ಯಳಂದೂರು: ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸದಸ್ಯರ ಮಾತಿಗೆ ಬೆಲೆಯೇ ಕೊಡುವುದಿಲ್ಲ. ಅಲ್ಲದೇ ಪಪಂನ ಅಧ್ಯಕ್ಷರ ಗಮನಕ್ಕೂ ಬಾರದೆ 10 ಲಕ್ಷ ರೂ. ಡ್ರಾ ಮಾಡಿದ್ದಾರೆ ಎಂದು ಸದಸ್ಯರು ಗಂಭೀರ ಆರೋಪಿಸಿ, ಶನಿವಾರ ಕಚೇರಿಯ ಹೊರಭಾಗದಲ್ಲಿ ಪ್ರತಿಭಟಿಸಿದರು.
ಪಪಂ ಅಧ್ಯಕ್ಷೆ ಶಾಂತಮ್ಮ ನಿಂಗರಾಜು ಮಾತನಾಡಿ, ಶನಿವಾರ ಪಪಂನ ಸಾಮಾನ್ಯ ಸಭೆ ನಡೆಯಿತು. ಇದರಲ್ಲಿ ಜಮಾಖರ್ಚಿಗೆ ಅನುಮೂದನೆ ನೀಡುವ ಪ್ರಸ್ತಾಪವಿದ್ದು ಮುಖ್ಯಾಧಿಕಾರಿಗಳು 10 ಲಕ್ಷ ರೂ. ಹಣವನ್ನು ಅಧ್ಯಕ್ಷರ ಗಮನಕ್ಕೆ ಬಾರದೆ ಡ್ರಾ ಮಾಡಿದ್ದು, ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ನಾವು ಇದಕ್ಕೆ ಅನುಮೋದನೆ ನೀಡಿಲ್ಲ ಎಂದರು.
ಪಪಂವತಿಯಿಂದ ಕಳೆದ 3 ತಿಂಗಳಿಂದ 21.60 ಲಕ್ಷ ರೂ. ವಸೂಲಾತಿ ಆಗಿದೆ. ಇದರಲ್ಲಿ ಕೇವಲ 4 ಚೆಕ್‌ಗಳಲ್ಲಿ 3.23 ಲಕ್ಷ ರೂ.ಗಳಿಗೆ ನಾನು ಸಹಿ ಮಾಡಿದ್ದೇನೆ. ಆದರೆ ನನಗೆ ಅಥವಾ ಇತರೆ ಸದಸ್ಯರಿಗೆ ಗೊತ್ತಿಲ್ಲದಂತೆ 10 ಲಕ್ಷ ರೂ. ಡ್ರಾ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಇದನ್ನು ಕಚೇರಿಯ ಸಿಬ್ಬಂದಿಗೆ ಸಂಬಳ ನೀಡಲು ಇದನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ನನಗೆ ಸಂಪೂರ್ಣ ಅಧಿಕಾರವಿದೆ ಎಂದು ಉತ್ತರ ನೀಡಿದ್ದಾರೆ. ಈ ಬಗ್ಗೆ ಸರ್ಕಾರದ ಸುತ್ತೋಲೆ ಕೇಳಿದಾಗ 2006 ರ ಕರ್ನಾಟ ಮುನಿಸಿಪಾಲಿಟೀಸ್ ಅಕೌಂಟಿಂಗ್ ಅಂಡ್ ಏಜೆಂಟಿಂಗ್ ನಿಯಮಗಳ ಪ್ರತಿಯನ್ನು ಸದಸ್ಯರಿಗೆ ನೀಡಿದ್ದಾರೆ. ಇದರಲ್ಲಿ ಅನ್ಯ ನಿಧಿಯಲ್ಲಿನ ಹಣವನ್ನು ಹೊರಗುತ್ತಿಗೆ ಪೌರಕಾರ್ಮಿಕರಿಗೆ ವೇತನಕ್ಕೆ ಇದನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ನಮೂದಾಗಿದೆ. ಆದರೆ, ಇದನ್ನು ಇತರೆ ಹೊರಗುತ್ತಿಗೆ ಆಧಾರದ ನೌಕರರಿಗೆ ನೀಡಿದ್ದಾರೆ. ಆದರೆ ಇದನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಗಮನಕ್ಕೆ ಬಾರದೆ ಹಣವನ್ನು ಡ್ರಾ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷೆ ಲಕ್ಷ್ಮೀ ಮಲ್ಲು ಮಾತನಾಡಿ, ಜನಪ್ರತಿನಿಧಿಗಳ ಮಾತಿಗೆ ಮುಖ್ಯಾಧಿಕಾರಿ ಬೆಲೆ ಕೊಡುತ್ತಿಲ್ಲ. ಕಚೇರಿಗೆ ನಿಗದಿತ ಅವಧಿಗೆ ಬರುವುದಿಲ್ಲ. ಇಲ್ಲೇ ವಸತಿಗೃಹವಿದ್ದರೂ ತಂಗುವುದಿಲ್ಲ. ಇಲ್ಲಿಗೆ ಕಸ ಸಂಗ್ರಹಕ್ಕಾಗಿ ಹೊಸ ಟ್ರ್ಯಾಕ್ಟರ್ ಬಂದಿದ್ದು, ಇದಕ್ಕೆ ಚಾಲಕನನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆದಿದ್ದು ಇದೂಕೂಡ ನಮ್ಮ ಗಮನಕ್ಕೆ ಬಂದಿಲ್ಲ. ನಾವುಜನಪ್ರತಿನಿಧಿಗಳಾಗಿ ಆಯ್ಕೆಯಾದ ಮೇಲೆ ನಮ್ಮ ಮೇಲೆ ಇದೇ ಧೋರಣೆ ಮುಂದುವರಿದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪಿಡಿ, ಸಫಾಯಿಕರ್ಮಚಾರಿ ಆಯೋಗದ ಅಧ್ಯಕ್ಷರಿಗೂ ದೂರುಸಲ್ಲಿಸಲಾಗಿದೆ. ಕೋಳಿ ಹಾಗೂ ಕುರಿ ಮಾಂಸದಅಂಗಡಿಗಳನ್ನು ತೆರೆಯಲು ಪರವಾನಿಗೆನೀಡುವಂತೆ ಮನವಿ ಮಾಡಿ 6 ತಿಂಗಳು ಕಳೆದರೂ ಕ್ರಮವಹಿಸಿಲ್ಲ. ಕೂಡಲೆ ಉನ್ನತ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಮಂಜು, ಸುಶೀಲಾ ಮುಖಂಡರಾದ ಲಿಂಗರಾಜು, ಮಲ್ಲು,ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.