Advertisement

ಐಪಿಎಲ್‌ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್

11:12 PM Apr 06, 2022 | Team Udayavani |

ಪುಣೆ: ಬುಧವಾರ ಬಹುತೇಕ ಏಕಪಕ್ಷೀಯವಾಗಿ ನಡೆದ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡ 5 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿದೆ.

Advertisement

ಇಲ್ಲಿಗೆ ಮುಂಬೈ ಸೋಲಿನಾಟ ಮುಂದುವರಿದರೆ, ಕೋಲ್ಕತ ಗೆಲುವಿನೋಟವೂ ಮುಂದುವರಿಯಿತು.

ಮೊದಲು ಬ್ಯಾಟ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟಿಗೆ 161 ರನ್ನು ಗಳಿಸಿತು. ಇದನ್ನು ಬೆನ್ನತ್ತಿದ ಕೋಲ್ಕತ 16 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್‌ ಚಚ್ಚಿತು.

ಕೋಲ್ಕತ ಇನಿಂಗ್ಸ್‌ನಲ್ಲಿ ವೆಂಕಟೇಶ್‌ ಐಯ್ಯರ್‌ ಮತ್ತು ಪ್ಯಾಟ್‌ ಕಮಿನ್ಸ್‌ ಅಬ್ಬರದ ಆಟವಾಡಿದರು. ಐಯ್ಯರ್‌ 41 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 50 ರನ್‌ ಚಚ್ಚಿದರು. ಕಮಿನ್ಸ್‌ ಕೇವಲ 15 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್‌ ನೆರವಿನಿಂದ 56 ರನ್‌ ಚಚ್ಚಿದರು. ಇವರಿಬ್ಬರ ಮುಂದೆ ಮುಂಬೈ ಬೌಲಿಂಗ್‌ ಪೂರ್ಣ ಸೊರಗಿತು.

ಮುಂಬೈ ಪರ ಮಿಂಚಿದ ಸೂರ್ಯ, ಪೊಲಾರ್ಡ್‌: ಮೊದಲು ಬ್ಯಾಟ್‌ ಮಾಡಿದ ಮುಂಬೈ ಪರ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮ ಮತ್ತು ಕೊನೆ ಹಂತದಲ್ಲಿ ಕೈರನ್‌ ಪೋಲಾರ್ಡ್‌ ಬಿರುಸಿನ ಆಟವಾಡಿದರು.

Advertisement

ಆರಂಭದ ಕುಸಿತದ ಬಳಿಕ ತಂಡವನ್ನು ಆಧರಿಸಿದ ಸೂರ್ಯಕುಮಾರ್‌ ಯಾದವ್‌ ಮತ್ತು ತಿಲಕ್‌ ವರ್ಮ ಅವರು ನಿಧಾನಗತಿಯಲ್ಲಿ ತಂಡದ ಮೊತ್ತ ಏರಿಸುವತ್ತ ಪ್ರಯತ್ನಿಸಿದರು. ಸುಮಾರು 9 ಓವರ್‌ ಆಡಿದ ಅವರಿಬ್ಬರು ನಾಲ್ಕನೇ ವಿಕೆಟಿಗೆ 83 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು.

ಅನ್ಮೋಲ್‌ಪ್ರೀತ್‌ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ಸೂರ್ಯಕುಮಾರ್‌ ಯಾದವ್‌ ಎಚ್ಚರಿಕೆಯ ಆಟವಾಡಿದರು. ಕೋಲ್ಕತ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಒಟ್ಟು 36 ಎಸೆತ ಎದುರಿಸಿ, 5 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 52 ರನ್‌ ಹೊಡೆದರು. ಇನಿಂಗ್ಸ್‌ನ ಅಂತಿಮ ಓವರಿನ ಮೊದಲ ಎಸೆತದಲ್ಲಿ ಅವರು ಕಮಿನ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಆಬಳಿಕ ಬಂದ ಪೋಲಾರ್ಡ್‌ ಬಿರುಸಿನ ಆಟವಾಡಿ ಕೇವಲ 5 ಎಸೆತಗಳಿಂದ 3 ಭರ್ಜರಿ ಸಿಕ್ಸರ್‌ ಸಹಿತ 22 ರನ್‌ ಹೊಡೆದರು.

ಸೂರ್ಯಕುಮಾರ್‌ಗೆ ಉತ್ತಮ ಬೆಂಬಲ ನೀಡಿದ ತಿಲಕ್‌ ವರ್ಮ ಈ ಪಂದ್ಯದಲ್ಲಿಯೂ ಗಮನಾರ್ಹ ನಿರ್ವಹಣೆ ನೀಡಿದರು. 27 ಎಸೆತ ಎದುರಿಸಿದ್ದ ಅವರು 3 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 38 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಮುಂಬೈ ತಂಡದ ಆರಂಭ ಈ ಪಂದ್ಯದಲ್ಲಿಯೂ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್‌ ಇಲ್ಲಿಯೂ ಉತ್ತಮ ಆಟ ಪ್ರದರ್ಶಿಸಲು ವಿಫ‌ಲರಾದರು. ಕೆಕೆಆರ್‌ನ ಯಶಸ್ವಿ ಬೌಲರ್‌ ಉಮೇಶ್‌ ಯಾದವ್‌ ಆರಂಭದಲ್ಲಿಯೇ ಮುಂಬೈ ನಾಯಕನ ವಿಕೆಟ್‌ ಹಾರಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಇಶಾನ್‌ ಕಿಶನ್‌ ಅವರನ್ನು ಸೇರಿಕೊಂಡ ಡೆವಾಲ್ಡ್‌ ಬ್ರೆವಿಸ್‌ ದ್ವಿತೀಯ ವಿಕೆಟಿಗೆ 39 ರನ್‌ ಪೇರಿಸಿದರು. ಈ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆಗೈದ ಬ್ರೆವಿಸ್‌ 29 ರನ್‌ ಗಳಿಸಿ ವರುಣ್‌ಗೆ ವಿಕೆಟ್‌ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲಿ ತಂಡ ಕಿಶನ್‌ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು.

ಉಮೇಶ್‌ ಈ ಪಂದ್ಯದಲ್ಲಿಯೂ ಬಿಗು ದಾಳಿ ಸಂಘಟಿಸಿದ್ದರು. ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 25 ರನ್‌ ನೀಡಿದ್ದ ಅವರು ರೋಹಿತ್‌ ಅವರ ಅಮೂಲ್ಯ ವಿಕೆಟ್‌ ಹಾರಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ 20 ಓವರ್‌, 161/4 (ಸೂರ್ಯಕುಮಾರ್‌ 52, ತಿಲಕ್‌ವರ್ಮ 38, ಕೈರನ್‌ ಪೊಲಾರ್ಡ್‌ 22, ಪ್ಯಾಟ್‌ ಕಮಿನ್ಸ್‌ 49ಕ್ಕೆ 2). ಕೋಲ್ಕತ 16 ಓವರ್‌, 162/5 (ವೆಂಕಟೇಶ್‌ ಐಯ್ಯರ್‌ 50, ಪ್ಯಾಟ್‌ ಕಮಿನ್ಸ್‌ 56, ಎಂ.ಅಶ್ವಿ‌ನ್‌ 25ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next