Advertisement

ಟೆಕ್ಕಿಯ ಬದುಕನ್ನು ಪಾಸ್‌ವರ್ಡ್‌ ಬದಲಿಸಿತು!

03:00 PM May 30, 2017 | Harsha Rao |

ಬದುಕಿನಲ್ಲಿ ಎಲ್ಲವನ್ನೂ ಕಳಕೊಂಡ ಟೆಕ್ಕಿಯೊಬ್ಬ “ಪಾಸ್‌ವರ್ಡ್‌’ ಎಂಬ ಮಾಯಾಕ್ಷರಗಳ ಮೂಲಕ ಪುನಃ ಎಲ್ಲವನ್ನೂ ಸಂಪಾದಿಸಿದ ಕತೆಯಿದು. ಮನಸ್ಸು, ಛಲವೊಂದಿದ್ದರೆ ಗೆಲುವಿಗೆ ನಮ್ಮ ವಿಳಾಸ ತುಂಬಾ ಸಲೀಸಾಗಿ ಸಿಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿ…

Advertisement

ಅವಳು ಏಕೆ ಹಾಗೆ ಮಾಡಿದಳು? ಪ್ರತಿ ಕ್ಷಣ, ಪ್ರತಿ ದಿನ ಈ ಪ್ರಶ್ನೆ ನನ್ನೊಳಗೆ ಲಾಗಾಪಲ್ಟಿ ಹಾಕುತ್ತಿತ್ತು. ಹೆಂಡತಿ ನನಗೆ ಡೈವೋರ್ಸ್‌ ಕೊಟ್ಟ ಮರುದಿನವೂ ನನ್ನೊಳಗೆ ನೋವು ಹೊತ್ತಿ ಉರಿಯುತ್ತಿತ್ತು. ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದ ನನಗೆ ನನ್ನ ಬಾಳಿನಲ್ಲಿ “ಡೈವೋರ್ಸ್‌ ವೈರಸ್‌’ ನುಗ್ಗಲು ಕಾರಣ ಏನೆಂಬುದೇ ತಿಳಿಯದೆ, ತಲೆ ಗಿರ್ರೆಂದಿತ್ತು. ಆ ತಲೆಬಿಸಿಯಲ್ಲೇ ಆಫೀಸಿಗೆ ಹೋಗಿದ್ದೆ.

ನನ್ನ ಉದ್ಯೋಗದ ದಿನಚರಿ ಆರಂಭಗೊಳ್ಳುವುದು ಕಂಪ್ಯೂಟರಿನಿಂದಲೇ. ಅದನ್ನು ಆನ್‌ ಮಾಡಿದಾಗ, “ನಿಮ್ಮ ಪಾಸ್‌ವರ್ಡ್‌ ಅವಧಿ ಮುಗಿದಿದೆ. ದಯವಿಟ್ಟು ಪಾಸ್‌ವರ್ಡ್‌ ಬದಲಿಸಿ’ ಎಂಬ ಸಂದೇಶ ಕಂಪ್ಯೂಟರಿನ ಪರದೆ ಮೇಲೆ ಮೂಡಿತು. ನಾನು ಮೈಕ್ರೋಸಾಫ್ಟ್ ಎಕ್ಸ್‌ಚೇಂಜ್‌ ಸರ್ವರ್‌ನಲ್ಲಿ ಕೆಲಸ ಮಾಡುವವನು. ಪ್ರತಿ 30 ದಿನಗಳಿಗೊಮ್ಮೆ ಇಲ್ಲಿ ಪಾಸ್‌ವರ್ಡ್‌ ಬದಲಿಸುವುದು ಕಡ್ಡಾಯ.

“ಯಾವ ಪಾಸ್‌ವರ್ಡ್‌ ಕೊಡಲಿ?’ ಅಂತ ಒಂದೈದು ನಿಮಿಷ ಆಲೋಚಿಸಿದೆ. ಹಾಗೆ ಆಲೋಚಿಸುವಾಗಲೂ ಕಣ್ಣೆದುರು ಬಂದಿದ್ದು, ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ನಡೆದ ಹೆಂಡತಿಯೇ! ಇನ್ನು ಸಾಕು, ಇವಳ ನೆನಪು ಎಂದುಕೊಂಡು “Forgive@h3r’ ಎಂಬ ಪಾಸ್‌ವರ್ಡ್‌ ನೀಡಿದೆ. ಸ್ಕ್ರೀನ್‌ ಸೇವರ್‌ನಲ್ಲಿದ್ದ ಆಕೆಯ ಭಾವಚಿತ್ರದ ಮೇಲೆ ದೃಷ್ಟಿ ಚೆಲ್ಲಿತು. ಅದನ್ನು ಮೊದಲು ಡಿಲೀಟ್‌ ಮಾಡಿ, ಸುಂದರ ಹೂವಿನ ಚಿತ್ರ ಹಾಕಿಕೊಂಡೆ. ಕೆಲಸದ ನಡುವೆ ಕಾಫಿಗೆ, ಲಂಚ್‌ ಬ್ರೇಕ್‌ಗೆ, ಸಿಗರೇಟ್‌ಗೆ ಅಂತ ಆಗಾಗ್ಗೆ ಎದ್ದು ಹೋಗುತ್ತಲೇ ಇರುತ್ತೇನೆ. ಮತ್ತೆ ಬಂದಾಗ ನನ್ನ ಕಂಪ್ಯೂಟರ್‌ ಅದೇ ಪಾಸ್‌ವರ್ಡ್‌ ಅನ್ನೇ ಕೇಳುತ್ತಿತ್ತು. ಹಾಗೆ ನಿತ್ಯ ಐದಾರು ಬಾರಿಯಂತೆ, ಮೂವತ್ತು ದಿನ “Forgive@h3r’ ಅಂತಲೇ ಟೈಪಿಸುತ್ತಾ ಹೋದೆ. ನಿಧಾನಕ್ಕೆ ಅವಳ ನೆನಪನ್ನು ಮರೆಯಲು ಗುಪ್ತಾಕ್ಷರ (ಪಾಸ್‌ವರ್ಡ್‌) ನೆರವಾಗುತ್ತಿತ್ತು. ಹಾಗೆ ಟೈಪಿಸುವಾಗ, ಹಿಂದೆ ಆಕೆಯೊಂದಿಗೆ ಕಳೆದ ದೃಶ್ಯಗಳೆಲ್ಲ ನನ್ನ ಮನಸ್ಸಿನಿಂದ ಅಳಿಸಿ ಹೋಗುತ್ತಿದ್ದವು. ಹೃದಯದ ಪ್ರತಿ ಬಡಿತವೂ “Forgive her’ ಎನ್ನುತ್ತಿತ್ತು.

ಒಂದು ತಿಂಗಳಾಗುವ ಹೊತ್ತಿಗೆ, ನಾನು ಆಕೆಯನ್ನು ಸಂಪೂರ್ಣವಾಗಿ ಮರೆತಿದ್ದೆ!
ಮತ್ತೆ ಮರು ತಿಂಗಳು… ಕಂಪ್ಯೂಟರಿನಲ್ಲಿ ಪುನಃ “ನಿಮ್ಮ ಪಾಸ್‌ವರ್ಡ್‌ ಅವಧಿ ಮುಗಿದಿದೆ. ದಯವಿಟ್ಟು ಪಾಸ್‌ವರ್ಡ್‌ ಬದಲಿಸಿ’ ಎಂಬ ಸಂದೇಶ ಬಂತು. ಬದುಕು ಹೀಗಾಯ್ತಲ್ಲ ಎಂಬ ಚಿಂತೆಯಲ್ಲಿ ನನಗೆ ಸಿಗರೇಟಿನ ಚಟ ಅಂಟಿಕೊಂಡಿತ್ತು. ಆ ಹೊತ್ತಿನಲ್ಲಿ ಧೂಮಪಾನದ ಮೇಲೆ ಕೋಪ ಉಕ್ಕಿ “Quit@smoking4ever’ ಎಂಬ ಪಾಸ್‌ವರ್ಡ್‌ ಕೊಟ್ಟೆ. ಹಾಗೆ ಪಾಸ್‌ವರ್ಡ್‌ ಕೊಟ್ಟ ಮೇಲೆ, ಮೂವತ್ತು ದಿನ ಸಿಗರೇಟು ಸೇದಲು ಹೋಗಲಿಲ್ಲ. ಆಮೇಲೆ, ಮತ್ತೆಂದೂ ಸಿಗರೇಟನ್ನು ಮುಟ್ಟಲು ಮನಸ್ಸಾಗಲಿಲ್ಲ.

Advertisement

ಮತ್ತೆ ಮರು ತಿಂಗಳು… ಮನಸ್ಸು ಬಹಳ ತಾಜಾ ಆಗಿತ್ತು. ಎಲ್ಲಾದರೂ ಟ್ರಿಪ್‌ ಹೋಗೋಣ ಅಂತನ್ನಿಸಿತ್ತು. ಎದುರಿದ್ದ ಕಂಪ್ಯೂಟರ್‌ ಪುನಃ ಹೊಸ ಪಾಸ್‌ವರ್ಡ್‌ ಕೇಳಿತ್ತು. ಈ ಬಾರಿ “Save4trip@thailand’ ಎಂಬ ಗುಪ್ತಾಕ್ಷರ ನೀಡಿದೆ. ಅನಗತ್ಯ ಖರ್ಚಿಗೆ ಮುಕ್ತಿಹಾಡಿ, ದಿನವೂ ಒಂದಿಷ್ಟು ಹಣವನ್ನು ಪ್ರವಾಸಕ್ಕಾಗಿ ಮೀಸಲಿಟ್ಟೆ. ತಿಂಗಳು ಮುಗಿಯುವ ಹೊತ್ತಿಗೆ, ಪ್ರವಾಸಕ್ಕೆ ಅಗತ್ಯವಿರುವಷ್ಟು ಹಣ ನನ್ನ ಖಾತೆಯಲ್ಲಿತ್ತು. ವಾರದ ಮಟ್ಟಿಗೆ ಕಚೇರಿ, ಕೆಲಸವನ್ನೆಲ್ಲ ಮರೆತು, ಜಾಲಿ ಆಗಿ ಹೋಗಿಬಂದೆ.

ಮತ್ತೆ ಮರು ತಿಂಗಳು. ಕಚೇರಿಗೆ ಹೋದಾಗ, ಸುಂದರವಿದ್ದ ಹೊಸ ಹುಡುಗಿಯೊಬ್ಬಳು ನನ್ನ ಪಕ್ಕದಲ್ಲೇ ಬಂದು ಕುಳಿತಿದ್ದಳು. ಅವಳನ್ನೇ ನೋಡುತ್ತಾ, ಕಂಪ್ಯೂಟರ್‌ ಆನ್‌ ಮಾಡಿದೆ. ಆ ತಿಂಗಳು ಪುನಃ ನಾನು ಹೊಸ ಪಾಸ್‌ವರ್ಡ್‌ ನೀಡಬೇಕಿತ್ತು. “Ask@her4date’ ಎಂಬ ಗುಪ್ತಾಕ್ಷರ ನೀಡಿದೆ. ಹಾಗೆ ದಿನಾ ಪಾಸ್‌ವರ್ಡ್‌ ನೀಡುವಾಗಲೆಲ್ಲ, ಆಕೆಯತ್ತ ನೋಡಿ ನಗು ಬೀರುತ್ತಿದ್ದೆ. ಇಬ್ಬರೂ ಕಾಫಿಗೆ ಹೋಗುತ್ತಿದ್ದೆವು. ಕಚೇರಿಯಿಂದ ಒಟ್ಟಿಗೆ ಹೊರಡುತ್ತಿದ್ದೆವು. ತಿಂಗಳಾಂತ್ಯದಲ್ಲಿ ಅವಳು ನನ್ನ ಪ್ರೀತಿಯನ್ನು ಒಪ್ಪಿದ್ದಳು. ನನಗೀಗ ಹೊಸ ಸಂಗಾತಿ ಸಿಕ್ಕಿದ್ದಾಳೆ. ಅವಳು ನನ್ನ ಬಾಳನ್ನು ಬೆಳಗುತ್ತಿದ್ದಾಳೆ!

ಇದೇ ರೀತಿ ನಾನು ಕೊಡುತ್ತಲೇ ಹೋದ ಹೊಸ ಪಾಸ್‌ವಡ್‌ಗಳುì ನನ್ನಲ್ಲಿ ಹಲವು ಬದಲಾವಣೆ ತಂದಿದ್ದವು; No@drinking2months ಎಂಬ ಗುಪ್ತಾಕ್ಷರ ನನ್ನ ಕುಡಿತ ಚಟವನ್ನು ಬಿಡಿಸಿತ್ತು. Facetime2mom@sunday ಎಂಬ ಪಾಸ್‌ವರ್ಡ್‌ನಿಂದ ಅಮ್ಮನನ್ನು ಹೆಚ್ಚೆಚ್ಚು ಪ್ರೀತಿಸುತ್ತಾ ಹೋದೆ. Save4@house ಎಂಬ ಗುಪ್ತಾಕ್ಷರದಿಂದ ಅಪಾರ್ಟ್‌ಮೆಂಟ್‌ ಖರೀದಿಸಿದೆ.

ಹೀಗೆ ಪ್ರತಿ ತಿಂಗಳು ಬದಲಾಗುವ ಪಾಸ್‌ವರ್ಡ್‌ಗಳು ನನ್ನ ಬದುಕನ್ನು ಬದಲಿಸಿದವು. ಅವನತಿಯಲ್ಲಿದ್ದ ನನಗೆ ಔನ್ನತ್ಯ ತಂದುಕೊಟ್ಟವು. ಈಗ ನನ್ನ ಬದುಕಿನಲ್ಲಿ ಆಶಾಕಿರಣ ಉದಯಿಸಿದೆ. ನಾನು ಗೆಲ್ಲುತ್ತಿದ್ದೇನೆ. ಇನ್ನೂ ಗೆಲ್ಲುತ್ತೇನೆ… ಇದೇ ಪಾಸ್‌ವರ್ಡ್‌ ಮೂಲಕವೇ!

– ಸಾಂದೀಪನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next