Advertisement
ಪ್ರಾಚೀನ ಶಿಕ್ಷಣ ಪರಂಪರೆಯ ಪುನರುತ್ಥಾನಕ್ಕೆ ಮಹತ್ವದ ಹೆಜ್ಜೆ ಇರಿಸಿದೆ. ಕೇಂದ್ರ ಸರಕಾರದಿಂದ ಮಾನ್ಯತೆ ಹಾಗೂ ಪರವಾನಿಗೆ ಪಡೆದ ಭಾರತೀಯ ಶಿಕ್ಷಣ ಮಂಡಳಿ(ಬಿಎಸ್‌ಬಿ) ಮೂಲಕ ಕರ್ನಾಟಕ ಸಹಿತ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಗೆ ಮುಂದಡಿ ಇರಿಸಿದೆ.
Related Articles
Advertisement
ಕೇಂದ್ರ ಸರಕಾರದ ಶಿಕ್ಷಣದ ಎಲ್ಲ ನಿಯಮ-ಕಾನೂನಿಗೆ ಒಳಪಟ್ಟ ಮಂಡಳಿಯಾಗಿದ್ದು, ಸುಮಾರು 100 ಕೋಟಿ ರೂ.ಗಳ ಭದ್ರತಾ ಠೇವಣಿಯೊಂದಿಗೆ ಮಾನ್ಯತೆ ಪಡೆದಿದೆ. ಈ ಮಂಡಳಿಯಲ್ಲಿ ಕೇಂದ್ರ ಸರಕಾರದ ಹಾಗೂ ಪತಂಜಲಿ ಯೋಗಪೀಠದ ತಲಾ ಏಳು ಜನ ನಿರ್ದೇಶಕರು ಇರಲಿದ್ದಾರೆ. ಉತ್ತರ ಪ್ರದೇಶದ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ.ಪಿ.ಸಿಂಗ್ ಮಂಡಳಿಯ ಚೇರ್ಮನ್ ಆಗಿದ್ದಾರೆ.
ಪರಿಣಾಮಕಾರಿ ಶಿಕ್ಷಣ ಹಾಗೂ ತರಬೇತಿಗೆ ಪೂರಕವಾಗಿ ಕರ್ನಾಟಕ ಸಹಿತ ದೇಶದ ವಿವಿಧೆಡೆ ಸುಮಾರು 50 ಜನ ಶಿಕ್ಷಣ ತಜ್ಞರನ್ನು ಮಾರ್ಗದರ್ಶಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಈಗಾಗಲೇ ಪಠ್ಯ ಸಿದ್ಧಗೊಂಡಿದ್ದು, ಬೋಧಕರು ಹಾಗೂ ಬೋಧಕರ ತರಬೇತು ದಾರರನ್ನು ತಯಾರುಗೊಳಿಸಲಾಗಿದೆ.
ಮಕ್ಕಳಿಗೆ ಕೇಂದ್ರ ಪಠ್ಯಕ್ರಮದಡಿ ಬೋಧನೆ ಜತೆಗೆ ಯೋಗ, ಭಗವದ್ಗೀತೆ, ವೇದಗಳು, ಉಪನಿಷತ್ತು, ರಾಮಾಯಣ, ಸಂಸ್ಕೃತ, ಸಂಸ್ಕೃತಿ, ಪ್ರಾಚೀನ ಪರಂಪರೆ, ಕರ್ನಾಟಕದ ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸಹಿತ ದೇಶದ ವಿವಿಧ ರಾಜ್ಯಗಳ ದಾರ್ಶನಿಕರು, ಮಹಾತ್ಮರು, ಸಾಧಕರ ಚರಿತ್ರೆ, ಹಬ್ಬ-ಆಚರಣೆಗಳ ಮಹತ್ವ, ಸಂಸ್ಕಾರ ಮನನ ಕಾರ್ಯ ನಡೆಯಲಿದೆ.
ಸಂಯೋಜನೆ ಅಗತ್ಯ
ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯ ಕ್ರಮದಡಿ ಬೋಧನೆ ಕೈಗೊಳ್ಳುವ ಖಾಸಗಿ ಶಾಲೆಗಳು ಭಾರತೀಯ ಶಿಕ್ಷಣ ಮಂಡಳಿ (ಬಿಎಸ್‌ಬಿ)ಯಲ್ಲಿ ಸಂಯೋಜನೆಗೊಳ್ಳ ಬೇಕಿದೆ. ಕೇಂದ್ರ ಪಠ್ಯಕ್ರಮ ಬೋಧನೆ ಶಿಕ್ಷಣ ಸಂಸ್ಥೆಗಳು ಸಿಬಿಎಸ್‌ಇಯಿಂದ ಹೊರಬಂದು ಬಿಎಸ್‌ಸಿನಲ್ಲಿ ಸಂಯೋಜನೆಗೊಳ್ಳಬೇಕು, ರಾಜ್ಯ ಪಠ್ಯಕ್ರಮ ಬೋಧನೆ ಶಾಲೆಗಳು ರಾಜ್ಯ ಸರಕಾರದಿಂದ ಎನ್‌ಒಸಿ ಪಡೆದು ಮಂಡಳಿಯೊಂದಿಗೆ ಸಂಯೋಜನೆ ಗೊಳ್ಳಬೇಕಿದೆ.
ಆಗಸ್ಟ್‌ನಲ್ಲಿ ಆರಂಭ
ಭಾರತೀಯ ಶಿಕ್ಷಣ ಮಂಡಳಿ ಯನ್ನು ಪತಂಜಲಿ ಯೋಗ ಪೀಠದ ಸಂಸ್ಥಾಪಕರಾದ ಯೋಗ ಗುರು ಬಾಬಾ ರಾಮದೇವ ಅವರು ಘೋಷಿಸಲಿದ್ದು, ಆಗಸ್ಟ್‌ನಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.
ಭಾರತೀಯ ಶಿಕ್ಷಣ ಮಂಡಳಿ ಭಾರತೀಯ ಶಿಕ್ಷಣ ಪರಂಪರೆ ಪುನರುತ್ಥಾನದ ಯತ್ನಕ್ಕೆ ಮುಂದಾಗಿದೆ. ಸರಕಾರಿ ಶಾಲೆಗಳಲ್ಲಿ ಉಚಿತ ಸೇವೆ ನೀಡಲು ಪತಂಜಲಿ ಯೋಗಪೀಠ, ಭಾರತೀಯ ಶಿಕ್ಷಣ ಮಂಡಳಿ ಸಿದ್ಧವಿದ್ದು, ರಾಜ್ಯ ಸರಕಾರ ಇದಕ್ಕೆ ಒಪ್ಪಿಗೆ ನೀಡಿ ಅವಕಾಶ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಶೀಘ್ರವೇ ನಿಯೋಗ ತೆರಳಿ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಶೀಘ್ರವೇ ರಾಜ್ಯದ ಶಿಕ್ಷಣ ಸಂಸ್ಥೆಗಳ ಸಮಾವೇಶ ನಡೆಸಿ ಬಿಎಸ್‌ಬಿಯ ಉದ್ದೇಶ-ಮಹತ್ವ ಕುರಿತು ಮಾಹಿತಿ ನೀಡಲಾಗುವುದು. ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಯೋಗ ಕಡ್ಡಾಯಗೊಳಿಸಿದರೆ ಅತ್ಯುತ್ತಮ.
-ಭವರಲಾಲ್ ಆರ್ಯ, ರಾಜ್ಯ ಪ್ರಭಾರಿ ಪತಂಜಲಿ ಯೋಗಪೀಠ
ಹರಿದ್ವಾರದಲ್ಲಿ ಯಶಸ್ವಿ ಪ್ರಯೋಗ
ಪತಂಜಲಿ ಯೋಗಪೀಠದ ಕೇಂದ್ರ ಸ್ಥಾನ ಹರಿದ್ವಾರದಲ್ಲಿ ಈಗಾಗಲೇ ಭಾರತೀಯ ಶಿಕ್ಷಣ ಮಂಡಳಿಯ ಮಾದರಿ ಅಡಿಯಲ್ಲಿಯೇ ಗುರುಕುಲ ಶಿಕ್ಷಣ ಆರಂಭಿಸಲಾಗಿದೆ. ಅಲ್ಲಿನ ವಿದ್ಯಾರ್ಥಿಗಳಿಗೆ ಕೇಂದ್ರ ಪಠ್ಯಕ್ರಮ ಬೋಧನೆ ಜತೆಗೆ ಯೋಗ, ಭಗವದ್ಗೀತೆ, ವೇದ, ಉಪನಿಷತ್ತು, ರಾಮಾಯಣ, ಸಂಸ್ಕೃತ, ಸಂಸ್ಕಾರ ಇನ್ನಿತರೆ ಬೋಧನೆ, ತರಬೇತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದೇ ಮಾದರಿಯನ್ನು ದೇಶಾದ್ಯಂತ ವಿಸ್ತರಿಸಲು ಯೋಜಿಸಲಾಗಿದೆ. ಬಾಬಾ ರಾಮದೇವ ಅವರು, ಮೆಕಾಲೆ ಶಿಕ್ಷಣ ಪದ್ಧತಿಯಿಂದ ನಾಶವಾಗಿರುವ ಗುರುಕುಲಗಳ ಪುನರುತ್ಥಾನ ಉದ್ದೇಶ ಹೊಂದಿದ್ದಾರೆ.
ಅಮರೇಗೌಡ ಗೋನವಾರ