ಹೊಸದಿಲ್ಲಿ : ‘ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಬೃಹತ್ ಗಾತ್ರದ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ; ಆದರೆ ಅವರು ನಿರ್ಮಿಸಲು ನೆರವಾಗಿದ್ದ ಪ್ರಜಾಸತ್ತೆಯ ಉನ್ನತ ಸಂಸ್ಥೆಗಳನ್ನು ಕೇಂದ್ರ ಸರಕಾರ ವ್ಯವಸ್ಥಿತವಾಗಿ ಸರ್ವನಾಶ ಮಾಡಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 182 ಮೀಟರ್ ಎತ್ತರದ ಮತ್ತು ಜಗತ್ತಿನಲ್ಲೇ ಅತೀ ಎತ್ತರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಉದ್ಘಾಟಿಸಲಾಗಿದೆ; ಆದರೆ ಅವರು ಯಾವೆಲ್ಲ ಉನ್ನತ ಧ್ಯೇಯೋದ್ದೇಶಗಳ ಸಂಸ್ಥೆಗಳ ನಿರ್ಮಾಣಕ್ಕೆ ನೆರವಾಗಿದ್ದರೋ ಅವೆಲ್ಲವನ್ನೂ ಸರಕಾರ ವ್ಯವಸ್ಥಿತವಾಗಿ ನಾಶಪಡಿಸಿರುವುದು ವಿಪರ್ಯಾಸಕರ; ಭಾರತದ ಪ್ರಜಾಸತ್ತೆಯ ಅತ್ಯುನ್ನತ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಧ್ವಂಸ ಮಾಡಲಾಗಿರುವ ಕೃತ್ಯವು ದೇಶದ್ರೋಹಕ್ಕೆ ಸಮನಾಗಿದೆ’ ಎಂದು ಬರೆದಿದ್ದಾರೆ.
ರಾಹುಲ್ ಅವರು ತಮ್ಮ ಟ್ವೀಟ್ ನಲ್ಲಿ ಸರ್ದಾರ್ ಪಟೇಲ್ ಪ್ರತಿಮೆಯ ಹೆಗ್ಗಳಿಕೆ ಬಗ್ಗೆ ಯಾವ ಉಲ್ಲೇಖವನ್ನೂ ಮಾಡಿಲ್ಲ. ಆದರೆ ಅವರು ಸರ್ದಾರ್ ಪಟೇಲರ ಜನ್ಮ ದಿನೋತ್ಸವಕ್ಕೆ ಗೌರವ ಸಲ್ಲಿಸಿದ್ದಾರೆ. “ಪಟೇಲ್ ಅವರೋರ್ವ ಉಕ್ಕಿನ ಮನುಷ್ಯ; ಹೃದಯದಾಳದಿಂದ ಅವರೋರ್ವ ಅಪ್ಪಟ ಕಾಂಗ್ರೆಸಿಗ; ಕೋಮುವಾದ, ಮೂಲಭೂತವಾದವನ್ನು ಅವರು ಎಂದೂ ಸಹಿಸುತ್ತಿರಲಿಲ್ಲ; ಅವರ ಜನ್ಮ ದಿನೋತ್ಸವದಂದು ಅವರಿಗೆ ನನ್ನ ಪ್ರಣಾಮಗಳು’ ಎಂದು ರಾಹುಲ್ ಬರೆದಿದ್ದಾರೆ.
ಅಂದ ಹಾಗೆ ಗುಜರಾತಿನ ಕೇವಾಡಿಯಾದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಸ್ಥಾಪಿಸಬೇಕೆಂಬ ಯೋಜನೆಯನ್ನು ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ರೂಪಿಸಿದ್ದರು; ಅಂತೆಯೇ 2013ರಲ್ಲೇ ಶಂಕು ಸ್ಥಾಪನೆ ಮಾಡಲಾಗಿತ್ತು ಮಾತ್ರವಲ್ಲ ದಾಖಲೆಯ ಅವಧಿಯೊಳಗೆ ಈ ಪ್ರತಿಮೆಯ ನಿರ್ಮಾಣ ಕಾರ್ಯ ಪೂರ್ಣಗೊಂಡು ಇಂದು ಮೋದಿ ಅವರು ಪ್ರತಿಮೆಯ ಲೋಕಾರ್ಪಣೆ ಮಾಡಿದ್ದಾರೆ.
ಸರ್ದಾರ್ ಪಟೇಲ್ ಅವರು ಸ್ವತಂತ್ರ ಭಾರತದ ಮೊದಲ ಗೃಹ ಸಚಿವ; ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಾಗ ಬ್ರಿಟಿಷರ ನಿರ್ಗಮನದೊಂದಿಗೆ ತಮ್ಮ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದ 500 ರಾಜ ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸುವ ಮೂಲಕ ದೇಶದ ಏಕತೆ, ಸಮಗ್ರತೆಗೆ ದುಡಿದ ಉಕ್ಕಿನ ಮನುಷ್ಯ; ನವಾಬರಿಂದ ಆಳಲ್ಪಡುತ್ತಿದ್ದ ಜುನಾಗಢ ಮತ್ತು ನಿಜಾಮರಿಂದ ಆಳಲ್ಪಡುತ್ತಿದ್ದ ಹೈದರಾಬಾದನ್ನು ಬಲ ಪ್ರಯೋಗದ ಮೂಲಕ ಭಾರತ ಒಕ್ಕೂಟಕ್ಕೆ ಸೇರಿಸಿದ ದೃಢ ಸಂಕಲ್ಪದ ನಾಯಕ.