ ಅವರಲ್ಲಿ ನಾವು ನೋಡುತ್ತಿದ್ದೇವೆ. ಅವರನ್ನು ಮತ್ತೆ ಐದು ವರ್ಷಗಳವರೆಗೆ ದೇಶದ ಪ್ರಧಾನಿಯಾಗಿ ಮುಂದುವರಿಸುವುದು ಇಂದಿನ ನಮ್ಮ ಅಗತ್ಯ ಮತ್ತು ಅನಿವಾರ್ಯತೆಯಾಗಿದೆ ಎಂದು ಹೇಳಿದರು.

ದೇಶ ಕವಲುದಾರಿಯಲ್ಲಿರುವುದರಿಂದ ಅದನ್ನು ಹೆದ್ದಾರಿಗೆ ತರಬೇಕಿದೆ. ಆ ನಿಟ್ಟಿನಲ್ಲಿ ಮೋದಿ ಭಾಗಶಃ ಪೂರ್ಣ ಹಂತ ತಲುಪಿದ್ದಾರೆ. ಅದನ್ನು ಪರಿಪೂರ್ಣಗೊಳಿಸಲು ಮತ್ತೆ ಅವರ ನಾಯಕತ್ವ ದೇಶಕ್ಕೆ ಸಿಗಬೇಕು ಎಂದು ಹೇಳಿದರು.

ಕಳೆದ ಐದು ವರ್ಷದಲ್ಲಿ ಭಾರತದಲ್ಲಿ ದೊಡ್ಡ ಕ್ರಾಂತಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಈ ಕ್ರಾಂತಿಯ ಹರಿಕಾರರಾಗಿದ್ದಾರೆ. ದೇಶಕ್ಕೆ ಸಮರ್ಥ ನಾಯಕತ್ವ ದೊರಕಿರುವುದಲ್ಲದೆ ದಷ್ಟಪುಷ್ಟ ಸರ್ಕಾರವೂ ಲಭಿಸಿದೆ. ಜನಪರವಾದಂತಹ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನರ ಮನಗೆದ್ದಿದ್ದಾರೆ. ಅವರಿಂದ ಯಾವ ಪ್ರಮಾಣದಲ್ಲಿ ಜನರಿಗೆ ಅನುಕೂಲವಾಗಿದೆ ಎನ್ನುವುದನ್ನು ಗುಣಾತ್ಮಕವಾಗಿ ಚರ್ಚಿಸಬೇಕಿದೆ ಎಂದು ಹೇಳಿದರು.

ಗುಣಾವಗುಣಗಳ ಚರ್ಚೆ ಅಗತ್ಯ: ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕೊಟ್ಟ ಕಾರ್ಯಕ್ರಮಗಳ ಗುಣಾವಗುಣಗಳ ಬಗ್ಗೆ ಚರ್ಚೆ ನಡೆದರೆ ಅದರಿಂದ ಜನರಿಗೆ ಹೆಚ್ಚು ತಿಳಿವಳಿಕೆ ಬರಲಿದೆ. ಗುಣಾತ್ಮಕ ಚರ್ಚೆಯಲ್ಲಿ ತಾವು ಮುಂದೆ ಇದ್ದೇವೆ ಎನ್ನುವುದನ್ನು ದೇಶದ ಸಮುದಾಯಕ್ಕೆ ತೋರಿಸಬೇಕಿದೆ ಎಂದು ತಿಳಿಸಿದರು.

Advertisement

ನೆರೆಯ ದೇಶ ಪಾಕಿಸ್ತಾನ ನಮ್ಮ ದೇಶದ ಮೇಲೆ ಪದೇ ಪದೇ ದಾಳಿ ನಡೆಸುತ್ತಾ ಅಟ್ಟಹಾಸ ಮೆರೆಯುತ್ತಿತ್ತು. ದುಷ್ಟ ಪಾಕಿಸ್ತಾನಕ್ಕೆ ಹೊಸ ಸಂದೇಶ ಕಳಿಸುವ ಸಲುವಾಗಿಯೇ ಹೊಸ ದೃಢ ನಿಲುವನ್ನು ಕೈಗೊಂಡರು. ಅದೇ ಸರ್ಜಿಕಲ್‌ ಸ್ಟ್ರೈಕ್‌. ಯಾವ ಭಾಷೆಯಲ್ಲಿ ಪಾಕಿಸ್ತಾನಕ್ಕೆ ಉತ್ತರ ನೀಡಬೇಕೋ ಅದೇ ಧಾಟಿಯಲ್ಲಿ ಉತ್ತರಿಸಿ ರಾಷ್ಟ್ರಕ್ಕೆ ದೊಡ್ಡ ಕೊಡುಗೆ ನೀಡಿದರು ಎಂದು ಬಣ್ಣಿಸಿದರು.

ಮೋದಿಯೊಳಗೆ ಪಟೇಲ್‌ ನಾಯಕತ್ವ: ಮೋದಿ ಒಬ್ಬ ಸರ್ವಾಧಿಕಾರಿ ಎಂದು ಟೀಕಿಸುತ್ತಾರೆ. ಅದೇ ಕಾರಣಕ್ಕೆ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದು. ಅಂತಹದೊಂದು ಗಟ್ಟಿ ನಾಯಕತ್ವ ದೇಶಕ್ಕೆ ಅಗತ್ಯ. ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌. ಆದರೆ, ಅವರಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ನಾವು ಕೊಡಲೇ ಇಲ್ಲ. ಸರ್ದಾರ್‌ ಪಟೇಲ್‌ ನಾಯಕತ್ವವಿಲ್ಲದಿದ್ದರೆ ದೇಶದ 512 ಸಂಸ್ಥಾನಗಳನ್ನು ವಿಲೀನಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಾಗುತ್ತಿರಲಿಲ್ಲ. ಅದರ ಕೀರ್ತಿ ಪಟೇಲರಿಗೆ ಸಲ್ಲಬೇಕು ಎಂದು ತಿಳಿಸಿದರು.

ಬಿಜೆಪಿ ಈಗ ಬಂದು ಮುದುಡಿಹೋಗುವ ಪಕ್ಷವಲ್ಲ. ಯುವ ಜನಾಂಗಕ್ಕೆ ಸ್ಫೂರ್ತಿ ತರುವುದು ಬಿಜೆಪಿ ಧ್ಯೇಯ ವನ್ನು ಬಿಜೆಪಿ ಹೊಂದಿದೆ. ವಾಜಪೇಯಿಯನ್ನು ಧರ್ಮರಾಯನಿಗೆ ಹೋಲಿಸಿದ ಎಸ್‌.ಎಂ.ಕೃಷ್ಣ, ಅಂತಹ ನಾಯಕರಿದ್ದ ಬಿಜೆಪಿಗೆ ಬಂದಿರೋದು ನನ್ನ ಭಾಗ್ಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವಿ.ಸೋಮಶೇಖರ್‌, ಎನ್‌.ಶಿವಣ್ಣ, ಪರಾಜಿತ ಲೋಕಸಭಾ ಅಭ್ಯರ್ಥಿ ಡಾ.ಸಿದ್ದರಾಮಯ್ಯ, ಮಂಡ್ಯ ಜಿಲ್ಲಾ ಉಸ್ತುವಾರಿ ಇ.ಅಶ್ವತ್ಥ್ ನಾರಾಯಣ್‌, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಮಾಜಿ ಅಧ್ಯಕ್ಷ ಎಚ್.ಹೊನ್ನಪ್ಪ, ಬಿಜೆಪಿ ಮುಖಂಡರಾದ ಕೆ.ಎಸ್‌.ನಂಜುಂಡೇಗೌಡ, ಎನ್‌.ಶಿವಣ್ಣ, ಮಲ್ಲಿಕಾರ್ಜುನ್‌, ಎಚ್.ಆರ್‌.ಅರವಿಂದ್‌, ಮಧುಚಂದನ್‌, ಅರುಣ್‌ಕುಮಾರ್‌, ವಿದ್ಯಾ ನಾಗೇಂದ್ರ, ಪಾಲಹಳ್ಳಿ ಲಿಂಗಣ್ಣ, ದಾಸನದೊಡ್ಡಿ ರಾಮೇಗೌಡ, ವಕೀಲ ದೊರೆಸ್ವಾಮಿ, ಡಾ.ಸದಾನಂದ ಇತರರಿದ್ದರು.

ಮಹಾಘಟ ಬಂಧನ್‌ ಬಗ್ಗೆ ವ್ಯಂಗ್ಯ: ಮೋದಿ ಅವರನ್ನು ಸೋಲಿಸಲು 20ಕ್ಕೂ ಹೆಚ್ಚು ಪಕ್ಷಗಳು ಒಂದಾಗಿವೆ. ಆದರೆ, ಆ ಪಕ್ಷಗಳಲ್ಲಿ ನಾಯಕತ್ವ ಯಾರದ್ದು ಅನ್ನೋದೆ ಗೊತ್ತಿಲ್ಲ. ಅದಕ್ಕಾಗಿಯೇ ಚುನಾವಣೆ ಬಳಿಕ ಹೇಳುತ್ತೇವೆ ಅಂತ ಮಹಾಘಟ ಬಂಧನ್‌ ಬಗ್ಗೆ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next