Advertisement

ಪಟೇಲ್‌ ದಿಟ್ಟತನ ಹೈ.ಕ. ಸ್ವಾತಂತ್ರ್ಯಾಕ್ಕೆ ಮೂಲ

11:52 AM Sep 18, 2018 | Team Udayavani |

ಬೀದರ: ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯಾ ಸಿಕ್ಕಿತು. ಆದರೆ, ನಮ್ಮ ಭಾಗದ ಜನತೆಗೆ ಆ ಸಮಯದಲ್ಲಿ ಈ ಭಾಗ್ಯ ಲಭಿಸಲಿಲ್ಲ. ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಂತಹ ಮಹನೀಯರ ದಿಟ್ಟ ನಿರ್ಧಾರದಿಂದಾಗಿ ಚಳವಳಿ ಗಟ್ಟಿಗೊಂಡು ಆ ಬಳಿಕ ನಮ್ಮ ಭಾಗಕ್ಕೆ ಸ್ವಾತಂತ್ರ್ಯಾ ಲಭಿಸಿದೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಸೋಮವಾರ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ದಾರ್‌ ವಲ್ಲಭಭಾಯಿ ಪಟೇಲ್‌
ಅವರ ಸೇವೆಯನ್ನು ನಾವೆಲ್ಲರೂ ಈ ಸಂದರ್ಭದಲ್ಲಿ ಸ್ಮರಿಸಲೇಬೇಕಿದೆ ಎಂದರು.

ರಾಜ್ಯದ ರೈತರ ಸಾಲ ಮನ್ನಾ, ಬೀದಿಬದಿಯ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ಹಾಗೂ ಅನೇಕ ಕಾರ್ಯಗಳಿಗೆ ಮುಂದಾಗಿರುವ ಈ ಸರ್ಕಾರದ ಅಭಿವೃದ್ಧಿಯೇ ಮೂಲಮಂತ್ರವಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇಡೀ ನಾಡಿನ ಜನತೆಗೆ ಒಳ್ಳೆಯ ಸಂದೇಶ ಹೋಗಬೇಕು ಎನ್ನುವ ದಿಶೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಲಬುರಗಿಯಲ್ಲಿ ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಬೀದರ ಜಿಲ್ಲೆಯ ರೈತರು ಬಿಎಸ್‌ಎಸ್‌ಕೆ ಕಾರ್ಖಾನೆ ಕುರಿತು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರಸಕ್ತ ಸಾಲಿನಲ್ಲಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗುವುದು.

ಈಗಾಗಲೇ 20 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನಮ್ಮ ಭಾಗದಲ್ಲಿ ಮೊಟ್ಟ ಮೊದಲಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಕೈಗಾರಿಕೆ, ನೀರಾವರಿ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದೇನೆ. 5 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಇಂಜಿನಿಯರಿಂಗ್‌ ಕಾಲೇಜು ಕಾಮಗಾರಿ ಆರಂಭಗೊಂಡಿದೆ. ಇದಕ್ಕೆ ಸುಮಾರು 100 ಕೋಟಿ ರೂ. ಅಗತ್ಯವಿದೆ. ಮೊದಲ ಹಂತದಲ್ಲಿ 50 ಕೋಟಿ ರೂ. ಬಿಡುಗಡೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. ನಮ್ಮ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಜೊತೆ ಸೇರಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ತಮ್ಮ ಬಹುಮುಖ್ಯ
ಆಲೋಚನೆಯಾಗಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್‌ ಪಡೆ, ಗೃಹ ರಕ್ಷಕ ದಳ, ಅರಣ್ಯ ಇಲಾಖೆಯ ಪೊಲೀಸ್‌ ತುಕಡಿಗಳು, ಎನ್‌ಎಸ್‌ ಎಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌, ಸೇವಾದಳ ಹಾಗೂ ಆಶಾಕಿರಣ ಅಂಧರ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ
ಜಿಲ್ಲಾ ಪೊಲೀಸ್‌ ಕವಾಯತು ಮೈದಾನದ ವರೆಗೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಶಾಸಕ ರಹೀಮ ಖಾನ್‌, ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯರಾದ ರಘುನಾಥರಾವ್‌ ಮಲ್ಕಾಪೂರೆ, ವಿಜಯಸಿಂಗ್‌, ಅರವಿಂದಕುಮಾರ ಅರಳಿ, ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ, ಉಪಾಧ್ಯಕ್ಷ ಡಾ|ಪ್ರಕಾಶ ಪಾಟೀಲ, ಜಿಲ್ಲಾ ಪಂಚಾಯತ ಸಿಇಒ ಡಾ| ಆರ್‌.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next