Advertisement

ಗೋಲ್ಡನ್‌ ಪಟಾಕಿ ಸಿಡಿಯೋಕೆ ರೆಡಿ 

03:55 PM May 25, 2017 | |

ಗಣೇಶ್‌ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಸುಮಾರು ಎಂಟು ತಿಂಗಳುಗಳಾಗಿವೆ. ಬಿಡುಗಡೆಯಾದ ಅವರ ಕೊನೆಯ ಚಿತ್ರ ಎಂದರೆ “ಮುಂಗಾರು ಮಳೆ 2′. ಆ ನಂತರ ಸರದಿಯಲ್ಲಿದ್ದಿದ್ದು “ಪಟಾಕಿ’. ಈಗ “ಪಟಾಕಿ’ ಸಹ ನಾಳೆಯಿಂದ ಸಿಡಿಯುವುದಕ್ಕೆ ಸಿದ್ಧವಾಗಿದೆ. ಎಸ್‌.ವಿ. ಬಾಬು ನಿರ್ಮಾಣದ ಮತ್ತು ಮಂಜು ಸ್ವರಾಜ್‌ ನಿರ್ದೇಶನದ ಈ ಚಿತ್ರವು ರಾಜ್ಯಾದ್ಯಂತ 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Advertisement

ಅದೊಂದು ಪ್ರಯೋಗ ಗಣೇಶ್‌ ಮಾಡಿರಲಿಲ್ಲ. ಈಗ “ಪಟಾಕಿ’ ಚಿತ್ರದ ಮೂಲಕ ಗಣೇಶ್‌ ಅಂಥದ್ದೊಂದು ಪ್ರಯೋಗ ಮಾಡಿದ್ದಾರೆ. ಬರೀ ಮಾಸ್‌ ಅಷ್ಟೇ ಅಲ್ಲ, ಆ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಯಾಗಿಯೂ ಕಾಣಿಸಿಕೊಂಡಿದ್ದಾರೆ. “ಪೊಲೀಸ್‌ ಪಾತ್ರ ಮಾಡುವ ಆಸೆ ಬಹಳ ದಿನಗಳಿಂದ ಇತ್ತು. “ಪಟಾಕಿ’ಯಲ್ಲಿ ಅದು ಈಡೇರಿದೆ.

ಚಿತ್ರ ಚೆನ್ನಾಗಿಲ್ಲ ಎಂದರೆ, ನಾನು ಸಾಮಾನ್ಯವಾಗಿ ಹೆಚ್ಚು ಮಾತನಾಡುವುದಿಲ್ಲ. ಆದರೆ, “ಪಟಾಕಿ’ ನೋಡಿ ಬಹಳ ಖುಷಿಯಾಯಿತು. ಇಲ್ಲಿಯವರೆಗೂ ನಾನು ಮಾಡಿದ ಪಾತ್ರ ಬೇರೆ. ಇದು ಬೇರೆ. ಜನ ಖುಷಿಪಡುವುದರ ಜೊತೆಗೆ, ನಿರ್ಮಾಪಕ ಸೇಫ್ ಆಗಬೇಕು. ಅದು “ಪಟಾಕಿ’ಯಲ್ಲಿ ಆಗುತ್ತಿದೆ. ಚಿತ್ರ ನಿಜಕ್ಕೂ ಚೆನ್ನಾಗಿ ಬಂದಿದೆ ಮತ್ತು ಜನ ಸಹ ಬಹಳ ಪ್ರೀತಿಯಿಂದ ಈ ಚಿತ್ರವನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಗಣೇಶ್‌.

“ಪಟಾಕಿ’ ತೆಲುಗಿನ “ಪಟಾಸ್‌’ ಚಿತ್ರದ ರೀಮೇಕ್‌. ಮೂಲ ಚಿತ್ರ ಹಿಟ್‌ ಆಗಿತ್ತು. ಆ ಚಿತ್ರದ ಚಿತ್ರೀಕರಣ ಸಂದರ್ಭದಲ್ಲೇ, ಇದನ್ನು ಕನ್ನಡಕ್ಕೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ನಿರ್ಮಾಪಕ ಎಸ್‌.ವಿ. ಬಾಬು ಅವರಿಗೆ ಹೇಳಿದ್ದರಂತೆ. ಆ ನಂತರ ಚಿತ್ರ ಬಿಡುಗಡೆಯಾಗಿ ಯಶಸ್ವಿಯೂ ಆಗಿದೆ. ಆ ನಂತರ ಹಕ್ಕುಗಳನ್ನು ಪಡೆದು, ಕನ್ನಡಕ್ಕೆ ಮಾಡಲಾಗಿದೆ. ಅಂದಹಾಗೆ, ಈ ಚಿತ್ರದಲ್ಲಿ ಸಾಯಿಕುಮಾರ್‌ ಮತ್ತು ಗಣೇಶ್‌ ಇಬ್ಬರೂ ತಂದೆ-ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಮುಂಚೆ ನನ್ನ ಮಗನ ಜೊತೆಗೆ ಈ ಚಿತ್ರ ಮಾಡಬೇಕು ಅಂದುಕೊಂಡಿದ್ದೆ. ಆದರೆ, ಅವನಿಗೆ ಈ ಚಿತ್ರ ತುಂಬಾ ಹೆವಿ ಆಗುತ್ತದೆ.

ಕೊನೆಗೆ ಗಣೇಶ್‌ ಅವರ ಹತ್ತಿರ ಮಾಡಿಸೋಣ ಎಂಬ ಸಲಹೆ ಬಂತು. ನಾನು ಗಣೇಶ್‌ ಅವರ
ದೊಡ್ಡ ಅಭಿಮಾನಿ. ತಕ್ಷಣ ಒಪ್ಪಿಕೊಂಡೆ. ಅವರ ಅಭಿನಯ ಬಹಳ ಚೆನ್ನಾಗಿದೆ. ಒಂದೊಳ್ಳೆಯ ಚಿತ್ರ ಮಾಡಿದ್ದೀವಿ ಎಂಬ ಹೆಮ್ಮೆಯೂ ಇದೆ. ಈ ಚಿತ್ರದಲ್ಲಿ ಪುನಃ ಅವರು ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಯಾರೋ ಕೇಳಿದರಂತೆ, ನಿಮಗೆ ಪೊಲೀಸ್‌ ಪಾತ್ರಗಳಲ್ಲೇ ಕಾಣಿಸಿಕೊಂಡು ಬೋರ್‌ ಆಗುವುದಿಲ್ಲವಾ ಎಂದು? “ಬರೀ ಕನ್ನಡವಷ್ಟೇ ಅಲ್ಲ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ 50 ಸಿನಿಮಾಗಳಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೀನಿ. ಬೋರ್‌ ಆದರೆ, ಸತ್ತು ಹೋಗ್ತಿàನಿ. ಇಲ್ಲಿ ಪೊಲೀಸ್‌ ಆದರೂ, ನಾನು ಹೀರೋ ಅಷ್ಟೇ. ಹೀರೋ ಗಣೇಶ್‌. ಇದು ರೀಮೇಕ್‌ ಆದರೂ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಮನರಂಜನೆ ಜೊತೆಗೆ ಸಾಕಷ್ಟು ಎಮೋಷನ್‌ಗಳಿವೆ’ ಎಂಬುದು ಸಾಯಿಕುಮಾರ್‌ ಅವರ ಅಭಿಪ್ರಾಯ.

Advertisement

ಎಸ್‌.ವಿ. ಬಾಬು ಈ ಚಿತ್ರದ ನಿರ್ಮಾಪಕರಷ್ಟೇ ಅಲ್ಲ, ವಿತರಕರೂ ಹೌದು. ಎಸ್‌.ವಿ. ಡಿಸ್ಟ್ರಿಬ್ಯೂಟರ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅವರು ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.

“ಗಣೇಶ್‌ ಅವರು ಈ ಸಿನಿಮಾದಲ್ಲಿ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಅವರ ನಟನೆ ನೋಡಿ ನಾನು ಫಿದಾ ಆದೆ. ಆ ಖುಷಿಯನ್ನು ಹಂಚಿಕೊಳ್ಳಲು ಮಧ್ಯರಾತ್ರಿ ಫೋನ್‌ ಮಾಡಿ ಅವರನ್ನು ಎಬ್ಬಿಸಿದೆ. ಖಂಡಿತಾ ಈ ಸಿನಿಮಾ ದೊಡ್ಡ ಹಿಟ್‌ ಆಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಬಾಬು.

“ಪಟಾಕಿ’ ಚಿತ್ರವನ್ನು ಎಲ್ಲರಿಗೂ ಮುಟ್ಟಿಸುವುದಕ್ಕೆ ಚಿತ್ರತಂಡವು ಸಾಕಷ್ಟು ಪ್ರಚಾರ ಮಾಡುತ್ತಿದೆ. ಇನ್ನು ಚಿತ್ರದ ಬಗೆಗಿನ ಸಂಪೂರ್ಣ ಮಾಹಿತಿ ನೀಡಲು ಆ್ಯಪ್‌ವೊಂದನ್ನು ಕೂಡಾ “ಪಟಾಕಿ’ ತಂಡ ಹೊರತಂದಿದೆ.

ಈ ಚಿತ್ರದಲ್ಲಿ ಚಿತ್ರದ ಸಂಪೂರ್ಣ ವಿವರ ಸಿಗಲಿದೆ. ಈ ಚಿತ್ರದಲ್ಲಿ ಗಣೇಶ್‌ ಹಾಗೂ ಸಾಯಿಕುಮಾರ್‌ ಜೊತೆಗೆ ರನ್ಯಾ ರಾವ್‌, ಪ್ರಿಯಾಂಕಾ, ಅಲೋಕ್‌, ವಿಜಯ್‌ ಚೆಂಡೂರ್‌, ಸಾಧು ಕೋಕಿಲ, ಆಶೀಶ್‌ ವಿದ್ಯಾರ್ಥಿ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತ, ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣ ಮತ್ತು ಎನ್‌.ಎಂ. ವಿಶ್ವ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next