ಹೊನ್ನಾವರ: ಪಟ್ಟಣದಲ್ಲಿ ಇ-ಸ್ವತ್ತು ಪಡೆಯಲು ಅನೇಕ ಸಮಸ್ಯೆ ಉಂಟಾಗಿ ಜನರು ಪರದಾಡುತ್ತಿದ್ದಾರೆ.ಜನರಿಗೆ ಸಹಾಯವಾಗುವಂತೆ ನಿಯಮಾವಳಿಗಳನ್ನು ಸಡಿಲಗೊಳಿಸಬೇಕು. ಪ.ಪಂ. ವ್ಯಾಪ್ತಿಯಲ್ಲು ಹಲವಾರು ದಶಕಗಳಿಂದ ಅತಿಕ್ರಮಣ ಭೂಮಿಯಲ್ಲಿ ಜನರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆ ಪ್ರದೇಶದಲ್ಲಿ ಮನೆ ವಿಸ್ತಾರಗೊಳಿಸಲು ಕಾನೂನಿನ ತೊಡಕು ಉಂಟಾಗುತ್ತಿದೆ. ಇದಕ್ಕೆ ಎಲ್ಲ ಸದಸ್ಯರು ಕೂಡಿ ಪರಿಹಾರ ಮಾರ್ಗ ಕಂಡುಹಿಡಿಯಬೇಕು ಎಂದು ಸದಸ್ಯ ಅಜಾದ್ ಅಣ್ಣಿಗೇರಿ ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ.ಪಂ. ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಇ-ಸ್ವತ್ತಿನಿಂದ ಆಗುವ ಸಮಸ್ಯೆ ಬಗೆಹರಿಸಲು ಮೇಲಾಧಿಕಾರಿಗಳಿಗೆ ವಿಜ್ಞಾಪನಾ ಪತ್ರವನ್ನು ನೀಡಲಾಗುವುದು ಎಂದರು. ಸಿಪಿಐ ಶ್ರೀಧರ ಎಸ್. ಮಾತನಾಡಿ, ಪಟ್ಟಣದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಬಜಾರ ಭಾಗದಲ್ಲಿ ಅಲ್ಲಲ್ಲಿ ವಾಹನ ನಿಲುಗಡೆಯಿಂದ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತದೊಂದಿಗೆ ಸಮಾಲೋಚಿಸಿ ರೂಪರೇಷೆ ಸಿದ್ಧಗೊಳಿಸಬೇಕಾಗಿದೆ. ರಾತ್ರಿ 8ರಿಂದ ಬೆಳಗ್ಗೆ 8ರ ವರೆಗೆ ಬೃಹತ್ ವಾಹನಗಳ ಸರಕುಗಳನ್ನು ಇಳಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕೆ ಎಲ್ಲ ಸದಸ್ಯರ ಅಗತ್ಯವಿದೆ ಎಂದರು.
ಕೆಲವು ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಸೂಚಿಸಿ ಕಟ್ಟಡಕ್ಕೆ ಅನುಮತಿ ನೀಡಲಾಗಿದೆ. ಆದರೆ ಪಾರ್ಕಿಂಗ್ ಪ್ರದೇಶದಲ್ಲಿ ಅಂಗಡಿಗಳನ್ನು ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಜೋಸಿ ನ್ ಡಯಾಸ್ ಹೇಳಿದರು. ಪಾರ್ಕಿಂಗ್‌ವ್ಯವಸ್ಥೆ ಕಲ್ಪಿಸದ ವಾಣಿಜ್ಯ ಮಳಿಗೆಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ವಾಹನ ದಟ್ಟಣೆಸಮಸ್ಯೆಗೆ ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರು ಹಾಗೂ ಪ.ಪಂ. ಅಧಿಕಾರಿಗಳು, ಸದಸ್ಯರು ಸೇರಿ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು. ಪಪಂನಲ್ಲಿ ಜನರ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಿದೆ. ಶೀಘ್ರವಾಗಿ ಸಾರ್ವಜನಿಕರ ಕೆಲಸಗಳಾಗಬೇಕು ಎಂದು ಅಧ್ಯಕ್ಷ ಶಿವರಾಜ ಮೇಸ್ತ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ನಮ್ಮ ಪ.ಪಂ. ಒಟ್ಟೂ 57 ಸಿಬ್ಬಂದಿಯ ಅಗತ್ಯವಿದೆ. ಆದರೆ ಈಗ ಕೇವಲ 27 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ನೀಡಲು ಆದೇಶಿಸಿದ್ದಾರೆ. ಆಯಾ ಸಿಬ್ಬಂದಿಗೆ ಆಯಾ ವಿಭಾಗದ ಕೆಲಸಗಳಲ್ಲಿ ನೇಮಿಸಲಾಗುವುದು. ಜನರ ಕೆಲಸವನ್ನು ಶೀಘ್ರಗತಿಯಲ್ಲಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು. ಉಪಾಧ್ಯಕ್ಷ ಮೇಧಾ ನಾಯ್ಕ, ಸದಸ್ಯರು ಇನ್ನಿತರರು ಇದ್ದರು.